ಮಹಾತ್ಮರ‌‌‌‌ ನೆನೆಯುವುದೇ ಘನಮುಕ್ತಿ ಪದಂ ಎನ್ನುವ ಬಸವಾದಿ ಶರಣರ ವಾಣಿಯಂತೆ ಅವರ ಚಿಂತನೆಗಳನ್ನು ಬದುಕಿನ ಜೀವನದುದ್ದಕ್ಕೂ ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಮರಿಯಾಲ ಮುರುಘ ರಾಜೇಂದ್ರಸ್ವಾಮಿ‌‌ ಮಠಾಧೀಶರಾದ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮಹಾತ್ಮರ‌‌‌‌ ನೆನೆಯುವುದೇ ಘನಮುಕ್ತಿ ಪದಂ ಎನ್ನುವ ಬಸವಾದಿ ಶರಣರ ವಾಣಿಯಂತೆ ಅವರ ಚಿಂತನೆಗಳನ್ನು ಬದುಕಿನ ಜೀವನದುದ್ದಕ್ಕೂ ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಮರಿಯಾಲ ಮುರುಘ ರಾಜೇಂದ್ರಸ್ವಾಮಿ‌‌ ಮಠಾಧೀಶರಾದ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಸಲಹೆ ನೀಡಿದರು.

ತಾಲೂಕಿನ‌ ಹರವೆಹೋಬಳಿ ಬೆಟ್ಟದಪುರ ಗ್ರಾಮದಲ್ಲಿ 127ನೇ‌ ವರ್ಷದ ಬಸವಾದಿ‌ ಪ್ರಮಥರ ಗಣಾರಾಧನಾ ಮಹೋತ್ಸವದಲ್ಲಿ‌ ‌ಆಶೀರ್ವಚನ ನೀಡಿದರು.

ಮನುಷ್ಯನ ಹುಟ್ಟಿನಿಂದ ಸಾಯುವವರೆಗೂ‌ ಅವನ‌ ಬದುಕಿಗೆ ಪೂರಕವಾದ ಚಿಂತನೆಗಳನ್ನು 12 ನೇ ಶತಮಾನದಲ್ಲಿ ಬಸವಾದಿಶರಣರು‌‌‌ ತಮ್ಮ ವಚನಗಳ ಮೂಲಕ ತಿಳಿಸಿಕೊಟ್ಟರು.‌

ಲಿಂಗಾಯತ ಧರ್ಮದಲ್ಲಿನ ಶ್ರೇಷ್ಟ ಚಿಂತನೆಗಳು ಮಾನವನನ್ನು ದೈವತ್ವಕ್ಕೆ ಕೊಂಡೊಯ್ಯಲಿವೆ. ಮನುಷ್ಯನಿಗೆ ಮುಪ್ಪು ಬರುವುದಕ್ಕೆ ಮುಂಚೆ ಇಷ್ಟಲಿಂಗವನ್ನು ಪೂಜಿಸಬೇಕು, ಅದು‌ ಮೋಕ್ಷ ಸಾಧನೆಗೆ ದಾರಿಮಾಡಿಕೊಡುತ್ತದೆ ಎಂದರು.

ಧಾರ್ಮಿಕಸಭೆ ಉದ್ಘಾಟಿಸಿದ ಸೋಮಹಳ್ಳಿ ವೀರಸಿಂಹಾಸನ ಶಿಲಾಮಠದ ಸಿದ್ದಮಲ್ಲಪ್ಪಸ್ವಾಮೀಜಿ‌ ಮಾತನಾಡಿ, ಮಹಾತ್ಮ ಗುರುಮಲ್ಲೇಶ್ವರರು ಈ ಭಾಗದಲ್ಲಿ ಸಂಚಾರ ಮಾಡುವ ಮೂಲಕ‌‌‌‌‌ ಬಸವಾದಿ ಶರಣರ‌ ವಚನಗಳ‌‌ ಬಗ್ಗೆ ಅರಿವು ಮೂಡಿಸಿದರು. ಎಲ್ಲಕ್ಕಿಂತ‌‌ ಮುಖ್ಯವಾಗಿ 12 ನೇ ಶತಮಾನದ‌ ಅ‌ನುಭವಮಂಟಪದಲ್ಲಿ‌ ಲಕ್ಷದ ಮೇಲೆ ತೊಂಬತ್ತಾರು ಸಾವಿರಗಣಂಗಳಿಗೆ ದಾಸೋಹ‌‌ ಮಾಡುತ್ತಿದ್ದ‌ ಪರಿಕಲ್ಪನೆಯನ್ನು ನಮ್ಮ ಮಠಮಾನ್ಯಗಳು ಈಗಲೂ‌ ಮುಂದುವರೆಸಿಕೊಂಡು ಬರುತ್ತಿವೆ. ಇವು ಈಗಲೂ ಆಚರಣೆಯಲ್ಲಿವೆ ಎಂದರೆ ಗುರುಮಲ್ಲೇಶ್ವರರ‌ ದಾಸೋಹ ಪರಿಕಲ್ಪನೆಯಿಂದ ಎಂದರು.

