ಸಹಕಾರ ಸಂಸ್ಥೆಗಳು ಕೇವಲ ಸಾಲ ನೀಡುವ ಮತ್ತು ಠೇವಣಿ ಸ್ವೀಕರಿಸುವ ಕೇಂದ್ರಗಳಲ್ಲ; ಅವು ಗ್ರಾಮೀಣ ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಯ ಜತೆಗೆ ಉಳಿತಾಯ ಮತ್ತು ಸ್ವಾವಲಂಬನೆಯ ಮನೋಭಾವ ಬೆಳೆಸುವ ಶಕ್ತಿ ಕೇಂದ್ರಗಳಾಗಿವೆ.
ಗದಗ ಕೆಸಿಸಿ ಬ್ಯಾಂಕ್ ಸಭಾಭವನದಲ್ಲಿ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಗದಗ
ಸಹಕಾರ ಸಂಸ್ಥೆಗಳು ಕೇವಲ ಸಾಲ ನೀಡುವ ಮತ್ತು ಠೇವಣಿ ಸ್ವೀಕರಿಸುವ ಕೇಂದ್ರಗಳಲ್ಲ; ಅವು ಗ್ರಾಮೀಣ ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಯ ಜತೆಗೆ ಉಳಿತಾಯ ಮತ್ತು ಸ್ವಾವಲಂಬನೆಯ ಮನೋಭಾವ ಬೆಳೆಸುವ ಶಕ್ತಿ ಕೇಂದ್ರಗಳಾಗಿವೆ. ಸಂಸ್ಥೆಗಳ ಆಡಳಿತದಲ್ಲಿ ಪಾರದರ್ಶಕತೆ, ತಂತ್ರಜ್ಞಾನ ಅಳವಡಿಕೆ ಹಾಗೂ ನಿರಂತರ ತರಬೇತಿ ನೀಡುವ ಮೂಲಕ ಪರಿಣಾಮಕಾರಿ ಬದಲಾವಣೆ ತರಬೇಕು ಎಂದು ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಎಸ್. ಪಾಟೀಲ ಹೇಳಿದರು.73ನೇ ಸಹಕಾರ ಸಪ್ತಾಹದ ಅಂಗವಾಗಿ ಸೋಮವಾರ ಗದಗ ನಗರದ ಕೆಸಿಸಿ ಬ್ಯಾಂಕ್ ಸಭಾಭವನದಲ್ಲಿ ಸಹಕಾರ ಇಲಾಖೆ, ಜಿಲ್ಲಾ ಸಹಕಾರ ಯೂನಿಯನ್, ಕೆಸಿಸಿ ಬ್ಯಾಂಕ್, ಹಾಲು ಒಕ್ಕೂಟ ಹಾಗೂ ಶಿವಸಂಗಮ ವಿವಿಧೋದ್ದೇಶಗಳ ಸೌಹಾರ್ದ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಹಕಾರ ಶಿಕ್ಷಣ ತರಬೇತಿ ಪ್ರಚಾರದ ಮೂಲಕ ಸಹಕಾರ ಸಂಸ್ಥೆಗಳಲ್ಲಿ ಪರಿಣಾಮಕಾರಿ ಬದಲಾವಣೆ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಿವಸಂಗಮ ಸೌಹಾರ್ದ ಸಹಕಾರ ಸಂಘದ ಸಂಸ್ಥಾಪಕ ಜಿ.ಎಂ. ಪಲ್ಲೇದ, ಗದಗ ಜಿಲ್ಲೆ ಸಹಕಾರಿ ಕ್ಷೇತ್ರದ ತೊಟ್ಟಿಲಾಗಿದೆ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿ ಹೆಚ್ಚಿಸಬೇಕು ಎಂದ ಅವರು, ಸಹಕಾರ ತತ್ವದ ಪರಸ್ಪರ ಸಹಕಾರ ನಿಯಮ ಕುರಿತು ಮಾತನಾಡಿದರು.ಕೆಎಂಎಫ್ ನಿರ್ದೇಶಕ ಎಚ್.ಜಿ. ಹಿರೇಗೌಡ್ರ ಮಾತನಾಡಿ, ಆರ್ಥಿಕ ಶಿಸ್ತು, ಡಿಜಿಟಲ್ ಸೇವೆಗಳ ಅಳವಡಿಕೆಯೊಂದಿಗೆ ಮಹಿಳೆಯರು ಮತ್ತು ಯುವಜನರಲ್ಲಿ ಉದ್ಯಮಶೀಲತೆ ಬೆಳೆಸಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸಿ.ಎಂ. ಪಾಟೀಲ, ಸದಸ್ಯರಿಗೆ ತಮ್ಮ ಹಕ್ಕು, ಕರ್ತವ್ಯ ಹಾಗೂ ಪ್ರಜಾಪ್ರಭುತ್ವ ಮಾದರಿಯ ಆಡಳಿತದ ಅರಿವು ಮೂಡಿಸಬೇಕು ಎಂದರು.
ಧಾರವಾಡದ ಮೋಟಿವೇಟರ್ ಪ್ರವೀಣ ಗುಡಿ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಯೂನಿಯನ್ ನಿರ್ದೇಶಕ ಎಸ್.ಕೆ. ಕುರಡಗಿ, ಉಪನಿಬಂಧಕಿ ಎಸ್.ಎಸ್. ಕಬಾಡೆ, ಲೆಕ್ಕ ಪರಿಶೋಧನಾ ಇಲಾಖೆ ಉಪನಿರ್ದೇಶಕ ಎಚ್. ಮಂಜಪ್ಪ, ಸಹಾಯಕ ನಿಬಂಧಕಿ ಪುಷ್ಪಾ ಕಡಿವಾಳ, ಅಧಿಕಾರಿಗಳಾದ ಬಿ.ಆರ್. ನಿಡಗುಂದಿ, ಎಸ್.ಎಂ. ಚಿಕ್ಕಮಠ, ಆರ್.ಪಿ. ಖೋನಾ, ಸುನೀಲಕುಮಾರ ಚಳಗೇರಿ, ಮಹೇಶ ಜಿ. ಲಿಂಗದಾಳ, ಶಂಕರಪ್ಪ ಹಳ್ಳಿಕೇರಿ ಉಪಸ್ಥಿತರಿದ್ದರು. ಗಂಗಮ್ಮ ನಾಯ್ಕರ ಪ್ರಾರ್ಥಿಸಿದರು. ಯೂನಿಯನ್ ಸಿಇಒ ಚಂದ್ರಶೇಖರ ಎಸ್. ಕರಿಯಪ್ಪನವರ ಸ್ವಾಗತಿಸಿ, ನಿರೂಪಿಸಿದರು. ಮಲ್ಲಿಕಾರ್ಜುನ ಬಡಿಗೇರ ವಂದಿಸಿದರು.