ಕನಕದಾಸರು ತಮ್ಮ ಕೀರ್ತನೆಗಳು ಮೂಲಕ ಸಮಾಜ ತಿದ್ದುವ ಕಾರ್ಯ ಮಾಡಿದರು. ಕನಕದಾಸರ ತತ್ವಾದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ
ಕನಕದಾಸರು ತಮ್ಮ ಕೀರ್ತನೆಗಳು ಮೂಲಕ ಸಮಾಜ ತಿದ್ದುವ ಕಾರ್ಯ ಮಾಡಿದರು. ಕನಕದಾಸರ ತತ್ವಾದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹುಲ್ಲೂರಿನ ಅಮೋಘಿಮಠದ ಸಿದ್ದಯ್ಯ ಶ್ರೀಗಳು ಹೇಳಿದರು.ಭಾನುವಾರ ಪಟ್ಟಣದಲ್ಲಿ ಕುರುಬ ಸಮಾಜದ ವತಿಯಿಂದ ಆಯೋಜಿಸಿದ್ದ ಕನಕದಾಸ ಜಯಂತಿ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕನಕದಾಸರು ತಮ್ಮ ಚಂತನೆಗಳನ್ನು ನಾವೆಲ್ಲ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು. ಕನಕದಾಸರ ಆದರ್ಶ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ಮೂಲಕ ಅವರನ್ನು ಸಮಾಜದ ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು. ಪ್ರತಿಯೊಬ್ಬರೂ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬದುಕುವ ಜೊತೆಗೆ, ತಮ್ಮ ಬದುಕನ್ನು ಪರೋಪಕಾರಕ್ಕಾಗಿ ಮುಡಿಪಾಗಿಡಬೇಕು ಎಂದು ಹೇಳಿದರು.ಪಟ್ಟಣದ ಬಸಾಪೂರ ಓಣಿಯಿಂದ ಆರಂಭವಾದ ಮೆರವಣಿಗೆಯಲ್ಲಿ ಎತ್ತಿನಬಂಡಿಯಲ್ಲಿ ಕನಕದಾಸರ ಮೂರ್ತಿ ಹಾಗೂ ಟ್ರ್ಯಾಕ್ಟರ್ಗಳಲ್ಲಿ ಕನಕದಾಸರ ಭಾವಚಿತ್ರ ಪ್ರತಿಷ್ಠಾಪಿಸಲಾಗಿತ್ತು. ಡೊಳ್ಳು ವಾದ್ಯ ಸೇರಿದಂತೆ ವಿವಿಧ ಜನಪದ ವಾದ್ಯ ವೈಭವಗಳೊಂದಿಗೆ ಮೆರವಣಿಗೆಯು ಅತ್ಯಂತ ಅದ್ಧೂರಿಯಾಗಿ ಜರುಗಿತು.
ಮೆರವಣಿಗೆಯು ಪ್ಯಾಟಿಕೆರಿ ಓಣಿ, ಬಜಾರ್ ರಸ್ತೆ, ಹಾವಳಿ ಹನಮಂತ ದೇವಸ್ಥಾನದ ಮಾರ್ಗವಾಗಿ ಸಂಚರಿಸಿ, ಮ್ಯಾಗೇರಿ ಓಣಿಯ ಬೀರೇಶ್ವರ ದೇವಸ್ಥಾನ ತಲುಪಿ ಸಂಪನ್ನಗೊಂಡಿತು.ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ವಿ.ಜಿ. ಪಡಗೇರಿ, ಮುಖಂಡರಾದ ನಿಂಗಪ್ಪ ಬನ್ನಿ, ನೀಲಪ್ಪ ಪೂಜಾರ, ಗಂಗಪ್ಪ ದುರಗಣ್ಣವರ, ಸಿದ್ದಪ್ಪ ಗದ್ದಿ, ದೇವಪ್ಪ ಉಳ್ಳಟ್ಟಿ, ಹರೀಶ ಲಕ್ಷ್ಮೇಶ್ವರ, ಶೇಖಪ್ಪ ಬಿಂಗಿ, ಭರಮಪ್ಪ ಶೇರಸೂರಿ, ಲೆಂಕಪ್ಪ ಶೇರಸೂರಿ, ರಾಮಣ್ಣ ರಿತ್ತಿ, ತಿಪ್ಪಣ್ಣ ಸಂಶಿ, ಹನಮಂತಪ್ಪ ಹುರಕನವರ, ಶಿವಾನಂದ ಉಳ್ಳಟ್ಟಿ, ನೀಲಪ್ಪ ಪಾಟೀಲ, ಯಂಕಣ್ಣ ಬಸಾಪುರ, ಬಸಣ್ಣ ಟೋಕಾಳಿ, ಸಿದ್ದಪ್ಪ ಕರಿಗಾರ, ಬಸಪ್ಪ ಗುಡಗುಂಟಿ, ನಾಗಪ್ಪ ಕೋರಿ ಸೇರಿದಂತೆ ಸಮಾಜದ ಹಲವಾರು ಗಣ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.