ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಕೆಯಿಂದ ದುಷ್ಪರಿಣಾಮ

| Published : Dec 23 2023, 01:46 AM IST

ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಕೆಯಿಂದ ದುಷ್ಪರಿಣಾಮ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡ ಕೃಷಿ ಇಲಾಖೆಯ ವಿವಿಧ ಯೋಜನೆಗಳಿಗೆ ಚಾಲನೆ ಹಾಗೂ ಕೃಷಿ ಸಲಕರಣೆಗಳ ವಿತರಣಾ ಸಮಾರಂಭದಲ್ಲಿ ಶಾಸಕ ರಾಜು ಕಾಗೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಅಥಣಿ

ಹವಾಮಾನ, ಮಳೆ ಮತ್ತು ಗಾಳಿ ಸಕಾಲಕ್ಕೆ ದೊರಕದೇ ಇರುವುದರಿಂದ ಬರಗಾಲದಂತ ಪರಿಸ್ಥಿತಿ ಎದುರಿಸಬೇಕಾಗಿದೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.

ಪಟ್ಟಣದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡ ಕೃಷಿ ಇಲಾಖೆಯ ವಿವಿಧ ಯೋಜನೆಗಳಿಗೆ ಚಾಲನೆ ಹಾಗೂ ಕೃಷಿ ಸಲಕರಣೆಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿಜ್ಞಾನ, ತಂತ್ರಜ್ಞಾನ ಬೆಳದಂತೆ ಯಾಂತ್ರಿಕ ಕೃಷಿ ಅಧಿಕವಾಗಿದ್ದು, ದಿನನಿತ್ಯ ಓಡಾಡಲು ವಾಹನಗಳು ಕೂಡ ಅಧಿಕವಾಗಿರುವುದರಿಂದ ನಮ್ಮ ನಿಸರ್ಗ ಮತ್ತು ಕೃಷಿಯ ಮೇಲೆ ದುಷ್ಪರಿಣಾಮ ಬೀರಿದೆ. ಹಾಗೆಯೇ ಕೃಷಿಯಲ್ಲಿ ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಿಂದ ನಮ್ಮೆಲ್ಲರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ರೈತರ ಭೂಮಿಗಳು ಮತ್ತು ಫಲವತ್ತಾದ ಮಣ್ಣು ಹಾಳಾಗದಂತೆ ಸಂರಕ್ಷಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಅತಿಯಾದ ನೀರಿನ ಬಳಕೆಯಿಂದ ಸವಳು ಜವಳು ಸಮಸ್ಯೆ ಕಾಡುತ್ತದೆ. ಹನಿ ನೀರಾವರಿ ಮತ್ತು ತುಂತುರು ನೀರಾವರಿ ಯೋಜನೆ ಅಳವಡಿಸಿಕೊಳ್ಳುವುದರಿಂದ ಉತ್ತಮ ಫಲವತ್ತತೆ ಕಾಯ್ದುಕೊಳ್ಳುವುದರ ಜೊತೆಗೆ ಹೆಚ್ಚು ಇಳುವರಿ ಹೊಂದಲು ಸಾಧ್ಯವಿದೆ. ಮಳೆ ನೀರಿನಿಂದ ಮಣ್ಣು ಕೊಚ್ಚಿ ಹೋಗದಂತೆ ರೈತರು ಅಲ್ಲಲ್ಲಿ ಬದುಗಳನ್ನು ನಿರ್ಮಿಸಿಕೊಳ್ಳುವುದು ಬಹಳ ಅವಶ್ಯಕ. ಒಣ ಬೇಸಾಯ ಜಮೀನುಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಾಸಕ ಲಕ್ಷ್ಮಣ ಸವದಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭವಿಷ್ಯದ ದಿನಗಳಲ್ಲಿ ಸಾವಯುವ ಕೃಷಿಗೆ ಬಂಗಾರದ ಬೆಲೆ ಬರಲಿದೆ. ವಿದೇಶಗಳಲ್ಲಿ ಸಾವಯುವ ಕೃಷಿಗೆ ಮತ್ತು ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಸಿಗುತ್ತಿರುವುದರಿಂದ ನಮ್ಮ ರೈತರು ಕೂಡ ಸಾವಯುವ ಕೃಷಿಯತ್ತ ಒಲವು ತರುವುದು ಇಂದಿನ ಅಗತ್ಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಕುಟುಂಬದ ಸದಸ್ಯರಿಗೆ ₹5 ಲಕ್ಷ ಪರಿಹಾರ ಧನ ದೃಢೀಕರಣ ಪತ್ರ ವಿತರಿಸಲಾಯಿತು. ಗ್ರಾಮೀಣ ಡಿಜಿಟಲ್ ಗ್ರಂಥಾಲಯಗಳಿಗೆ ಸ್ಮಾರ್ಟ್ ಬೋರ್ಡ್ ಮತ್ತು ಟ್ಯಾಬ್‌ಗಳನ್ನು ವಿತರಿಸಲಾಯಿತು. ವಿಶ್ವ ಬ್ಯಾಂಕ್ ರಿವಾರ್ಡ್ ಯೋಜನೆ ಅಡಿ ಮಂಜೂರಾದ ಹನಿ ನೀರಾವರಿ ಸಲಕರಣೆಗಳನ್ನು ರೈತರಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಸಿ.ಎಸ್.ನೇಮಗೌಡ, ಚಂದ್ರಕಾಂತ ಇಮ್ಮಡಿ, ಸುರೇಶ ಮಾಯಣ್ಣನವರ, ರಾಜೀವ ನಾಡಗೌಡ, ದುಂಡಪ್ಪ ಅಸ್ಕಿ, ಚಿಕ್ಕೋಡಿ ಜಂಟಿ ಕೃಷಿ ನಿರ್ದೇಶಕ ಎಚ್.ಡಿ.ಕೊಳೇಕರ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ನಿಂಗನಗೌಡ ಬಿರಾದಾರ, ತಾಲೂಕು ತಹಸೀಲ್ದಾರ್‌ ವಾಣಿ ಯು, ತಾಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ರಾಮನಗೌಡ ಪಾಟೀಲ, ಮಹದೇವ ಮಡಿವಾಳ, ಕಲ್ಮೇಶ್ ಯಲ್ಲಡಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಎಚ್.ಡಿ.ಕೋಳೆಕರ ಸ್ವಾಗತಿಸಿದರು. ಶಿಕ್ಷಕ ಸಂಗಮೇಶ ಹಚಡದ ಕಾರ್ಯಕ್ರಮ ನಿರೂಪಿಸಿದರು. ಕೃಷಿ ಅಧಿಕಾರಿ ಯಂಕಪ್ಪ ಉಪ್ಪಾರ ವಂದಿಸಿದರು.

