ಸಾರಾಂಶ
ಸಾಹಿತ್ಯ ಚರಿತೆ, ಕಾವ್ಯ ಮೀಮಾಂಸೆ ಮತ್ತು ಮಹಾಕಾವ್ಯಗಳಲ್ಲಿ ದೇಸಿ ಚಿಂತನೆಗಳು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ
ಕನ್ನಡಪ್ರಭ ವಾರ್ತೆ ತುಮಕೂರು
ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುವ ಬದಲು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು. ಅಳವಡಿಸಿಕೊಳ್ಳಬೇಕು. ಸಂಸ್ಕೃತದ ಎಲ್ಲ ಸಾರವನ್ನು ಹೀರಿಕೊಂಡ ಪಂಪ ಸಾಹಿತ್ಯವನ್ನು ಬರೆದದ್ದು ದೇಸಿ ಭಾಷೆಯಲ್ಲೇ ಎಂದು ಹಿರಿಯ ವಿದ್ವಾಂಸ ಡಾ.ಪಿ.ವಿ. ನಾರಾಯಣ ಹೇಳಿದರು.ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಕನ್ನಡ ವಿಭಾಗವು ಶನಿವಾರ ಆಯೋಜಿಸಿದ್ದ ‘ಸಾಹಿತ್ಯ ಚರಿತೆ, ಕಾವ್ಯ ಮೀಮಾಂಸೆ ಮತ್ತು ಮಹಾಕಾವ್ಯಗಳಲ್ಲಿ ದೇಸಿ ಚಿಂತನೆಗಳು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ದೇಸೀಯತೆಯೆಂದರೆ, ದೇಸಿ ಭಾಷೆಯೆಂದರೆ ಜನಸಾಮಾನ್ಯರ ನೈಜ ಬದುಕು. ಪ್ರಾದೇಶಿಕ ಸಂಸ್ಕೃತಿ. ಭಾವನೆಗಳನ್ನು, ಆಲೋಚನೆಗಳನ್ನು, ಸಂವೇದನಾಶೀಲತೆಯನ್ನು ವ್ಯಕ್ತಪಡಿಸುವ ಜನಸಾಮಾನ್ಯರ ಭಾಷೆ 10ನೆಯ ಶತಮಾನದ ವೀರಯುಗದಲ್ಲಿ ಸಾಹಿತ್ಯ ರಾಜಸ್ಥಾನಕ್ಕೆ ಮಾತ್ರ ಸೀಮಿತವಾಗಿತ್ತು. ರಾಜತ್ವದಿಂದ ಬೇಸರಗೊಂಡ ಜನಸಾಮಾನ್ಯರು 12ನೇ ಶತಮಾನದಲ್ಲಿ ವಚನ ಚಳುವಳಿಯನ್ನು ಆರಂಭಿಸಿ ದೇಶವ್ಯಾಪಿ ಮಾಡಿದರು ಎಂದು ತಿಳಿಸಿದರು.ಸಾಹಿತ್ಯ, ಕಾವ್ಯ ಪ್ರತಿಯುಗದಲ್ಲೂ ಪ್ರತಿಯೊಬ್ಬರಿಗೂ ಹೊಸದಾಗಿ ಕಾಣುತ್ತದೆ. ವಿಮರ್ಶಿಸುವ ಅವಧಿ ಕಾಲಘಟ್ಟದ್ದಾಗಿರುತ್ತದೆ. ಯಾವುದು ನಿಮ್ಮ ತಿಳುವಳಿಕೆಯನ್ನು ಹೊಸದಾಗಿ ಅರಳಿಸುತ್ತದೆಯೋ ಅದೇ ಧರ್ಮ, ಸಂಸ್ಕಾರ ಎಂದು ಹೇಳಿದರು.
ವಿವಿ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಮಾತನಾಡಿ, ನಾವು ಇಂದು ಯಾಂತ್ರಿಕ ಕಾಲದಲ್ಲಿದ್ದೇವೆ. ಅತಿಯಾದ ಆಧುನಿಕತೆಗೆ ಒಳಗಾಗುತ್ತಿದ್ದೇವೆ. ನಾವು ನಮ್ಮ ದೇಸೀಯತೆಯನ್ನು ಉಳಿಸಿಕೊಳ್ಳಬೇಕು. ಭಾರತದ ಮೇಲೆ ವಿದೇಶಿ ಸಂಸ್ಕೃತಿಗಳು ಪ್ರಭಾವ ಬೀರುತ್ತಿವೆ. ಪ್ರತಿಯೊಬ್ಬರೂ ನಮ್ಮ ದೇಶದ ಭಾವ ಸಂವೇದನಾಶೀಲತೆಯನ್ನು ಉಳಿಸಿಕೊಳ್ಳಬೇಕು ಎಂದರು.ವಿವಿ ಕಲಾಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ. ಕರಿಯಣ್ಣ ಮಾತನಾಡಿ, ರಾಜಸ್ಥಾನಕ್ಕೆ ಮಾತ್ರ ಸೀಮಿತವಾಗಿದ್ದ ಸಾಹಿತ್ಯವನ್ನು ಬಿಡಿಸಿ ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಿದ್ದು ಜೈನ ಕವಿಗಳು. ದೇಸಿ ಸಂವೇದನೆ ಅಡಗಿರುವುದು ಜನಪದದಲ್ಲಿ ಎಂದರು.
ವಿಚಾರ ಸಂಕಿರಣದಲ್ಲಿ ‘ಪ್ರಾಚೀನ ಕಾವ್ಯಗಳಲ್ಲಿ ದೇಸೀಯತೆ’, ‘ಮಹಾಕಾವ್ಯಗಳಲ್ಲಿ ದೇಸೀಯತೆ’, ‘ಸಾಹಿತ್ಯಚ ರಿತ್ರೆಯಲ್ಲಿ ದೇಸೀಯತೆ’, ‘ಕಾವ್ಯ ಮೀಮಾಂಸೆಯಲ್ಲಿ ದೇಸೀಯತೆ’, ‘ಕನ್ನಡ ಮತ್ತು ತಮಿಳು ಕಾವ್ಯಗಳಲ್ಲಿ ದೇಸಿ ಚಿಂತನೆಗಳು’ ಕುರಿತ ವಿಚಾರಗೋಷ್ಠಿ ಹಾಗೂ ಪ್ರಬಂಧ ಮಂಡನೆ ಮಾಡಲಾಯಿತು.ವಿಚಾರ ಸಂಕಿರಣದ ಸಂಚಾಲಕ ಡಾ.ಎಸ್. ಶಿವಣ್ಣ ಬೆಳವಾಡಿ, ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ. ಪ್ರಸನ್ನಕುಮಾರ್ ಉಪಸ್ಥಿತರಿದ್ದರು.