ಸಾರಾಂಶ
ಮಹಾನ್ ವ್ಯಕ್ತಿಗಳ ಜನ್ಮ ದಿನಾಚರಣೆಯಲ್ಲಿ ಅವರ ಮಾರ್ಗದರ್ಶನ, ವ್ಯಕ್ತಿತ್ವ, ಜೀವನದ ತತ್ವಾದರ್ಶಗಳನ್ನು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಸರ್ಕಾರದಿಂದ ಜಯಂತಿಗಳನ್ನು ಆಚರಿಸಲಾಗುತ್ತದೆ.
ಕಾರವಾರ: ಮಹಾನ್ ವ್ಯಕ್ತಿಗಳ ಜನ್ಮ ದಿನಾಚರಣೆಯಲ್ಲಿ ಅವರ ಮಾರ್ಗದರ್ಶನ, ವ್ಯಕ್ತಿತ್ವ, ಜೀವನದ ತತ್ವಾದರ್ಶಗಳನ್ನು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಸರ್ಕಾರದಿಂದ ಜಯಂತಿಗಳನ್ನು ಆಚರಿಸಲಾಗುತ್ತದೆ. ಇಂತಹ ಮೇಧಾವಿಗಳ ಜಯಂತಿಗಳನ್ನು ಆಚರಣೆಗೆ ಸೀಮಿತ ಮಾಡದೇ ಅಂತಹವರ ಜೀವನವನ್ನು ಅನುಕರಣೆ ಮಾಡುವ ಮೂಲಕ ಉತ್ತಮ ವ್ಯಕ್ತಿಗಳಾಗಿ ಜೀವನ ರೂಪಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಡಾ.ಬಾಬು ಜಗಜೀವನರಾಮ 118ನೇ ಜಯಂತಿ ಅಂಗವಾಗಿ ಬಾಬು ಜಗಜೀವನರಾಮ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಬಾಬು ಜಗಜೀವನರಾಮ, ಡಾ.ಅಂಬೇಡ್ಕರ್ ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿನ ಆಸ್ಪೃಶ್ಯತೆ ನಿವಾರಣೆ ಹಾಗೂ ದಮನಿತರ ಏಳಿಗೆಗಾಗಿ ಸಮಾಜದಲ್ಲಿ ಸುಧಾರಣೆ ತಂದ ಮಹಾನ್ ನಾಯಕರು. ಶೋಷಣೆಗೆ ಒಳಗಾಗಿ ಅದರ ವಿರುದ್ಧ ಹೋರಾಡುವ ಮೂಲಕ ಸಮಾಜದಲ್ಲಿ ಮಹಾನ್ ವ್ಯಕ್ತಿಗಳಾಗಿ ಹೊರ ಹೊಮ್ಮಿದ ಇಂತಹ ಮೇಧಾವಿಗಳ ವ್ಯಕ್ತಿತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದೆಗುಂದದೇ ಎದುರಿಸುವಂತಾರಬೇಕು ಎಂದರು.ಜಿಪಂ ಆಡಳಿತ ವಿಭಾಗದ ಉಪ ಕಾರ್ಯದರ್ಶಿ ನಾಗೇಶ ರಾಯ್ಕರ ಮಾತನಾಡಿ, 1967ರಿಂದ 1971ರ ಅವಧಿಯಲ್ಲಿ
ದೇಶದಲ್ಲಿ ಭೀಕರ ಬರಗಾಲ ಸಂಭವಿಸಿದಾಗ ಕೃಷಿಯಲ್ಲಿ ಸ್ವಾವಲಂಬನೆಗಾಗಿ ಹಲವಾರು ವಿನೂತನ ಕಾರ್ಯಕ್ರಮವನ್ನು ರೂಪಿಸಿ ಗಣನೀಯ ಸೇವೆ ಸಲ್ಲಿಸಿದ್ದಕ್ಕಾಗಿ ಅವರನ್ನು ಹಸಿರು ಕ್ರಾಂತಿಯ ಹರಿಕಾರ ಎಂದು ಕರೆಯಲಾಗುತ್ತದೆ. ಇವರು ಉಳುವವರಿಗೆ ಭೂಮಿ, ಮದ್ಯಪಾನ ನಿಷೇಧ, ಅಸ್ಪೃಶ್ಯತೆ ನಿರ್ವಹಣೆ ಮತ್ತು ಕಾರ್ಮಿಕರಿಗೆ ಕನಿಷ್ಠ ಕೂಲಿ ನಿಗದಿ ಪಡಿಸಿ ಮೂಲಕ ಬಡ ಜನರಿಗೆ ಹಾಗೂ ಕಾರ್ಮಿಕರ ಏಳಿಗೆಗಾಗಿ ಶ್ರಮಿಸಿದ್ದಾರೆ. ಇವರ ಸಮಾಧಿ ಸ್ಥಳವನ್ನು ಸಮತಾ ಸ್ಥಳ ಹಾಗೂ ಅವರ ಜಯಂತಿಯನ್ನು ಸಮತಾ ದಿನಾಚರಣೆಯಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.ಅಂಕೋಲಾದ ಕೆಎಲ್‌ಇ ಬಿ.ಎಡ್ ಕಾಲೇಜಿನ ಉಪನ್ಯಾಸಕ ಮಂಜುನಾಥ ಇಟಗಿ ಉಪನ್ಯಾಸ ನೀಡಿದರು. ಜಿಪಂ ಅಭಿವೃದ್ಧಿ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಾಲ ನಾಯ್ಕ, ನಗರಸಭೆ ಸದಸ್ಯ ಹನುಮಂತಪ್ಪ ತಳವಾರ, ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ದೀಪಕ ಕುಡಾಳಕರ ಇದ್ದರು.