ಶಂಕರಾಚಾರ್ಯರು ರಚಿಸಿದ ಅದ್ವೈತ ಸಿದ್ಧಾಂತ ವಿಶ್ವಕ್ಕೆ ಮಾದರಿ: ಸ್ವರ್ಣವಲ್ಲೀ ಶ್ರೀ

| Published : May 02 2025, 12:16 AM IST

ಶಂಕರಾಚಾರ್ಯರು ರಚಿಸಿದ ಅದ್ವೈತ ಸಿದ್ಧಾಂತ ವಿಶ್ವಕ್ಕೆ ಮಾದರಿ: ಸ್ವರ್ಣವಲ್ಲೀ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಬ್ಬರಿಗೂ ಪ್ರಾತಃಸ್ಮರಣೀಯರಾದ ಶಂಕರಾಚಾರ್ಯರು ರಚಿಸಿದ ಅದ್ವೈತ ಸಿದ್ಧಾಂತ ವಿಶ್ವಕ್ಕೆ ಮಾದರಿಯಾಗಿದೆ

ಶಿರಸಿ: ಪ್ರತಿಯೊಬ್ಬರಿಗೂ ಪ್ರಾತಃಸ್ಮರಣೀಯರಾದ ಶಂಕರಾಚಾರ್ಯರು ರಚಿಸಿದ ಅದ್ವೈತ ಸಿದ್ಧಾಂತ ವಿಶ್ವಕ್ಕೆ ಮಾದರಿಯಾಗಿದೆ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ಅವರು ನಗರದ ಯೋಗ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಶಂಕರ ಜಯಂತಿ ದಾರ್ಶನಿಕ ದಿನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಶಂಕರಾಚಾರ್ಯರ ಜಯಂತಿ ಎಂದರೆ ವಿಶ್ವದ ದಾರ್ಶನಿಕರ ದಿನ. ದಾರ್ಶನಿಕರು ಎಂಬ ಶಬ್ದ ಬಂದಾಗ ಶಂಕರಾಚಾರ್ಯರ ಹೆಸರು ಮೊದಲು ಬರುತ್ತದೆ. ಶಂಕರಾಚಾರ್ಯರು ನಿಂತ ನೆಲ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದೆ. ಅಲ್ಲಿನ ಜನರಿಗೆ ಶಂಕರರು ಪ್ರಾತಃ ಸ್ಮರಣೀಯರು. ಅಂತಹ ಕಾಶ್ಮೀರದಲ್ಲಿ ಇಂದು ಯುದ್ಧದ ಸನ್ನಿವೇಶ ನಿರ್ಮಾಣವಾಗಿದೆ. ಈ ವರ್ಷದ ಶಂಕರಾಚಾರ್ಯ ಜಯಂತಿಗೆ ಬಹಳ ಮಹತ್ವವಿದೆ. ಅವರು ನೆಲೆ ನಿಂತ ನೆಲ ನಮಗೆ ಸೇರುವಂತಾವಲಿ ಎಂದು ಪ್ರಾರ್ಥಿಸೋಣ ಎಂದರು.

ಶಂಕರರು ಸಾವಿರಾರು ಸ್ತೋತ್ರಗಳನ್ನು ರಚಿಸಿದ್ದಾರೆ. ವಿಸ್ತಾರವಾದ ಸ್ತೋತ್ರ ಸಾಹಿತ್ಯ ಕೊಟ್ಟಿರುವುದು ಸಾಮಾನ್ಯ ಜನರಿಗೆ ಬಹಳ ಅನುಕೂಲವಾಗಿದೆ. ರಾಮಕೃಷ್ಣ ಪರಮಹಂಸರ ಚಿಂತನೆ, ಶಂಕರಾಚಾರ್ಯರ ಚಿಂತನೆಗೆ ಬಹಳ ಹತ್ತಿರವಾಗಿದೆ. ಹಾಗಾಗಿ ಪ್ರತಿವರ್ಷ ಶಂಕರ ಜಯಂತಿಗೆ ರಾಮಕೃಷ್ಣ ಮಠದ ಯತಿಗಳನ್ನು ನಾವು ಆಹ್ವಾನಿಸುತ್ತೇವೆ ಎಂದ ಶ್ರೀಗಳು, ಎರಡು ದಿನಗಳ ಕಾಲ ಶಂಕರರ ಸ್ತೋತ್ರ ಪಾರಾಯಣಗಳು ನಡೆಯುತ್ತಿದೆ. ಶಂಕರರ ಚಿಂತನಾ ಶೈಲಿ, ಧಾರ್ಮಿಕ ಜೀವನ ನಮಗೆ ಹತ್ತಿರವಾಗಲಿ ಎಂದರು.

