ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದ ಪುರಾತನ ದೇವಸ್ಥಾನವಾದ ಮಾರುತೇಶ್ವರ ಕಾರ್ತೀಕ ಮಹೋತ್ಸವ ನ. 30ರಂದು ಅಪಾರ ಭಕ್ತ ಸಮೂಹದ ಮಧ್ಯೆ ಜರುಗಲಿದೆ. ಇಡೀ ಮಸಬಹಂಚಿನಾಳ ಗ್ರಾಮ ಮಾರುತೇಶ್ವರ ಕಾರ್ತೀಕ ಮಹೋತ್ಸವಕ್ಕೆ ಅಣಿಯಾಗಿದೆ.
ಅಮರೇಶ್ವರಸ್ವಾಮಿ ಕಂದಗಲ್ಲಮಠ
ಕುಕನೂರು: ತಾಲೂಕಿನ ಮಸಬಹಂಚಿನಾಳ ಗ್ರಾಮದ ಪುರಾತನ ದೇವಸ್ಥಾನವಾದ ಮಾರುತೇಶ್ವರ ಕಾರ್ತೀಕ ಮಹೋತ್ಸವ ನ. 30ರಂದು ಅಪಾರ ಭಕ್ತ ಸಮೂಹದ ಮಧ್ಯೆ ಜರುಗಲಿದೆ. ಇಡೀ ಮಸಬಹಂಚಿನಾಳ ಗ್ರಾಮ ಮಾರುತೇಶ್ವರ ಕಾರ್ತೀಕ ಮಹೋತ್ಸವಕ್ಕೆ ಅಣಿಯಾಗಿದೆ.ಈಗಾಗಲೇ ಗ್ರಾಮದಲ್ಲಿ ನಾನಾ ಧಾರ್ಮಿಕ ಕಾರ್ಯಗಳು ಸಹ ಜರುಗಿವೆ. ಮಾರುತೇಶ್ವರ ಕಾರ್ತೀಕ ಮಹೋತ್ಸವ ಅಂದರೆ ಇದೊಂದು ಈ ಭಾಗದ ಜನರ ಸಂತಸದ ಹಬ್ಬ. ಇದೊಂದು ಭಕ್ತಿಯ ಸಂಗಮ. ದೀಪ ಹಚ್ಚಿ ಜನ ಪುನೀತರಾಗುತ್ತಾರೆ. ಅಲ್ಲದೆ ಲಕ್ಷಾಂತರ ಭಕ್ತರಿಗೆ ಸಂಜೆಯಿಂದ ಬೆಳಗಿನ ಜಾವದ ವರೆಗೂ ಪ್ರಸಾದ ಸೇವೆ ಇರುತ್ತದೆ. 25 ಕ್ವಿಂಟಲ್ ಗೋದಿ ಹುಗ್ಗಿ, 25 ಕ್ವಿಂಟಲ್ ಅನ್ನ ಸಿದ್ಧಪಡಿಸಲಾಗುತ್ತದೆ.
ಐಹಿತ್ಯ: ಸದ್ಯ ಮಸಬಹಂಚಿನಾಳದಲ್ಲಿರುವ ಮಾರುತೇಶ್ವರ ಮೂರ್ತಿಯನ್ನು ಹಿಂದೆ ಇಟಗಿ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಪ್ರತಿಷ್ಠಾಪಿಸಲು ತೆಗೆದುಕೊಂಡು ಹೋಗುತ್ತಿದ್ದರು. ಮಸಬಹಂಚಿನಾಳ ಗ್ರಾಮಕ್ಕೆ ಮೂರ್ತಿ ಬಂದಾಗ ಅದು ಎಲ್ಲೂ ಕದಲದೆ ಈಗಿನ ಸ್ಥಳದಲ್ಲಿಯೇ ಉಳಿದು ಬಿಟ್ಟಿತು. ಇಟಗಿ ಗ್ರಾಮಸ್ಥರು ಹಗ್ಗ ಹಾಕಿ ಮೂರ್ತಿ ಜಗ್ಗಿದರೂ ಬರಲೇ ಇಲ್ಲ. ಅಂದಿನಿಂದ ಮಸಬಹಂಚಿನಾಳ ಗ್ರಾಮದಲ್ಲಿಯೇ ಮಾರುತೇಶ್ವರ ಸ್ವಾಮಿ ಪ್ರತಿಷ್ಠಾಪನೆ ಆದ. ನಂತರ ಮಸಬಹಂಚಿನಾಳ ಗ್ರಾಮಸ್ಥರು ಮಾರುತೇಶ್ವರ ದೇವರಿಗೆ ದೇವಸ್ಥಾನ ನಿರ್ಮಿಸಿ ಪೂಜೆ ಮಾಡುತ್ತಾ ಬಂದಿದ್ದಾರೆ. ವಿಶೇಷವೆಂಬಂತೆ ಎಲ್ಲ ಗ್ರಾಮದಲ್ಲಿ ಮಾರುತೇಶ್ವರ ದೇವರು ದಕ್ಷಿಣಾಭಿಮುಖವಾಗಿದ್ದರೆ ಮಸಬಹಂಚಿನಾಳ ಗ್ರಾಮದಲ್ಲಿ ಪಶ್ಚಿಮಾಭಿಮುಖಿಯಾಗಿದ್ದಾನೆ.