ಕೋಟ್‌...

ನಮ್ಮ ಮಣ್ಣಿನ ಫಲವತ್ತತೆಯನ್ನು ಕಾಯ್ದುಕೊಳ್ಳದಿದ್ದರೇ ನಮ್ಮ ಮಕ್ಕಳಿಗೆ ಮುಂದಿನ ಜನಾಂಗಕ್ಕೆ ಭವಿಷ್ಯವಿಲ್ಲ. ಆದ್ದರಿಂದ ರೈತರು ಜಾಗೃತರಾಗಬೇಕು. ಸುಧಾರಿತ ಕೃಷಿಯನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು.

-ರಾಜು ಕಾಗೆ, ಕಾಗವಾಡ ಶಾಸಕರು.ಸರ್ಕಾರ ರೈತರ ಕೃಷಿ ಭೂಮಿ ಮತ್ತು ಮಣ್ಣಿನ ಸಂರಕ್ಷಣೆ ಮಾಡುವ ಉದ್ದೇಶದಿಂದ ವಿಶ್ವ ಬ್ಯಾಂಕ್ ರಿವಾರ್ಡ್ ಯೋಜನೆ ಅಡಿ ಪ್ರಾಯೋಗಿಕ ಹಂತವಾಗಿ ತಾಲೂಕಿನ ತೇಲಸಂಗ, ಹಾಲಳ್ಳಿ, ಅರಟಾಳ ಮತ್ತು ಬಾಡಗಿ ಗ್ರಾಮಗಳ 4800 ಹೆಕ್ಟೇರ್‌ ಕೃಷಿ ಭೂಮಿಯನ್ನು ಆಯ್ಕೆ ಮಾಡಿಕೊಂಡು ಸುಮಾರು ₹9 ಕೋಟಿ ವೆಚ್ಚದಲ್ಲಿ ಹನಿ ಮತ್ತು ತುಂತುರು ನೀರಾವರಿ ಯೋಜನೆಯನ್ನು ಅಳವಡಿಸಲಾಗುತ್ತಿದೆ. ನಂತರದ ದಿನಗಳಲ್ಲಿ ತಾಲೂಕಿನ ಎಲ್ಲ ಗ್ರಾಮಗಳ ರೈತರಿಗೆ ಈ ಯೋಜನೆ ಒದಗಿಸಲಾಗುವುದು.

-ಶಿವನಗೌಡ ಪಾಟೀಲ, ಜಿಲ್ಲಾ ಜಂಟಿ ನಿರ್ದೇಶಕರು.