ಕಬ್ಬಹಳ್ಳಿ ಗುರುಮಲ್ಲೇಶ್ವರ ದಾಸೋಹಮಠದ ಗುರುಸಿದ್ದಸ್ವಾಮೀಜಿ‌ ಮಾತನಾಡಿ. ಪೋಷಕರು ತಮ್ಮ ಮಕ್ಕಳಿಗೆ ಲಿಂಗಾಧರಣೆ ಮಾಡಿಸುವ ಮೂಲಕ‌‌ ಲಿಂಗಪೂಜೆ ಮಾಡುವುದನ್ನು ಹೇಳಿಕೊಡಬೇಕು. ಶಿಕ್ಷಣದ‌ ಜತೆಗೆ ತಂದೆತಾಯಿ. ಗುರುಹಿರಿಯರಿಗೆ ಹೇಗೆ ಗೌರವ ಕೊಡಬೇಕು ಎಂಬ ಸಂಸ್ಕಾರವನ್ನು ಹೇಳಿಕೊಡಬೇಕು ಎಂದರು.

ಬಸವಣ್ಣನವರ ಭಾವಚಿತ್ರ ಅನಾವರಣ ಮಾಡಿದ ಹರವೆವಿರಕ್ತಮಠದ ಸರ್ಪಭೂಷಣಸ್ವಾಮೀಜಿ‌‌ ಮಾತನಾಡಿ, ಬಸವಾದಿ‌ ಪ್ರಮಥರ 127 ಗಣಾರಾಧನೆಯನ್ನು ಗ್ರಾಮದಲ್ಲಿ ಇಂದಿನ ಆಧುನೀಕ‌ಕಾಲಘಟ್ಟದಲ್ಲು‌‌ ಶ್ರದ್ದಾಭಕ್ತಿಗಳಿಂದ ಆಚರಣೆ ಮಾಡುತ್ತಿರುವುದು ಪ್ರಶಂಸನೀಯ, ಮಾನವ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಬಸವಾದಿಶರಣರು ತಮ್ಮ ಸರಳವಚನಗಳ ಮೂಲಕ ಅರಿವು ಮೂಡಿಸಿದ್ದಾರೆ ಎಂದರು.

ಬೆಳಗ್ಗೆ ಪಡಗೂರು ಅಡವಿಮಠದ ಶಿವಲಿಂಗೇಂದ್ರಸ್ವಾಮೀಜಿ‌ ಅವರ ಪುಷ್ಪಾಂದೋಳಿಕ‌‌ ಮಹೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು.

ದೇವನೂರು ಗುರುಮಲ್ಲೇಶ್ವರ ದಾಸೋಹಮಠದ ಮಠಾಧೀಶರಾದ ಮಹಂತಸ್ವಾಮೀಜಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮದ‌‌ ಕೆರೆಯಂಗಳದಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಮುಡುಕನಪುರಹಲವಾರುಮಠದ ಷಡಕ್ಷರದೇಶಿಕೇಂದ್ರಸ್ವಾಮೀಜಿ, ಚಾಮರಾಜನಗರ ಸಿದ್ದಮಲ್ಲೇಶ್ವರ ವಿರಕ್ತಮಠದ‌ ಚನ್ನಬಸವಸ್ವಾಮೀಜಿ. ಮಾದಾಪಟ್ಟಣವಿರಕ್ತ ಮಠದ ತೋಂಟದಾರ್ಯಸ್ವಾಮೀಜಿ, ಮೂಡುಗೂರುಮಠದ ಇಮ್ಮಡಿ ಉದ್ದಾನಸ್ವಾಮೀಜಿ ಸೇರಿದಂತೆ ಬೆಟ್ಟದಪುರ ಗ್ರಾಮದ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.