ಮಹಿಮೆ: ಹಿಂದೆ ನಿಜಾಮರು ಕಾಲಾವಧಿಯಲ್ಲಿ ಅವರ ಸೈನಿಕರಾಗಿದ್ದ ಪಠಾಣರು ಮಸಬಹಂಚಿನಾಳ ಗ್ರಾಮದ ಮಾರುತೇಶ್ವರ ದೇವಸ್ಥಾನದ ಮೇಲೆ ದಾಳಿ ಮಾಡಬೇಕು ಎಂದು ನಿರ್ಧರಿಸಿ ಬರುತ್ತಿದ್ದಾಗ ಅವರ ಕಣ್ಣುಗಳು ಕತ್ತಲೆಯಿಂದ ಆವರಿಸಿತು. ಅಲ್ಲದೆ ಪಠಾಣರ ನಾಯಕ ದೇವಸ್ಥಾನ ಮೆಟ್ಟಿಲೇರಲು ಹೋಗಿ ಅಸುನೀಗಿದ ಎಂಬ ಪ್ರತೀತಿ ಸಹ ಇದೆ. ಆ ನಂತರ ಪಠಾಣರು ತಮ್ಮ ತಪ್ಪಿನ ಅರಿವಾಗಿ ಸ್ವಾಮಿಗೆ ಬೇಡಿಕೊಂಡು ಬೆಳ್ಳಿಯ ಸರ್ವಾನಿ ನೀಡಿದ್ದರು.
ಝಗಮಗಿಸುವ ಶಿಲಾ ದೇವಸ್ಥಾನ: ಗ್ರಾಮದ ಹಿರಿಯರು, ಭಕ್ತರು ಹಾಗೂ ಗ್ರಾಮದ ಮಾಜಿ ಸಚಿವ ಹಾಲಪ್ಪ ಆಚಾರ್ ಅವರು ದೇವಸ್ಥಾನ ಹಳೆಯದಾಗಿರುವುದನ್ನು ಮನಗಂಡರು. ಕಟ್ಟಿಗೆ ಕಂಬಗಳಿಂದ ಇದ್ದ ಈ ದೇವಸ್ಥಾನವನ್ನು ನವೀಕರಣ ಮಾಡಲು ತೀರ್ಮಾನಿಸಿದರು. ಸಂಕಲ್ಪದಂತೆ ದೇವಸ್ಥಾನ ನಿರ್ಮಾಣ ಮಾದರಿ ತಯಾರಿಸಿ ಕಳೆದ ನಾಲ್ಕು ವರ್ಷದ ಹಿಂದೆ ಹಳೆ ದೇವಸ್ಥಾನ ಕೆಡವಿ, ಕಲಾಕಾರರನ್ನು ಗುರುತಿಸಿ ತೀರ್ಮಾನ ಕಾರ್ಯಕೈಗೊಂಡರು. ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮಾರ್ಗದರ್ಶನದಂತೆ ದೇವಸ್ಥಾನವನ್ನು ಶಿಲೆಯಲ್ಲಿ ನಿರ್ಮಿಸಲು ತೀರ್ಮಾನಿಸಿದರು. ಅದರಂತೆ ಮಾರುತೇಶ್ವರ ದೇವಸ್ಥಾನವನ್ನು ಹಂಪಿಯಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ ಕಲ್ಲುಗಳಿಂದ ನಿರ್ಮಾಣ ಮಾಡಲಾಗುತ್ತಿದೆ.ಈಗಾಗಲೇ ಗರ್ಭಗುಡಿ, ದೇವಸ್ಥಾನ ಹಾಗೂ ಗೋಪುರ ನಿರ್ಮಾಣ ಮಾಡಲಾಗಿದೆ. ಶಿಲಾ ದೇವಸ್ಥಾನ ಜನಾಕರ್ಷಣೆ ಆಗಿದ್ದು, ಮಾದರಿ ರೀತಿಯಲ್ಲಿ ನಿರ್ಮಾಣವಾಗಿದೆ. ಇನ್ನೂ ನಾನಾ ಕಾರ್ಯ ಪ್ರಗತಿಯಲ್ಲಿವೆ.
