ಕನ್ನಡಪ್ರಭ ವಾರ್ತೆ ಬೆಂಗಳೂರುನಗರದಲ್ಲಿ ಪೂರ್ವ ಮುಂಗಾರು ಮತ್ತು ಮುಂಗಾರು ಮಳೆಯ ಸಮಯದಲ್ಲಿ ಯಾವುದೇ ತೊಂದರೆ ಅಥವಾ ಪ್ರವಾಹ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಳೆ ಸಿದ್ಧತೆ ಕುರಿತು ಸುತ್ತೋಲೆ ಹೊರಡಿಸಿರುವ ಆಯುಕ್ತರು, ಜಿಬಿಎ ವ್ಯಾಪ್ತಿಯಲ್ಲಿ ಈ ಹಿಂದೆ 209 ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಲಾಗಿತ್ತು. 2025ನೇ ಸಾಲಿನಲ್ಲಿ ವಿವಿಧ ಮುಂಜಾಗೃತ ಕ್ರಮಗಳಿಂದಾಗಿ ಅವುಗಳ ಸಂಖ್ಯೆ 49ಕ್ಕೆ ಇಳಿದಿದೆ. ಉಳಿದ 49 ಪ್ರದೇಶಗಳಲ್ಲಿ ಪ್ರವಾಹ ತಡೆಗಟ್ಟಲು ಸೂಕ್ತ ಕ್ರಮ ಕೈಗೊಂಡು ಶಾಶ್ವತ ಪರಿಹಾರ ಒದಗಿಸಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಶಾಶ್ವತ ಪರಿಹಾರ ಒದಗಿಸದ ಪ್ರದೇಶಗಳಲ್ಲಿ, ನಗರ ಪಾಲಿಕೆಗಳ ಮುಖ್ಯ ಎಂಜಿನಿಯರ್‌ಗಳು ಜಿಬಿಎ ಯೋಜನಾ ಅನುಷ್ಠಾನ ಘಟಕದ ಮುಖ್ಯ ಎಂಜಿನಿಯರ್ ಜೊತೆ ಸಮನ್ವಯ ಸಾಧಿಸಿ ಮಳೆಯ ಸಮಯದಲ್ಲಿ ಯಾವುದೇ ತೊಂದರೆ ಅಥವಾ ಪ್ರವಾಹ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲಾ ನಗರ ಪಾಲಿಕೆಗಳ ಅಪರ ಆಯುಕ್ತರು ಮೇಲ್ವಿಚಾರಣೆ ವಹಿಸಿ, ಈ 49 ಪ್ರದೇಶಗಳಿಗೆ ಕೈಗೊಂಡ ಕೈಗೊಳ್ಳಲಿರುವ ಕ್ರಮಗಳ ಕುರಿತು ವರದಿ ಸಲ್ಲಿಸಬೇಕು ಎಂದು ಮುಖ್ಯ ಆಯುಕ್ತರು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

ರಾಜಕಾಲುವೆ ಕಾಮಗಾರಿ ಮುಗಿಸಿ:

