ಇಂದು ಮನೆಗಳು ದೊಡ್ಡದಾಗುತ್ತವೆ, ಮನಸ್ಸುಗಳು ಮಾತ್ರ ಸಂಕುಚಿತಗೊಳ್ಳುತ್ತಿರುವುದು ವಿರ‍್ಯಾಸ, ಮಕ್ಕಳಿಗೆ ಪೋಷಕರು ಜೀವನದ ಕಷ್ಟಗಳ ಪರಿಚಯ ಮಾಡಿಕೊಡಬೇಕು

ಕೂಡ್ಲಿಗಿ: ಸಂಗೀತಕ್ಕೆ ಮನುಷ್ಯರಷ್ಟೇ ಅಲ್ಲ ಪ್ರಾಣಿ ಪಕ್ಷಿ, ಗಿಡಮರಗಳಿಗೂ ಚೈತನ್ಯ ನೀಡುವ ಶಕ್ತಿ ಇದೆ, ಸಂಗೀತದಿಂದ ನಮ್ಮಲ್ಲಿರುವ ಜಡ್ಡುಗಟ್ಟಿದ ಮನಸ್ಸು ಪುಳಕಿತಗೊಳ್ಳುತ್ತದೆ, ರೋಗ ವಾಸಿ ಮಾಡುವ ಅದ್ಭುತ ಶಕ್ತಿ ಸಂಗೀತಕ್ಕಿದೆ. ಹೀಗಾಗಿ ಇಂದಿನ ಮಕ್ಕಳು ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದಾಗ ಮಾತ್ರ ಅವರು ಉತ್ತಮ ಆರೋಗ್ಯವಂತರಾಗಲು, ಸಾತ್ವಿಕ ಜೀವನ ಮಾಡಲು ಸಾಧ್ಯವಾಗುತ್ತದೆ ಎಂದು ಕೂಡ್ಲಿಗಿ ಹಿರೇಮಠದ ಪ್ರಶಾಂತಸಾಗರ ಶಿವಾಚಾರ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಶನಿವಾರ ರಾತ್ರಿ ಪಟ್ಟಣದ ತರಳಬಾಳು ಪ್ರಾಥಮಿಕ ಶಾಲಾ ಆವರಣದಲ್ಲಿ ಕೊಪ್ಪಳದ ಗವಿಮಠದ ಶ್ರೀಗವಿಸಿದ್ದೇಶ್ವರ ಸ್ವರ ಸಂಚಾರ ಕಲಾತಂಡ ಆಯೋಜಿಸಿದ್ದ ನಾಡೋಜ ಲಿಂಗ್ಯೈಕ್ಯ ಪಂಡಿತ ಪುಟ್ಟರಾಜ ಗವಾಯಿಗಳ 16ನೇ ನೆನಹು ನಿನಾದ ಸಂಗೀತ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಇಂದು ಮನೆಗಳು ದೊಡ್ಡದಾಗುತ್ತವೆ, ಮನಸ್ಸುಗಳು ಮಾತ್ರ ಸಂಕುಚಿತಗೊಳ್ಳುತ್ತಿರುವುದು ವಿಪರ್ಯಾಸ, ಮಕ್ಕಳಿಗೆ ಪೋಷಕರು ಜೀವನದ ಕಷ್ಟಗಳ ಪರಿಚಯ ಮಾಡಿಕೊಡಬೇಕು, ಬಾಲ್ಯದಲ್ಲಿಯೇ ಕ್ರಿಯಾತ್ಮಕ ಚಟುವಟಿಕೆ, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಆಗ ಮಾತ್ರ ಸ್ವಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.

