ದುಶ್ಚಟಗಳಿಂದ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ
KannadaprabhaNewsNetwork | Published : Oct 15 2023, 12:45 AM IST
ದುಶ್ಚಟಗಳಿಂದ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಡಾ. ಶ್ವೇತಾ ಪಾಟೀಲ್ ಅಭಿಮತ ಕನ್ನಡಪ್ರಭ ವಾರ್ತೆ ಬೀದರ್ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಆಧುನಿಕ ತಂತ್ರಜ್ಞಾನದ ಬಳಕೆ ಜೊತೆಗೆ ಮಾದಕ ಪದಾರ್ಥಗಳ ಸೇವನೆ ಹೆಚ್ಚಾಗಿ ಕಂಡುಬರುತ್ತಿದೆ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಮನೋರೋಗ ವಿಭಾಗದ ಮುಖ್ಯಸ್ಥರಾದ ಡಾ. ಶ್ವೇತಾ ಪಾಟೀಲ್ ತಿಳಿಸಿದರು. ನಗರದ ಬ್ರಿಮ್ಸ್ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಾನಸಿಕ ಕಾಯಿಲೆಯಿಂದ ಬಳಲುವ ರೋಗಿಗಳು ಬ್ರಿಮ್ಸ್ ವಿಭಾಗಕ್ಕೆ ಭೇಟಿ ನೀಡಿ ಆಪ್ತ ಸಮಾಲೋಚನೆಯ ಮೂಲಕ ಸೂಕ್ತ ಚಿಕಿತ್ಸೆ ಪಡೆದುಕೊಂಡು ತಮ್ಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಕರೆ ನೀಡಿದರು. ಸಂಪನ್ಮೂಲ ವ್ಯಕ್ತಿ ಡಾ.ರಾಘವೇಂದ್ರ ವಾಘೋಲೆ ಮಾತನಾಡಿ, ವಿಶ್ವದಲ್ಲಿ ಶೇ.20ರಷ್ಟು ಜನರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದರಲ್ಲಿ ವಿಶೇಷವಾಗಿ ಯುವಜನತೆಯ ಆರು ಜನರಲ್ಲಿ ಒಬ್ಬರು ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವುದು ಕಳವಳಕಾರಿ ಎಂದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಮಹೇಶ ಬಿರಾದರ ಮಾತನಾಡಿ, ಮನುಷ್ಯನು ಮಾನಸಿಕ, ದೈಹಿಕ ಮತ್ತು ಸಾಮಾಜಿಕವಾಗಿ ಆರೋಗ್ಯವಂತರಬೇಕು. ಮಾನಸಿಕ ವಿಭಾಗದಿಂದ ರೋಗಿಗಳನ್ನು ಗುರುತಿಸಿ ಉತ್ತಮ ಚಿಕಿತ್ಸೆ ಹಾಗೂ ಪುನರ್ವಸತಿ ಕಲ್ಪಿಸಿ ಮುಖ್ಯ ವಾಹಿನಿಗೆ ತರುವ ಕಾರ್ಯ ನಡೆದಿರುವುದು ಶ್ಲಾಘನೀಯವೆಂದರು. ಬ್ರಿಮ್ಸ್ ನ ಮನೋರೋಗ ವಿಭಾಗದ ಮುಖ್ಯಸ್ಥರಾದ ಡಾ. ಶ್ವೇತಾ ಕುಣಕೇರಿ ಮಾತನಾಡಿ, ಇಂದಿನ ಯುವಸಮುದಾಯಲ್ಲಿ ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಜವಾಬ್ದಾರಿಯ ಕುರಿತು ಅರಿವು ಅಗತ್ಯವಾಗಿದೆ ಎಂದರು. ಜಿಲ್ಲಾ ಅಂಗವಿಕಲ ಮತ್ತು ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿ ನಾಗರಾಜ ಮಠ, ಡಾ. ಸುನೀಲ ತಾಪ್ಸೆ, ಡಾ. ಪೂರ್ಣಿಮಾ, ಡಾ. ಬಾಬುರಾವ್, ಡಾ. ಪ್ರೀತಂ, ಡಾ. ಶಿವಕುಮಾರ ಸಂಗನ, ಡಾ. ಮಲ್ಲಿಕಾರ್ಜುನ , ಡಾ. ರಾಜೇಶ ಹಾಗೂ ಡಾ. ಶಾಲಿನಿ ಸೇರಿದಂತೆ ಪ್ರಥಮ ವರ್ಷದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ---- ಚಿತ್ರ 14ಬಿಡಿಆರ್3 ಬೀದರ್ ನಗರದ ಬ್ರಿಮ್ಸ್ ಮಹಾವಿದ್ಯಾಲಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನ ಆಚರಣೆ ಕಾರ್ಯಕ್ರಮವನ್ನು ಡಾ. ಶ್ವೇತಾ ಪಾಟೀಲ್ ಉದ್ಘಾಟಿಸಿದರು.