ಭಕ್ತಿಯ ಕೇಂದ್ರ: ಮಾರುತೇಶ್ವರನಿಗೆ ಭಕ್ತಿ-ಭಾವದಿಂದ ಹರಕೆ ಕಟ್ಟಿಕೊಂಡು ದೇವಸ್ಥಾನದಲ್ಲಿ ಒಂದು ರಾತ್ರಿ ತಂಗಿದರೆ, ಸಮಸ್ಯೆಗಳು ಪರಿಹಾರ ಆಗುತ್ತವೆ. ಸದ್ಯ ಸಹ ಭಕ್ತರು ಆ ನಿಯಮ ಪಾಲಿಸುತ್ತಿದ್ದಾರೆ. ಅಲ್ಲದೆ ದೇವಸ್ಥಾನದಿಂದ ಅನತಿ ದೂರದಲ್ಲಿರುವ ಮಜ್ಜಲಬಾವಿಯಲ್ಲಿ ಸ್ನಾನ ಮಾಡಿಬಂದು ಬಂದು ಪೂಜಿಸಿದರೆ ಸಂಕಲ್ಪ ಈಡೇರುತ್ತದೆ. ಕಾರ್ತಿಕದ ದಿನದಂದು ಮಾರುತೇಶ್ವರ ದೇವರ ಅರ್ಚಕರಾದ ದಾಸಯ್ಯಜ್ಜ ಗ್ರಾಮದ ಪ್ರತಿ ಮನೆಗೆ ಹೋಗಿ ಗೋವಿಂದ ಎಂದ ಮೇಲಿಯೇ ಗ್ರಾಮಸ್ಥರು ಪ್ರಸಾದ ಸೇವೆ ಮಾಡುವ ಸಂಪ್ರದಾಯ ಸಹ ಇದೆ. ವಿಶೇಷವೆಂಬಂತೆ ಕಾರ್ತೀಕೋತ್ಸವ ನಿಮಿತ್ತ ಪೂರ್ವದಲ್ಲಿ ಗ್ರಾಮದ ಮಹಿಳೆಯರಿಗೆ ಬಳೆ ಇಡಿಸುವ ಸಂಪ್ರದಾಯ ಆಚರಣೆ ಸಹ ಇದೆ.ಕರುಣಾಮಯಿ ಸ್ವಾಮಿ: ಪುರಾತನ ದೇವಸ್ಥಾನ ಆಗಿದೆ. ದೇವಸ್ಥಾನದ ನವೀಕರಣ ಆಗಿದೆ. ಶಿಲೆಯಿಂದ ಕಟ್ಟಿದ ದೇವಸ್ಥಾನವಾಗಿದೆ. ನನ್ನ ತವರೂರಾದ ಮಸಬಹಂಚಿನಾಳ ಗ್ರಾಮದ ಮಾರುತೇಶ್ವರ ದೇವರು ಭಕ್ತರ ಪಾಲಿನ ಆರಾಧ್ಯ ದೈವ. ಇಷ್ಟಾರ್ಥ ಕಲ್ಪಿಸುವ ಕರುಣಾಮಯಿ ಸ್ವಾಮಿಯಾಗಿದ್ದಾನೆ. ಮಾರುತೇಶ್ವರ ಕಾರ್ತೀಕಕ್ಕೆ ರಾಜ್ಯದ ಹಲವೆಡೆಯಿಂದ ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುತ್ತಾರೆ ಎಂದು ಮಾಜಿ ಸಚಿವ, ಮಸಬಹಂಚಿನಾಳ ಗ್ರಾಮದ ಹಾಲಪ್ಪ ಆಚಾರ್ ಹೇಳಿದರು.