ಉಪನ್ಯಾಸಕ ಕೆ. ನಾಗರಾಜ ಪಂಡಿತ ಪುಟ್ಟರಾಜ ಗವಾಯಿಗಳ ಕುರಿತು ಉಪನ್ಯಾಸ ನೀಡಿ, ಕಣ್ಣಿಲ್ಲದ ಪುಟ್ಟರಾಜರು ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂಡಿತ ಪಂಚಾಕ್ಷರಿ ಗವಾಯಿಗಳ ಶಿಷ್ಯರಾಗಿ ಗುರುಗಳ ಹಾದಿಯಲ್ಲಿ ಸಹಸ್ರಾರು ಅಂಧರ ಬಾಳಿಗೆ ಬೆಳಕಾಗುವುದರ ಮೂಲಕ ಸಮಾಜದ ಕಣ್ಣಾಗಿ ರೂಪುಗೊಂಡಿದ್ದು ಇಂತಹ ಮಹಾನ್ ದಾರ್ಶನಿಕರ ಜೀವನ ಮೌಲ್ಯಗಳು ಇಂದಿನ ಮಕ್ಕಳಿಗೆ ಆದರ್ಶಗಳಾಗಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಸಂಗೀತ ವಿದ್ಯಾರ್ಥಿಗಳಿಗೆ ಉಚಿತ ಸಂಗೀತ ಸೇವೆ ನೀಡುವ ಅಗಸನಕಟ್ಟೆ ತಿಂದಪ್ಪ ಅವರನ್ನು ಸನ್ಮಾನಿಸಲಾಯಿತು. ಹೊಸಪೇಟೆಯ ಕೆ. ಸನ್ನಿಧಿ, ಚಿನ್ಮಯಿ, ನಿಹಾರಿಕಾ ಸಂಗೀತ ಗಾಯನ ಚಳಿಯ ನಡುವೆಯೂ ಕಲಾಸಕ್ತರನ್ನು ಮೇನವಿರೇಳುವಂತೆ ಮಾಡಿತು. ಸಮರ್ಥ ಮ್ಯಾಗಳಮಠ, ಅಮೃತ ಕುಂಬಾರ ಹಾರ್ಮೋನಿಂಯ ಸೋಲೋ, ಶ್ರೀಗೌರಿ ಎಂ. ಪಾಟೀಲ್, ಸೃಜನ್ ರೆಡ್ಡಿ ಹ್ಯಾಟಿ ತತ್ವಪದಗಳಿಗೆ ಪ್ರೇಕ್ಷಕರು ಮನಸೋತರು.

ಆರ್. ಚಂದನಾ ಭಾವಗೀತೆ ಪ್ರೇಕ್ಷಕರನ್ನು ಭಾವಪರವಶರನ್ನಾಗಿಸಿತು. ಗಂಗಾವತಿ ರಾಘವೇಂದ್ರ ಅವರ ತಬಲಾ ಸಾಥ್, ವೀರೇಶ್ ಹಿಟ್ನಾಳ್ ಅವರ ಹಾರ್ಮೋನಿಯಂ, ನೇತ್ರಾವತಿ ಹಡಗಲಿಯ ತಾಂತ್ರಿಕ ಸೇವೆ, ಕೊಪ್ಪಳದ ವೈಷ್ಣವಿ ಕಮ್ಮಾರ ಗುರುವಚನ ಪ್ರಭಾ ನೆರೆದಿದ್ದ ಸಂಗೀತಾಸಕ್ತರ ಮನಸ್ಸು ಗೆದ್ದವು. ಭಾನುಪ್ರಿಯ ಕುಂಬಾರ ಹಾಗೂ ಎಂ.ಸನ್ನಿಧಿ ನಿರೂಪಿಸಿದರು.

ತರಳಬಾಳು ಪ್ರಾಥಮಿಕ ಶಾಲೆಯ ಸಲಹಾ ಸಮಿತಿ ಸದಸ್ಯ ಬಣಕಾರ ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭೀಮಣ್ಣ ಗಜಾಪುರ ಉಪಸ್ಥಿತರಿದ್ದರು. ಶಿಕ್ಷಕರಾದ ಬಿಬಿ ಶಿವಾನಂದ, ಟಿ.ಎಚ್.ಎಂ.ಶೇಖರಯ್ಯ, ಹನುಮಂತಪ್ಪ, ಬಣವಿಕಲ್ಲು ಕೊಟ್ರಗೌಡ, ಪೊಲೀಸ್ ಇಲಾಖೆಯ ಎಂ.ಸ್ವರೂಪನಂದ ಕೊಟ್ಟೂರು ಸೇರಿದಂತೆ ಹಲವರು ಹಾಜರಿದ್ದರು.