ಭೂಮಿಯ ಫಲವತ್ತತೆ ಕುಸಿಯುವ ಜತೆಗೆ ಮಾನವನ ಆರೋಗ್ಯಕ್ಕೂ ಗಂಭೀರ ಸಮಸ್ಯೆಗಳು ಎದುರಾಗುತ್ತಿವೆ.
ಕಂಪ್ಲಿ: ರೈತರ ಆರ್ಥಿಕ ಉಳಿವು ಹಾಗೂ ಜನತೆಯ ಆರೋಗ್ಯ ರಕ್ಷಣೆಗಾಗಿ ತುರ್ತಾಗಿ ನೈಸರ್ಗಿಕ ಕೃಷಿಯನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಕಲ್ಯಾಣಚೌಕಿಮಠದ ಬಸವರಾಜ ಶಾಸ್ತ್ರಿಗಳು ಹೇಳಿದರು.ದೇವಸಮುದ್ರ ಕ್ರಾಸ್ ಸಮೀಪದ ಕಲ್ಯಾಣಚೌಕಿಮಠದ ಗೋಶಾಲೆಯಲ್ಲಿ ಗುರುವಾರ ನಡೆದ ನೈಸರ್ಗಿಕ ಕೃಷಿಕರ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದವರು. ಪ್ರಸ್ತುತ ಕೃಷಿಯಲ್ಲಿ ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿಯ ಫಲವತ್ತತೆ ಕುಸಿಯುವ ಜತೆಗೆ ಮಾನವನ ಆರೋಗ್ಯಕ್ಕೂ ಗಂಭೀರ ಸಮಸ್ಯೆಗಳು ಎದುರಾಗುತ್ತಿವೆ. ಇಂತಹ ಸಂದರ್ಭದಲ್ಲಿ ಸಾವಯವ ಕೃಷಿ ಹೆಚ್ಚು ಪರಿಣಾಮಕಾರಿ ಹಾಗೂ ಶಾಶ್ವತ ಪರಿಹಾರವಾಗಿದೆ ಎಂದು ಹೇಳಿದರು.
ಕೃಷಿಕನು ತನ್ನ ಕೃಷಿಗೆ ಅಗತ್ಯವಾದ ಬೀಜ, ಗೊಬ್ಬರ, ಕೀಟನಾಶಕ ಸೇರಿದಂತೆ ಎಲ್ಲ ಪರಿಕರಗಳನ್ನು ಸ್ವತಃ ನೈಸರ್ಗಿಕವಾಗಿ ತಯಾರಿಸಿಕೊಂಡು ವಿಷಮುಕ್ತ ಆಹಾರ ಉತ್ಪಾದನೆಗೆ ಮುಂದಾಗಬೇಕು. ವಿಷಮುಕ್ತ ಆಹಾರದಿಂದ ಆರೋಗ್ಯವಂತ ಸಮಾಜ ಹಾಗೂ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ನೈಸರ್ಗಿಕ ಕೃಷಿಕರು ಸಂಘಟಿತರಾಗಿ ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.ಮುಂದಿನ ಮೂರು ವರ್ಷಗಳಲ್ಲಿ ಜಿಲ್ಲೆಯ ಒಟ್ಟು ಕೃಷಿ ಉತ್ಪಾದನೆಯ ಶೇ.50ರಷ್ಟು ಭಾಗವನ್ನು ನೈಸರ್ಗಿಕ ಕೃಷಿ ಪದ್ಧತಿಗೆ ಪರಿವರ್ತಿಸುವ ಗುರಿಯನ್ನು ಹೊಂದಲಾಗಿದೆ. ಉತ್ಪಾದನಾ ವೆಚ್ಚಕ್ಕೆ ನ್ಯಾಯಯುತ ಲಾಭ ಸೇರಿಸಿ ನೇರ ಮಾರಾಟ ಮಾಡುವ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಪ್ರಸ್ತುತ ರೈತ ಹಾಗೂ ಗ್ರಾಹಕರ ನಡುವಿನ ಮಧ್ಯವರ್ತಿಗಳ ಶೋಷಣೆಯಿಂದ ರೈತರಿಗೆ ಕಡಿಮೆ ಬೆಲೆ, ಗ್ರಾಹಕರಿಗೆ ಅಧಿಕ ಬೆಲೆ ಎಂಬ ಅನ್ಯಾಯ ನಡೆಯುತ್ತಿದೆ. ಇದನ್ನು ನಿವಾರಿಸಲು ಮುಕ್ತ ಹಾಗೂ ನೇರ ಮಾರುಕಟ್ಟೆ ವ್ಯವಸ್ಥೆಯನ್ನು ನಿರ್ಮಿಸಲಾಗುವುದು ಎಂದು ವಿವರಿಸಿದರು.
ಹೊಸಪೇಟೆಯ ಸಿದ್ಧಲಿಂಗಸ್ವಾಮಿ, ಹುಲಿಕೇರಿ ವಿಶ್ವೇಶ್ವರ ಸಜ್ಜನ್, ಬಳ್ಳಾರಿಯ ನವೀನ್, ಬೈರಾಪುರದ ಬಿ.ಎಂ. ಈರಪ್ಪಯ್ಯ, ಚಳ್ಳಗುರ್ಕಿಯ ದೊಡ್ಡಬಸವನಗೌಡ, ಇಬ್ರಾಹಿಂಪುರದ ರವಿಕುಮಾರ್, ಜಾಲಿಬೆಂಚೆಯ ಈಶ್ವರರೆಡ್ಡಿ, ಸಂಗನಕಲ್ಲಿನ ವಿಶ್ವನಾಥ, ಪಲ್ಲವಿ, ಶ್ರೀದೇವಿ ಹಾಗೂ 50ಕ್ಕೂ ಹೆಚ್ಚು ನೈಸರ್ಗಿಕ ಕೃಷಿಕರು ಕಾರ್ಯಾಗಾರದಲ್ಲಿ ಪಾಲ್ಗೊಂಡು ತರಬೇತಿ ಪಡೆದರು.