ಸಾನ್ನಿಧ್ಯ ವಹಿಸಿದ್ದ ತುಮಕೂರು ಮಾದಿಹಳ್ಳಿ ರಾಮಕೃಷ್ಣಮಠದ ಮಂಗಲಾನಾಥಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಶಂಕರಾಚಾರ್ಯರ ಜ್ಞಾನದ ಆಳವನ್ನು ಸಾಮಾನ್ಯ ಜೀವಿ ಅಳೆಯಲು ಸಾಧ್ಯವಿಲ್ಲ. ಆತ್ಮಜ್ಞಾನದ ವಿಚಾರವನ್ನು ನಮ್ಮಲ್ಲಿ ಪ್ರತಿ ದಿನ ಪ್ರತಿಕ್ಷಣ ಜಾಗೃತಿಗೊಳಿಸಿಕೊಳ್ಳಬೇಕು. ನಮ್ಮ ದೇಶವನ್ನು ಉಳಿಸಿರುವುದು ವೇದಾಂತವಾಗಿದ್ದು, ಬಂಧನಕ್ಕೆ ಮೂಲ ಕಾರಣ ತಿಳಿಯದಿದ್ದರೆ ಮೋಕ್ಷ ಸಿಗಲು ಸಾಧ್ಯವಿಲ್ಲ. ವೇದಾಂತವನ್ನು ಆಳವಾಗಿ ಅಧ್ಯಯನ ಮಾಡಬೇಕು. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕಾರ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದರು.

ಈ ಸಂದರ್ಭದಲ್ಲಿ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಅವರಿಗೆ ಸಾಧನಾ ಶಂಕರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ತಮ್ಮಣ್ಣ ಬೀಗಾರ ಮಾತನಾಡಿ, ಶಿಕ್ಷಕನಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾನೆ. ಮಕ್ಕಳು ಹಾಗೂ ಪ್ರಕೃತಿಯನ್ನು ಆರಾಧಿಸುತ್ತಾ ಬಂದಿದ್ದೇನೆ. ಜಗತ್ತಿನ ಸಮಸ್ತರ ಜೀವನ ಶಾಂತಿ ನೆಮ್ಮಯಿಂದ ಇರಬೇಕು ಎಂದು ದಾರ್ಶನಿಕರು ನಮಗೆ ಮಾರ್ಗದರ್ಶನ ನೀಡಿದ್ದಾರೆ. ಪ್ರಕೃತಿ ಸಹ ನಮಗೆ ಜೀವನದ ಪಾಠ ಕಲಿಸುತ್ತದೆ. ಶುದ್ಧ ಮನಸ್ಸು ಮಕ್ಕಳಲ್ಲಿ ಇರುತ್ತದೆ. ಮಕ್ಕಳ ಸ್ವಭಾವವನ್ನು ಇಟ್ಟುಕೊಂಡು ಹೋದರೆ ನಮಗೆ ಜೀವನದುದ್ದಕ್ಕೂ ಚೈತನ್ಯ ತುಂಬುತ್ತದೆ. ಸಂಸ್ಕಾರವನ್ನು ನಾವು ಪಾಲಿಸಬೇಕು. ನಾವು ಸಂಸ್ಕಾರವನ್ನು ಪಾಲಿಸಿದರೆ ಮಕ್ಕಳು ಸಹ ಸಂಸ್ಕಾರವಂತರಾಗುತ್ತಾರೆ. ನಮ್ಮ ನಡೆನುಡಿಗಳನ್ನು ಮಕ್ಕಳು ಪಾಲಿಸುತ್ತಾರೆ ಎಂದರು.

ಸೋಂದಾ ಸ್ವರ್ಣವಲ್ಲೀಯ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ವೇದಾಂತ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಗಣಪತಿ ಭಟ್ಟ ಇದ್ದರು. ವಿದ್ವಾನ್ ಶಂಕರ ಭಟ್ ಉಂಚಳ್ಳಿ ಸ್ವಾಗತಿಸಿ, ನಿರೂಪಿಸಿದರು. ಗುರುವಾರ ಮುಂಜಾನೆಯಿಂದ ಯೋಗ ಮಂದಿರದಲ್ಲಿ ಮಾತೆಯರಿಂದ ಶಂಕರ ಸ್ತೋತ್ರ ಪಾರಾಯಣ ನಡೆಯಿತು.