ಪ್ರೌಢಾವಸ್ಥೆ ಮಹಿಳೆ ಕುಟುಂಬದ ಆಧಾರಸ್ತಂಭ: ಡಾ. ಗೌರಿ

| Published : Jan 16 2025, 12:47 AM IST

ಸಾರಾಂಶ

ಚಿಕ್ಕಮಗಳೂರು, ಪ್ರೌಢಾವಸ್ಥೆಯ ಮಹಿಳೆ ಕುಟುಂಬದ ಆಧಾರಸ್ತಂಭ. ಆಕೆ ಆರೋಗ್ಯವಾಗಿದ್ದರೆ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಿರುತ್ತದೆ ಎಂದು ಯೋಗ ತಜ್ಞೆ ಡಾ ಗೌರಿ ವರುಣ್ ಹೇಳಿದರು.

ಶರಣೆ ಮೋಳಿಗೆ ಮಹಾದೇವಿ ತಂಡದ ’ಬನದ ಹುಣ್ಣಿಮೆ’ ಕಾರ್‍ಯಕ್ರಮ ಉದ್ಘಾಟಿಸಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಪ್ರೌಢಾವಸ್ಥೆಯ ಮಹಿಳೆ ಕುಟುಂಬದ ಆಧಾರಸ್ತಂಭ. ಆಕೆ ಆರೋಗ್ಯವಾಗಿದ್ದರೆ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಿರುತ್ತದೆ ಎಂದು ಯೋಗ ತಜ್ಞೆ ಡಾ ಗೌರಿ ವರುಣ್ ಹೇಳಿದರು.

ಶರಣೆ ಮೋಳಿಗೆ ಮಹಾದೇವಿ ತಂಡ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಆಯೋಜಿಸಿದ್ದ ’ಬನದ ಹುಣ್ಣಿಮೆ’ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಾಲ್ಯ, ಯೌವನ, ಪ್ರೌಢಾವಸ್ಥೆ, ಮುಪ್ಪು ನಾಲ್ಕು ಘಟ್ಟಗಳಲ್ಲಿ ಪ್ರೌಢಾವಸ್ಥೆ ಪ್ರಮುಖ. ಈ ಹಂತದ ಮಹಿಳೆಯರಿಗೆ ಇಲ್ಲಿ ನೆರೆದಿದ್ದು ಅವರ ಆರೋಗ್ಯ ಕಾಳಜಿ ವಿಶ್ಲೇಷಣೆ ಸೂಕ್ತ. ಮಕ್ಕಳು, ಪತಿ, ವೃದ್ಧಾಪ್ಯದ ಅತ್ತೆ ಮಾವ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರ ಆಗುಹೋಗುಗಳ ಬಗ್ಗೆ ಗಮನಹರಿಸಬೇಕಾದ ಅನಿವಾರ್‍ಯತೆ ಯಜಮಾನಿಗೆ ಇರುತ್ತದೆ. ಒತ್ತಡ, ಆತಂಕ ಮಾಡಿಕೊಂಡರೆ ಆರೋಗ್ಯಕ್ಕೆ ಮಾರಕ ಎಂದವರು ಎಚ್ಚರಿಸಿದರು. ರಾಸಾಯನಿಕ ವಸ್ತುಗಳು ಹೆಚ್ಚಾಗಿರುವ ಸೋಪು, ಪೌಡರ್, ಶ್ಯಾಂಪೂ, ಬಟ್ಟೆಗಳೂ ಸೇರಿದಂತೆ ಅತಿಯಾದ ಸೌಂದರ್ಯ ವರ್ಧಕಗಳ ಬಳಕೆಯಿಂದ ಮಹಿಳೆಯರ ಹಾರ್ಮೋನ್‌ಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಬ್ರೆಸ್ಟ್, ಗರ್ಭಕೋಶದ ಕ್ಯಾನ್ಸರ್ ಮಹಿಳೆಯರಿಗೆ ಬರುವ ಸಾಧ್ಯತೆಗಳಿವೆ. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಡಾ. ಗೌರಿ ಸಲಹೆ ಮಾಡಿದರು.ಪ್ರತಿನಿತ್ಯ ಅರ್ಧ ತಾಸು ಯೋಗ, ಒಂದಷ್ಟು ನಡಿಗೆ, ಪ್ರಾಣಾಯಾಮ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಪ್ರೌಷ್ಠಿಕಾಂಶ ಗಳನ್ನೊಳಗೊಂಡ ಆಹಾರ ಸೇವನೆ ಅತ್ಯಗತ್ಯ. ಋತು ಚಕ್ರ ವ್ಯತ್ಯಯದ ಸಮಯದಲ್ಲಿ ಹಾರ್ಮೋನ್‌ಗಳ ಕಾರ್ಯ ವಿಧಾನದಲ್ಲಿ ಬದಲಾವಣೆ ಸಹಜ. ನಿದ್ರಾಹೀನತೆ, ಸಿಡುಕುತನ, ಬೆವರುವಿಕೆ, ಆಯಾಸ ಸಾಮಾನ್ಯ ಲಕ್ಷಣಗಳು. ಹೃದಯಾಘಾತ ಸೇರಿದಂತೆ ಅನೇಕ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಅಧಿಕ. ವಾಸ್ತವವಾಗಿ ಋತುಚಕ್ರ ಮಹಿಳೆಯರಿಗೆ ರಕ್ಷಣಾ ಕೊಡೆಯಂತೆ ಕಾರ್‍ಯನಿರ್ವಹಿಸುತ್ತದೆ. ಬದಲಾವಣೆಯನ್ನು ಅರ್ಥ ಮಾಡಿಕೊಂಡು ಜೀವನಶೈಲಿ ಸುಧಾರಿಸಿಕೊಂಡರೆ ಒಳಿತು ಎಂದರು.

ಅಕ್ಕಮಹಾದೇವಿ ಮಹಿಳಾಸಂಘದ ಅಧ್ಯಕ್ಷೆ ಯಮುನಾ ಸಿ.ಶೆಟ್ಟಿ ಬನದಹುಣ್ಣಿಮೆ ಪ್ರಾಮುಖ್ಯತೆ ಕುರಿತಂತೆ ಮಾತನಾಡಿದರು. ತಂಡದ ಮುಖಂಡರಾದ ವೀಣಾ ವಿಶ್ವನಾಥ್ ಮಾತನಾಡಿ, ಮೂರು ವರ್ಷ ಅವಧಿ ಕಾರ್‍ಯಕ್ರಮ ತೃಪ್ತಿ ತಂದಿದೆ ಎಂದು ಸದಸ್ಯರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

ಸದಸ್ಯರಾದ ಸುಧಾ ಶೇಖರ್ ಸ್ವಾಗತಿಸಿ, ಗೀತಾ ಬಾಲಿ ವಂದಿಸಿದರು. ಸುಜಾತಾ ಜಗದೀಶ್ ಮತ್ತು ಶರ್ಮಿಳಾ ಅಶೋಕ ಪ್ರಾರ್ಥಿಸಿದರು, ಉಷಾ ನಿರೂಪಿಸಿದರು.

ಪೋಟೋ ಫೈಲ್‌ ನೇಮ್‌ 14 ಕೆಸಿಕೆಎಂ 4ಚಿಕ್ಕಮಗಳೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಆಯೋಜಿಸಿದ್ದ ’ಬನದ ಹುಣ್ಣಿಮೆ’ ಕಾರ್‍ಯಕ್ರಮವನ್ನು ಡಾ. ಗೌರಿ ವರುಣ್‌ ಅವರು ಉದ್ಘಾಟಿಸಿದರು.