ಸಾರಾಂಶ
ಚಿತ್ರದುರ್ಗ: ಇನ್ನೊಬ್ಬರ ಸಮಸ್ಯೆಗಳಿಗೆ ಸದಾ ಕಿವಿಯಾಗಿ ನಿವಾರಣೆ ಮಾಡುವ ಯತ್ನದ ನಡುವೆಯೇ ಮಹಿಳೆಯರು ಆರೋಗ್ಯದ ಕಡೆ ಗಮನ ಹರಿಸುವುದು ಅಗತ್ಯವೆಂದು ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಾ.ಆಪರ್ಣಾ ತಿಳಿಸಿದರು.
ಚಿತ್ರದುರ್ಗ ನಗರದ ಎಸ್ಆರ್‌ಬಿಎಂಎಸ್ ರೋಟರಿ ಕ್ಲಬ್ ಆವರಣದಲ್ಲಿ ಇನ್ನರ್ ವೀಲ್ಹ್ ಕ್ಲಬ್‌ವತಿಯಿಂದ ನಡೆದ ವಾರದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ದೇಹದಲ್ಲಿ ಏನಾದರೂ ಏರು ಪೇರಾದಾಗ ಸ್ವಯಂ ಚಿಕಿತ್ಸೆ ಪಡೆಯುವ ಬದಲು ವೈದ್ಯರನ್ನು ಭೇಟಿ ಮಾಡಿ ತಪಾಸಣೆ ನಡೆಸಿಕೊಳ್ಳುವುದರ ಮೂಲಕ ವೈದ್ಯರ ಸಲಹೆಮೇರೆಗೆ ಔಷಧಿ ಪಡೆಯುವುದು ಸೂಕ್ತವಾಗಿದೆ. ದೇಹವನ್ನು ತಪಾಸಣೆ ಮಾಡುವುದರಿಂದ ಬೇರೆ ಏನಾದರೂ ತೊಂದರೆಗಳಿದ್ದರೆ ಅದು ಕೂಡ ಪತ್ತೆಯಾಗಿ ಚಿಕಿತ್ಸೆಗೆ ಅನುಕೂಲವಾಗುತ್ತದೆ ಎಂದರು.
ದೇಹಕ್ಕೆ 40 ವರ್ಷದ ಬಳಿಕ ಕಾಲ ಕಾಲಕ್ಕೆ ತಪಾಸಣೆಗೆ ಒಳಪಡಿಸಬೇಕು. ಇದರಿಂದ ನಮ್ಮ ದೇಹದ ಒಳಗಡೆ ಇರುವ ರೋಗದ ಲಕ್ಷಣಗಳನ್ನು ಪತ್ತೆ ಮಾಡಿದಂತಾಗುತ್ತದೆ. ಇದಲ್ಲದೇ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ ಎಂದರು.ಬಹಳಷ್ಟು ಮಹಿಳೆಯಯರು ಆರೋಗ್ಯಕ್ಕಿಂತಲೂ ಬೇರೆಯವರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಾರೆ. ಇದನ್ನು ತಪ್ಪು ಎಂದು ಹೇಳುವುದಿಲ್ಲ. ಆದರೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಸೂಕ್ತವಲ್ಲವೇ ಎಂದು ಪ್ರಶ್ನಿಸಿದ ಅವರು ನಿರ್ಲಕ್ಷ್ಯ ಮಾಡಿದಲ್ಲಿ ಸ್ವಯಂ ಅಪರಾಧವೆಸಗಿದಂತಾಗುತ್ತದೆ. ನಾನಾ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಮನೆಯಲ್ಲಿ ಬೇರೆಯವರು ಹುಷಾರಿಲ್ಲದೆ ಮಲಗಿಕೊಂಡರೆ ಮಹಿಳೆ ನೋಡಿಕೊಳುತ್ತಾಳೆ. ಆಕೆ ಮಲಗಿದರೆ ನೋಡಿಕೊಳ್ಳುವರು ಯಾರು ಎಂದು ಪ್ರಶ್ನಿಸಿದರು.
ಇತ್ತೀಚಿನ ದಿನಮಾನದಲ್ಲಿ ಪುರುಷರಷ್ಟೇ ಮಹಿಳೆಯೂ ಸರಿಸಮಾನದ ಸ್ಪರ್ಧೆ ನೀಡುತ್ತಿದ್ದಾರೆ. ಪುರುಷರ ರೀತಿ ಕೆಲ ವಸ್ತುಗಳ ಸೇವನೆಯಲ್ಲಿಯೂ ಮುಂದೆ ಇದ್ದಾರೆ. ಆ ಕಾರಣಕ್ಕಾಗಿ ರೋಗಗಳಿಂದ ಆಕೆ ಆವೃತ್ತವಾಗಬಹುದು. ಕ್ಯಾನ್ಸರ್ ರೋಗಕ್ಕೆ ಬಲಿಯಾಗಬಹುದು. ಪ್ರತಿ ದಿನ ವ್ಯಾಯಾಮ ಮಾಡುವುದರ ಮೂಲಕ ಕ್ಯಾನ್ಸರ್ ದೂರ ಮಾಡಬಹುದಾಗಿದೆ. ದಿನದಲ್ಲಿ ಅರ್ಧ ಗಂಟೆಯಾದರೂ ವ್ಯಾಯಾಮ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ ಎಂದು ಡಾ.ಅಪರ್ಣ ಸಲಹೆ ಮಾಡಿದರು.ಇನ್ನರ್ ವ್ಹಿಲ್‍ಕ್ಲಬ್ ಅಧ್ಯಕ್ಷೆ ಮೋಕ್ಷಾ ರುದ್ರಸ್ವಾಮಿ, ಜಂಟಿ ಕಾರ್ಯದರ್ಶಿ ವೀಣಾ ಜಯರಾಂ, ರೋಟರಿ ಕ್ಲಬ್ ಅಧ್ಯಕ್ಷ ಕನಕರಾಜು, ಕಾರ್ಯದರ್ಶಿ ವಿಕ್ರಾಂತ್ ಜೈನ್, ಬ್ರಿಗೇಡಿಯರ್ ರವಿ ಮುನಿಸ್ವಾಮಿ, ಜ್ಯೋತಿ ಲಕ್ಷ್ಮಣ ಇದ್ದರು.