ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕೃಷಿ ವಿದ್ಯಾರ್ಥಿಗಳು ಕೇವಲ ತಮ್ಮ ಆರ್ಥಿಕತೆಯನ್ನು ವೃದ್ಧಿಸಿಕೊಳ್ಳುವ ಬದಲು ಸಮಾಜದ ಕುರಿತಂತೆ ಯೋಚಿಸಿ ಸಮಾಜ ಮತ್ತು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ್ ಸಲಹೆ ನೀಡಿದರು.ತಾಲೂಕಿನ ಚಿಕ್ಕಬಳ್ಳಿ- ಆನಸೋಸಲು ಗ್ರಾಮದಲ್ಲಿ ನಡೆದ ದ್ವಿತೀಯ ವರ್ಷದ ಬಿಎಸ್ಸಿ ಕೃಷಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಕೃಷಿ ವಿದ್ಯಾರ್ಥಿಗಳ ಪಾತ್ರ ದೊಡ್ಡದಾಗಿದೆ. ವಿದ್ಯಾರ್ಥಿಗಳು ಸ್ವಾರ್ಥಪರ ಚಿಂತನೆ ಮಾಡದೆ ದೇಶದ ಬಗ್ಗೆ ಚಿಂತಿಸುವ ಅಗತ್ಯತೆಯಿದೆ. ವಿದ್ಯಾರ್ಥಿ ಜೀವನದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಒಂದು ಮಹತ್ವದ ಘಟ್ಟವಾಗಿದೆ. ವಿದ್ಯಾರ್ಥಿಗಳು ತಮ್ಮ ಇಚ್ಛಾನುಸಾರ ಎನ್‌ಎಸ್‌ಎಸ್, ಎನ್‌ಸಿಸಿ, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನಂತಹ ಶಿಬಿರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದು ವ್ಯಕ್ತಿತ್ವ ಮತ್ತು ನಾಯಕತ್ವ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಹೇಳಿದರು.ರಾಷ್ಟ್ರೀಯ ಸೇವಾ ಯೋಜನೆ ಎನ್ನುವುದು ಶಿಕ್ಷಣದ ಜೊತೆ ನಮ್ಮನ್ನು ನಾವು ಸಮುದಾಯದಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಸಮಾಜದ ನಿಜವಾದ ಸಮಸ್ಯೆಗಳನ್ನು ಅರಿತು ಆ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದು ಎಂದು ನುಡಿದರು.
ತಾಲೂಕು ಪಂಚಾಯತ್ ಮಾಜಿ ಸದಸ್ಯ ಎಂ.ಕೃಷ್ಣ, ನಿವೃತ್ತ ಎಸಿಎಫ್ ಎ.ಎಂ.ಅಣ್ಣಯ್ಯ, ಜಿಲ್ಲಾ ಕೆಡಿಪಿ ಸದಸ್ಯ ಸಿ.ಎಂ.ದ್ಯಾವಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಮಾ, ಸದಸ್ಯ ಕೃಷ್ಣ, ಮುಖಂಡರಾದ ವೆಂಕಟೇಶ್, ಮರಿಗೌಡ, ಶಂಕರೇಗೌಡ, ಎನ್‌ಎಸ್‌ಎಸ್ ಶಿಬಿರಾಧಿಕಾರಿ ಪ್ರವೀಣ್‌ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.ಆಧ್ಯಾತ್ಮದಿಂದ ನಕಾರಾತ್ಮಕ ಚಿಂತನೆಗಳು ದೂರ: ಶಾರದಾ
ಮಂಡ್ಯ: ಪ್ರಸ್ತುತ ಜೀವನಕ್ಕೆ ನಕಾರಾತ್ಮಕ ವಿಷಯಗಳ ಚಿಂತನೆಯಿಂದ ರಕ್ಷಣೆ ಬೇಕಿದ್ದು, ಆಧ್ಯಾತ್ಮದ ಮೂಲಕ ಪರಮಾತ್ಮನೊಂದಿಗೆ ಸಂಪರ್ಕ ಸಾಧಿಸಿದಾಗ ಋಣಾತ್ಮಕ ಚಿಂತನೆಗಳಿಂದ ದೂರ ಉಳಿಯಲು ಸಾಧ್ಯವಾಗಲಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ಸಂಸ್ಥೆಯ ಶಾರದಾ ಅವರು ತಿಳಿಸಿದರು.ರಕ್ಷಾ ಬಂಧನ ಅಂಗವಾಗಿ ಪತ್ರಕರ್ತರಿಗೆ ರಾಖಿ ಕಟ್ಟಿ ಮಾತನಾಡಿದ ಅವರು, ರಕ್ಷಾ ಬಂಧನ ಆಚರಣೆಯು ರಕ್ಷಣೆಯ ಸಂಕೇತವಾಗಿದ್ದು, ದೇಹ ಮತ್ತು ಆತ್ಮ ಎರಡಕ್ಕೂ ರಕ್ಷಣೆ ಬೇಕಿದೆ. ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕಿದ್ದು, ನಮ್ಮಲ್ಲಿನ ನಕಾರಾತ್ಮಕ ಚಿಂತನೆ ಬಿಡಲು ಆಂತರಿಕ ಶಕ್ತಿಯ ಕೊರತೆಯಿದೆ. ಪರಮಾತ್ಮನ ಸಂಪರ್ಕದಿಂದ ಆತ್ಮಶಕ್ತಿ ಹೆಚ್ಚಾಗಿ ಋಣಾತ್ಮಕ ಚಿಂತನೆ ದೂರವಾಗಲಿದೆ ಎಂದು ಹೇಳಿದರು.
ಸಂಸ್ಥೆಯ ವಿಜಯಲಕ್ಷ್ಮೀ ಅವರು ಮಾತನಾಡಿ, ವಸುದೇವ ಕುಟುಂಬದವರಾದ ನಮಗೆ ಲೌಕಿಕ ಬಂಧನಗಳಿದ್ದು, ಬಂಧನಕ್ಕಿಂತ ಸಂಬಂಧ ಉತ್ತಮವಾಗಿರಬೇಕು. ಬಂಧನಗಳಿಂದ ಬಿಡುಗಡೆಗೆ ದೈವದ ಮೊರೆ ಹೋಗಬೇಕಿದೆ. ಭಗವಂತನ ಬಂಧನದಿಂದ ಲೌಕಿಕ ಬಂಧನದಿಂದ ಬಿಡುಗಡೆ ಸಾಧ್ಯ ಎಂದು ತಿಳಿಸಿದರು.ರಕ್ಷಾಬಂಧನ ಪ್ರಯುಕ್ತ ರಾಖಿ ಕಟ್ಟಿ ಸಂಭ್ರಮಿಸುವುದು ಸಾಂಪ್ರದಾಯಿಕ ಆಚರಣೆಯಷ್ಟೇ. ಪವಿತ್ರ ಸಾಗರ ಭಗವಂತನ ಸಂಪರ್ಕದಿಂದ ಸಂಬಂಧದ ಆಚರಣೆಯಾಗಿ ರಕ್ಷಾ ಬಂಧನವನ್ನು ಸಂಭ್ರಮಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭ ಸಂಸ್ಥೆಯ ಗೀತಾಂಜಲಿ ಹಾಜರಿದ್ದರು.