ಏಕಸ್ ಗ್ರೂಪ್ ಮತ್ತು ಧಾರವಾಡ ಐಐಟಿ ಜತೆಗೂಡಿ ವಸ್ತು ವಿಜ್ಞಾನ (ಮೆಟೀರಿಯಲ್ಸ್ ಸೈನ್ಸ್) ಮತ್ತು ಉತ್ಪಾದನಾ ನಾವೀನ್ಯತೆಯ ಸುಧಾರಿತ ಸಂಶೋಧನೆ ಮತ್ತು ಅಭಿವೃದ್ಧಿ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಿವೆ.

ಧಾರವಾಡ:

ಏಕಸ್ ಗ್ರೂಪ್ ಮತ್ತು ಧಾರವಾಡ ಐಐಟಿ ಜತೆಗೂಡಿ ವಸ್ತು ವಿಜ್ಞಾನ (ಮೆಟೀರಿಯಲ್ಸ್ ಸೈನ್ಸ್) ಮತ್ತು ಉತ್ಪಾದನಾ ನಾವೀನ್ಯತೆಯ ಸುಧಾರಿತ ಸಂಶೋಧನೆ ಮತ್ತು ಅಭಿವೃದ್ಧಿ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಿವೆ.

ಈ ಸೌಲಭ್ಯವು ಸುಧಾರಿತ ವಸ್ತುಗಳ ಗುಣಲಕ್ಷಣ, ವೈಫಲ್ಯ ವಿಶ್ಲೇಷಣೆ, ಉತ್ಪಾದನಾ ವಿಧಾನದ ಪ್ರತ್ಯನುಕರಣೆ (ಸಿಮ್ಯುಲೇಶನ್) ಮತ್ತು ಕಾರ್ಯ ಸಾಧು ಪರಿಣಾಮಕಾರಿತ್ವ (ಆಪ್ಟಿಮೈಸೇಷನ್) ಬೆಂಬಲಿಸಲು ಸಜ್ಜುಗೊಂಡಿದೆ. ಇದು ನಿಖರತೆ-ಚಾಲಿತ ಉತ್ಪಾದನಾ ಕ್ಷೇತ್ರಗಳಲ್ಲಿ ಆಳವಾದ ಉದ್ಯಮ-ಶೈಕ್ಷಣಿಕ ಸಹಭಾಗಿತ್ವವನ್ನು ಸಕ್ರಿಯಗೊಳಿಸುತ್ತದೆ.

ಈ ಉಪಕ್ರಮವು ಮುಂಬರುವ ದಿನಗಳಲ್ಲಿ ಅನ್ವಯಿಕ ಸಂಶೋಧನೆ ಹೆಚ್ಚಿಸಲು, ನಾವೀನ್ಯತೆ ಬೆಳೆಸಲು ಮತ್ತು ಪ್ರಯೋಗಾಲಯ ವಿಜ್ಞಾನ ಮತ್ತು ಕೈಗಾರಿಕಾ ಅನ್ವಯಿಕೆಗಳ ನಡುವಿನ ಅಂತರ ಕಡಿಮೆ ಮಾಡಲು ಸಮರ್ಪಿತವಾದ "ಐಐಟಿ ಧಾರವಾಡ-ಏಕಸ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಕ್ಕೆ ಭದ್ರ ಬುನಾದಿ ಹಾಕುತ್ತದೆ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿದ ಏಕಸ್ ಲಿಮಿಟೆಡ್‌ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಸಿಇಒ ಅರವಿಂದ್ ಮೆಲ್ಲಿಗೇರಿ, ಈ ಪಾಲುದಾರಿಕೆಯು ಸಂಶೋಧನೆ, ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ನಿರಂತರ ಹೂಡಿಕೆಗಳ ಮೂಲಕ ಭಾರತದ ಮುಂದುವರಿದ ಉತ್ಪಾದನಾ ಪರಿಸರ ವ್ಯವಸ್ಥೆ ಬಲಪಡಿಸುವ ಏಕಸ್‌ನ ದೀರ್ಘಕಾಲೀನ ಬದ್ಧತೆ ಪ್ರತಿ ಬಿಂಬಿಸುತ್ತಿದೆ. ಈ ಸಹಭಾಗಿತ್ವವು ಐಐಟಿ-ಧಾರವಾಡದ ಅನ್ವಯಿಕ ಸಂಶೋಧನಾ ಸಾಮರ್ಥ್ಯ ಮತ್ತು ಉದ್ಯಮದ ತೊಡಗಿಸಿಕೊಳ್ಳುವಿಕೆ ಹೆಚ್ಚಿಸುತ್ತದೆ, ಜತೆಗೆ ಏಕಸ್ ತನ್ನ ಗ್ರಾಹಕರಿಗೆ ಅತ್ಯಾಧುನಿಕ ಉತ್ಪನ್ನ ತಲುಪಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.

