ಗ್ರಾಮೀಣ ಕಲೆಗಳು ಬದುಕು ಹಸನಾಗಿಸುತ್ತವೆ: ರಮೇಶ್

| Published : Jan 21 2024, 01:30 AM IST

ಸಾರಾಂಶ

ಗ್ರಾಮೀಣ ಭಾಗದ ಸೋಬಾನೆ, ಕೋಲಾಟ, ಉಯ್ಯಾಲೆ ಪದ, ವೀರಗಾಸೆ ಮುಂತಾದ ಕಲೆಗಳಿಂದ ಬದುಕು ಹಸನುಗೊಳ್ಳುತ್ತದೆ.

ಹಿರಿಯೂರು: ಗ್ರಾಮೀಣ ಭಾಗದ ಸೋಬಾನೆ, ಕೋಲಾಟ, ಉಯ್ಯಾಲೆ ಪದ, ವೀರಗಾಸೆ ಮುಂತಾದ ಕಲೆಗಳಿಂದ ಬದುಕು ಹಸನುಗೊಳ್ಳುತ್ತದೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ರಮೇಶ್ ಅಭಿಪ್ರಾಯಪಟ್ಟರು.

ನಗರದ ಸಕ್ಕರೆ ಕಾರ್ಖಾನೆ ಆವರಣದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆ ತಾಲೂಕು ಘಟಕ ಹಾಗೂ ಏಕನಾಥೇಶ್ವರಿ ಸಂಗೀತ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಜಾನಪದ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಗಿ ಬೀಸುವಾಗ, ಭತ್ತ ಕುಟ್ಟುವಾಗ, ಪೈರು ನಾಟಿ ಮಾಡುವಾಗ ಹಾಡುವ ಹಾಡುಗಳು ಇಂದಿಗೂ ಜೀವಂತವಾಗಿವೆ. ಹಸಿದಾಗ ಅನ್ನ, ದಣಿದಾಗ ನೀರು, ಕಲೆಗೆ ತಕ್ಕ ಪ್ರೋತ್ಸಾಹ ನೀಡಿದರೆ ಮಾತ್ರ ಜಾನಪದ ಕಲಾವಿದರ ಬದುಕು ಹಸನುಗೊಳ್ಳುತ್ತದೆ ಎಂದರು.

ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆಯ ಉಪಾಧ್ಯಕ್ಷ ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ, ರಾಜ್ಯದ ವಿವಿಧ ಇಲಾಖೆಗಳಲ್ಲಿ 2 ಲಕ್ಷಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇದ್ದು ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ವಯಸ್ಸು ಮೀರಿದ ನಿರುದ್ಯೋಗಿಗಳು ಬದುಕು ಕಾಣದೆ ಕಂಗಾಲಾಗಿದ್ದಾರೆ. ಆದ ಕಾರಣ ರಾಜ್ಯ ಸರ್ಕಾರವು ಕೂಡಲೇ ರಾಜ್ಯದ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ವಸತಿ ಶಾಲೆಗಳಲ್ಲಿ ಖಾಲಿ ಇರುವ ಸಂಗೀತ, ನಾಟಕ ಹಾಗೂ ಚಿತ್ರಕಲಾ ಶಿಕ್ಷಕರನ್ನು ನೇಮಿಸುವ ಮೂಲಕ ಮಕ್ಕಳಲ್ಲಿರುವ ಕಲೆ, ಸಾಹಿತ್ಯ, ಸಂಗೀತ ಮತ್ತು ರಂಗಕಲೆಗೆ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು.

ತಾಲೂಕು ಮಕ್ಕಳ ಸಾಹಿತ್ಯ ವೇದಿಕೆಯ ಅಧ್ಯಕ್ಷ ಜೆ.ನಿಜಲಿಂಗಪ್ಪ ಮಾತನಾಡಿ, ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ಹಿರಿಯೂರಿನಲ್ಲಿ 2002ರಿಂದ ಇಲ್ಲಿಯವರೆಗೂ ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಮಕ್ಕಳಲ್ಲಿರುವ ಕವಿತಾ ಪ್ರತಿಭೆ ಅನಾವರಣಗೊಳಿಸುವ ಮೂಲಕ ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ ಎಂದರು.

ಸಕ್ಕರೆ ಕಾರ್ಖಾನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ಎಂ.ರಮೇಶ್‍ ನಾಯ್ಕ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ, ರಾಜ್ಯ ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಎನ್.ಪಿ.ಮಹೇಶ್, ತಾಲೂಕು ವಿಷ್ಣುವರ್ಧನ್ ಕಲಾಸಂಘದ ಅಧ್ಯಕ್ಷ ಸಿದ್ದಪ್ಪ, ತಾಲೂಕು ಮಕ್ಕಳ ಸಾಹಿತ್ಯ ವೇದಿಕೆಯ ಮಾಜಿ ಅಧ್ಯಕ್ಷ ಎಂ.ಬಿ.ಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಟಿ.ಶಂಕರಲಿಂಗಯ್ಯ, ಶಾಂತಲ, ಮಂಜುಳ, ನೇತ್ರಾವತಿ, ಮಲ್ಲಿಕ್‍ಸಾಬ್ ಮುಂತಾದವರು ಇದ್ದರು.

ಇದೇ ಸಂದರ್ಭದಲ್ಲಿ ಮಕ್ಕಳಿಗೆ ಆಯೋಜಿಸಿದ್ದ ಜಾನಪದ ಗಾಯನ ಸ್ಪರ್ಧೆಯಲ್ಲಿ ಹಿರಿಯರ ವಿಭಾಗದಲ್ಲಿ ತನುಶ್ರೀ, ಲಕ್ಷ್ಮಿ, ರಮ್ಯಾ.ಟಿ. ಬೇಬಿಕಲಾ, ಕಿರಿಯರ ವಿಭಾಗದಲ್ಲಿ ರಚನಾ, ಮಧುಸೂದನ್ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳಿಸಿದರು.