ಸಾರಾಂಶ
ಧಾರವಾಡ: ಅರಣ್ಯ ನಾಶದಿಂದ ಜೀವವೈವಿಧ್ಯ ನಷ್ಟ, ಪ್ರಾಣಿಗಳು ಮತ್ತು ಸಸ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಮಲಪ್ರಭಾ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ಸದಾಶಿವಗೌಡ ಪಾಟೀಲ ಹೇಳಿದರು.
ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಸಾಮಾಜಿಕ ಅರಣ್ಯ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ ವನ ಮಹೋತ್ಸವದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.ಜಾಗತಿಕ ಹವಾಮಾನದ ಬದಲಾವಣೆ ಪರಿಣಾಮದಿಂದ ಜಲಚಕ್ರದಲ್ಲಿ ವ್ಯತ್ಯಾಸ ಉಂಟಾಗುತ್ತಿರುವುದರಿಂದ ಪ್ರವಾಹ ಮತ್ತು ಬರಗಾಲದಂಥಹ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದೇವೆ. ಏಕ ಬೆಳೆ ಪದ್ಧತಿ, ಕಬ್ಬು, ಭತ್ತ, ಗೋವಿನಜೋಳ ಮತ್ತು ಹತ್ತಿಯಂಥಹ ಬೆಳೆಗಳನ್ನು ನಿರಂತರವಾಗಿ ಬೆಳೆಯುವುದರಿಂದ ಸಸ್ಯಗಳಿಗೆ ಅವಶ್ಯಕ ಪೋಷಕಾಂಶಗಳು ದೊರೆಯದೇ ಮಣ್ಣಿನ ಫಲವತ್ತತೆ ಕುಂಠಿತವಾಗುತ್ತದೆ. ಇದರಿಂದ ಭೂಮಿಯ ಗಟ್ಟಿಯಾಗಿ ಪರಿಸರದ ತಾಪಮಾನ ಹೆಚ್ಚಾಗುತ್ತಿದೆ. ಜಾಗತಿಕ ತಾಪಮಾನ ಹೆಚ್ಚಳದಿಂದ ಮಳೆಯ ಅತಿವೃಷ್ಠಿ ಮತ್ತು ಅನಾವೃಷ್ಠಿ ಜತೆಗೆ ಜಾಗತಿಕ ಹವಾಮಾನ ವೈಪರಿತ್ಯ ಎದುರಿಸಬೇಕಾಗುತ್ತದೆ ಎಂದರು.
ಏಕಬೆಳೆ ಪದ್ಧತಿಗೆ ಬದಲಾಗಿ ಪರ್ಯಾಯ ಬೆಳೆಗಳನ್ನು ರೈತರು ಅಳವಡಿಸಿಕೊಳ್ಳಬೇಕೆಂದರು. ಕೃಷಿ ಅರಣ್ಯ ಜೊತೆಗೆ ತೋಟಗಾರಿಕೆ ಒಳಗೊಂಡು ಹತ್ತೊಂಬತ್ತು ಪ್ರತಿಶತದಷ್ಟು ಮಾತ್ರ ಅರಣ್ಯ ಲಭ್ಯವಿದೆ. ತಜ್ಞರ ವರದಿಗಳನ್ವಯ ಶೇ. 33ರಷ್ಟು ಅರಣ್ಯ ಪ್ರದೇಶವನ್ನು ಹೊಂದಿರುವ ಅವಶ್ಯಕತೆ ಇದೆ. ಆದ್ದರಿಂದ ರೈತರು ಹೊಲಗಳ ಬದುಗಳಲ್ಲಿ, ಹಳ್ಳ, ಕೆರೆದಡಗಳಲ್ಲಿ ಮತ್ತು ಲಭ್ಯವಿರುವ ಪ್ರದೇಶಗಳಲ್ಲಿ ಗಿಡಮರಗಳನ್ನು ನೆಡಬೇಕೆಂದರು. ಮರ- ಗಿಡಗಳು ಹೆಚ್ಚಾಗುವುದರಿಂದ ಮಳೆ, ಮಳೆಯಿಂದ ಬೆಳೆ, ಬೆಳೆಯಿಂದ ಆರ್ಥಿಕ ಅಭಿವೃದ್ಧಿಯ ಜತೆಗೆ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಿಸಿಕೊಡಲು ಸಾಧ್ಯವಾಗುತ್ತದೆ ಎಂದರು.ಉಪಅರಣ್ಯ ಸಂರಕ್ಷಣಾಧಿಕಾರಿ ಶಿವಕುಮಾರ ಮಾತನಾಡಿ, ಜನಸಂಖ್ಯೆಯ ಹೆಚ್ಚಳದಿಂದ ಆಹಾರ ಮತ್ತು ಇತರ ಸಂಪನ್ಮೂಲಗಳ ಬೇಡಿಕೆ ಅನಿವಾರ್ಯವಾಗಿ ಹೆಚ್ಚಾಗುತ್ತಲಿದೆ. ಅರಣ್ಯಗಳು ಮಳೆಯನ್ನು ಆಕರ್ಷಿಸುತ್ತವೆ. ಮರಗಳು ನೀರಿನ ಸಂರಕ್ಷಕಗಳಾಗಿ ಕಾರ್ಯನಿರ್ವಹಿಸುತ್ತದೆ. ಅರಣ್ಯದ ನೀರು ಸಣ್ಣ ಕವಲುಗಳಾಗಿ ನಂತರ ನದಿಗಳಾಗಿ ಹರಿಯುತ್ತವೆ ಎಂದರು.
ಕೃಷಿಯಲ್ಲಿ ಅತೀ ನೀರಿನ ಬಳಕೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ಪ್ರಸ್ತುತ ಗಿಡ ಮರಗಳ ಸಂಖ್ಯೆ ಹೆಚ್ಚಿಸುವ ಅವಶ್ಯಕತೆ ಇದೆ. ಆದರೆ, ಅರಣ್ಯ ಪ್ರದೇಶಕ್ಕೆ ಜಾಗವಿಲ್ಲ, ಆದ್ದರಿಂದ ರೈತರು ತಮ್ಮ ಹೊಲಗಳ ಬದುಗಳಲ್ಲಿ ಕನಿಷ್ಠ ಗಿಡಗಳನ್ನಾದರೂ ಬೆಳೆಸುವಂತೆ ಮತ್ತು ಇರುವ ಗಿಡಗಳನ್ನು ಸಂರಕ್ಷಿಸಬೇಕು ಎಂದರು.ವಾಲ್ಮಿ ಪ್ರಾಧ್ಯಾಪಕ ಬಿ.ವೈ. ಬಂಡಿವಡ್ಡರ, ಸುನಂದಾ ಸಿತೋಳೆ, ಸುಧೀಂದ್ರ ಕೆ.ಎಸ್, ಮಹೇಶ ಹಿರೇಮಠ ಇದ್ದರು.