ಧಾರವಾಡ ಐಐಟಿ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ಆರ್. ದೇಸಾಯಿ ಮಾತನಾಡಿ, ಈ ಸುಧಾರಿತ ವಸ್ತುಗಳ ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯವನ್ನು ಏಕಸ್ ನೊಂದಿಗೆ ಕಾರ್ಯಗತಗೊಳಿಸುವ ಈ ಸಹಭಾಗಿತ್ವವು ಐಐಟಿಯಲ್ಲಿ ಉದ್ಯಮ-ಸಂಯೋಜಿತ ಸಂಶೋಧನೆ ಬಲಪಡಿಸುವಲ್ಲಿ ಒಂದು ದಿಟ್ಟ ಹೆಜ್ಜೆಯಾಗಿದೆ. ಈ ಸಹಭಾಗಿತ್ವದಿಂದ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ನೈಜ ಜಗತ್ತಿನ ಉತ್ಪಾದನಾ ಸವಾಲುಗಳಿಗೆ ನೇರವಾಗಿ ಒಡ್ಡಿಕೊಳ್ಳಲು ಸಾಧ್ಯವಾಗಲಿದೆ. ಅದೇ ಸಮಯದಲ್ಲಿ ಹೆಚ್ಚಿನ ಪ್ರಭಾವ ಅಥವಾ ಪರಿಣಾಮ ಬೀರುವ ಕೈಗಾರಿಕಾ ನಾವೀನ್ಯತೆಗಳಿಗೆ ಅರ್ಥಪೂರ್ಣ ಕೊಡುಗೆ ನೀಡುತ್ತದೆ. ವಸ್ತು ವಿಜ್ಞಾನ ಮತ್ತು ಮುಂದುವರಿದ ಉತ್ಪಾದನೆಯ ಉದಯೋನ್ಮುಖ ಕ್ಷೇತ್ರಗಳಲ್ಲಿ ಆಳವಾದ ಶೈಕ್ಷಣಿಕ-ಉದ್ಯಮ ಏಕೀಕರಣಕ್ಕೆ ನಾವು ಇದನ್ನು ಒಂದು ಮಾದರಿಯಾಗಿ ನೋಡುತ್ತೇವೆ ಎಂದು ತಿಳಿಸಿದರು.

ಈ ವೇಳೆ ಏಕಸ್‌ನ ಶೀತಲ್‌ ಜಾಧವ, ಮೋಹನ್ ಪಿ, ಐಐಟಿಯ ಡಾ. ವೆಂಕಪ್ಪಯ್ಯ ದೇಸಾಯಿ, ಡಾ. ಕೋಟೇಶ್ವರರಾವ್ ಕೊಂಡೆಪು, ಡಾ. ಸತ್ಯಪ್ರಿಯಾ ಗುಪ್ತಾ , ಡಾ. ರಾಕೇಶ್ ಲಿಂಗಂ, ಡಾ. ಸೋಮಶೇಖರ, ಚೇತನ್, ಚೇತನ್ ತೋಟದ ಇದ್ದರು.