ಸರ್ಕಾರಿ ಶಾಲೆ ದತ್ತು ಪಡೆದು ಅಭಿವೃದ್ಧಿ: ನಿಂಗರಾಜಗೌಡ್ರು

| Published : Dec 04 2024, 12:33 AM IST

ಸಾರಾಂಶ

ನಮ್ಮ ಸಂಘಟನೆಯು ಬಡವರು, ಶೋಷಿತ ಸಮುದಾಯದವರ ಒಳಿತಿಗಾಗಿ ಶ್ರಮಿಸುತ್ತಿದೆ.

ಕರವೇ ಸ್ವಾಭಿಮಾನಿ ಸೇನೆಯಿಂದ ರಾಜ್ಯೋತ್ಸವ

ಕನ್ನಡಪ್ರಭ ವಾರ್ತೆ ಕುಷ್ಟಗಿ

ನಮ್ಮ ಸಂಘಟನೆಯು ಬಡವರು, ಶೋಷಿತ ಸಮುದಾಯದವರ ಒಳಿತಿಗಾಗಿ ಶ್ರಮಿಸುತ್ತಿದೆ ಎಂದು ಕರವೇ ಸ್ವಾಭಿಮಾನಿ ಸೇನೆಯ ರಾಜ್ಯಾಧ್ಯಕ್ಷ ನಿಂಗರಾಜಗೌಡ್ರು ಹೇಳಿದರು.

ತಾಲೂಕಿನ ನೀಡಶೇಸಿ ಗ್ರಾಮದ ಶ್ರೀ ಚನ್ನಬಸವೇಶ್ವರ ಮಠದ ಆವರಣದಲ್ಲಿ ಕರವೇ ಸ್ವಾಭಿಮಾನಿ ಸೇನೆಯ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಡು, ನುಡಿ, ಜ್ವಲಂತ ಸಮಸ್ಯೆಗಳ ನಿವಾರಣೆಗಾಗಿ ಕರವೇ ಸ್ವಾಭಿಮಾನಿ ಸೇನೆಯು ಸದಾ ಹೋರಾಟಕ್ಕೆ ಅಣಿಯಾಗಿರುತ್ತದೆ. ನಿಡಶೇಸಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯನ್ನು ನಮ್ಮ ಸಂಘಟನೆಯಿಂದ ದತ್ತು ಪಡೆದು ಅಭಿವೃದ್ಧಿ ಮಾಡಲಾಗುವುದು ಎಂದರು.

ರಾಜ್ಯ ಮಹಿಳಾ ಕಾರ್ಯಾಧ್ಯಕ್ಷೆ ಸುವರ್ಣೆಮ್ಮ, ಜಿಲ್ಲಾಧ್ಯಕ್ಷ ಸಂತೋಷ ತೋಟದ ಮಾತನಾಡಿದರು.

ಎಎಸ್ಐ ಭರಮಪ್ಪ, ಎಎಸ್ ಐ ಬಸನಗೌಡ ಪೊಲೀಸ್ ಪಾಟೀಲ್ ಹಾಗೂ ನಿವೃತ್ತ ಯೋಧರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ನಡೆಯಿತು. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಊಟದ ತಟ್ಟೆ ಮತ್ತು ಲೋಟ, ನೋಟ್ ಪುಸ್ತಕ ನೀಡಲಾಯಿತು. ವೈಷ್ಣವಿ ಯಾದವ ಅವರಿಂದ ಮ್ಯಾಜಿಕ್ ಪ್ರದರ್ಶನ, ಅಗಸ್ತ್ಯ ಅರಕೇರಿ ಅವರಿಂದ ಪಾರ್ಕರ್ ಸ್ಟಂಟ್ ಪ್ರದರ್ಶನ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಈ ಸಂದರ್ಭ ಕರವೇ ಮುಖಂಡ ನೀಲಕಂಠಪ್ಪಗೌಡ ಪಾಟೀಲ, ನೀಲಕಂಠಯ್ಯ ಹಿರೇಮಠ, ಅಂಬಣ್ಣ ಭಜಂತ್ರಿ, ಮುತ್ತಪ್ಪ ಚಳಗೇರಿ, ಯಮನೂರಪ್ಪ ತಳ್ಳಳ್ಳಿ, ಸುರೇಶ, ಶರಣಪ್ಪ, ಸಗರಪ್ಪ ಮೇಟಿ, ಪರಸಪ್ಪ ಅಗಸಿಮುಂದಿನ ಸೇರಿದಂತೆ ಗ್ರಾಮದ ಗುರು, ಹಿರಿಯರು ಹಾಗೂ ಕರವೇ ಪದಾಧಿಕಾರಿಗಳು ಇದ್ದರು. ಜಿಲ್ಲಾ ಉಪಾಧ್ಯಕ್ಷ ಶರಣಪ್ಪಗೌಡ ಪೊಲೀಸ್ ಪಾಟೀಲ್ ಕಾರ್ಯಕ್ರಮ ನಿರ್ವಹಿಸಿದರು.