ಎಲ್ಲ ರಸ್ತೆಗಳ ಮಳೆ ನೀರು ಚರಂಡಿಗಳಲ್ಲಿ ಏಪ್ರಿಲ್ ಅಂತ್ಯದೊಳಗೆ ಹೂಳು ತೆಗೆದು ಸ್ವಚ್ಛಗೊಳಿಸಬೇಕು. ಪ್ರಸ್ತುತ ಸಿಎಂಐಡಿಪಿ ಮತ್ತು ಎಸ್‌ಐಪಿ ಯೋಜನೆಗಳಡಿಯಲ್ಲಿ ಅನುಮೋದನೆಗೊಂಡ ಟೆಂಡರ್‌ಗಳಡಿ ಆರಂಭಗೊಂಡ ಕಾಮಗಾರಿಗಳಲ್ಲಿ ಆದ್ಯತೆಯ ಮೇರೆಗೆ ಹೂಳು ತೆಗೆಯುವ ಕಾರ್ಯವನ್ನು ನಿರ್ವಹಿಸಿ, ಶೋಲ್ಡರ್ ಡ್ರೈನ್‌ಗಳ ನಿರ್ಮಾಣವನ್ನು ಪೂರ್ಣಗೊಳಿಸಬೇಕು ಎಂದು ಆಯುಕ್ತರು ನಿರ್ದೇಶನ ನೀಡಿದ್ದಾರೆ.ರಸ್ತೆ ನಿರ್ವಹಣಾ ತಂಡಗಳ ಮೂಲಕ ಹೂಳು ತೆಗೆಯುವ ಕಾರ್ಯವನ್ನು ಕೈಗೊಳ್ಳಬೇಕು. ಚರಂಡಿಗಳಲ್ಲಿ ಹೂಳು ತೆಗೆಯುವಾಗ ಹತ್ತಿರದ ರಾಜಕಾಲುವೆವರೆಗೆ ಸಂಪರ್ಕ ಕಲ್ಪಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮವಹಿಸಬೇಕು. ಹೂಳು ತೆಗೆಯುವ ಸಂದರ್ಭದಲ್ಲಿ ರಾಜಕಾಲುವೆಗೆ ಸಂಪರ್ಕ ಕಲ್ಪಿಸದೇ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ಉಸ್ತುವಾರಿ ಅಭಿಯಂತರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ.


ನಿಯಂತ್ರಣ ಕೊಠಡಿಗಳಿಗೆ ಅಧಿಕಾರಿಗಳು:

ಮಳೆಗಾಲ ಆರಂಭವಾಗುವ ಮುನ್ನ ನಗರ ಪಾಲಿಕೆಗಳ ನಿಯಂತ್ರಣ ಕೊಠಡಿಗಳಿಗೆ ಪಾಲಿಕೆ, ಬೆಸ್ಕಾಂ ಹಾಗೂ ಜಲಮಂಡಳಿ ಅಧಿಕಾರಿಗಳನ್ನು ನಿಯೋಜಿಸಲು ಕ್ರಮವಹಿಸಬೇಕು. ಇದರ ಜೊತೆಗೆ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಅಧಿಕಾರಿಗಳ ಪಟ್ಟಿಯನ್ನೂ ಸಿದ್ಧಪಡಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಗೆದ್ದಲಹಳ್ಳಿ ರೈಲ್ವೆ ವೆಂಟ್ ಕಾಮಗಾರಿ ವೇಗ:

ಕಳೆದ ವರ್ಷ ಗೆದ್ದಲಹಳ್ಳಿ ರೈಲ್ವೆ ವೆಂಟ್ ಕಿರಿದಾಗಿದ್ದ ಕಾರಣ ಸಾಯಿ ಲೇಔಟ್‌ ಹಾಗೂ ಪೈ ಲೇಔಟ್‌ ಮತ್ತು ಹೆಚ್‌ಬಿಆರ್ ಲೇಔಟ್ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿತ್ತು. ರೈಲ್ವೆ ಮಾರ್ಗದಲ್ಲಿ ಹೆಚ್ಚುವರಿ ವೆಂಟ್‌ಗಳ ನಿರ್ಮಾಣ ನಡೆಯುತ್ತಿದ್ದು, ಕಾಮಗಾರಿಯನ್ನು ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಆಯುಕ್ತ ಮಹೇಶ್ವರ ರಾವ್ ಸೂಚಿಸಿದ್ದಾರೆ.

ಪ್ರವಾಹ / ಜಲಾವೃತವಾಗುವ ಸ್ಥಳಗಳು

- ಇಂದಿರಾನಗರ 100 ಅಡಿ ರಸ್ತೆಯ ನಂದಿನಿ ಹೋಟೆಲ್ ಹಿಂಭಾಗ- ಕೊನೇನ ಅಗ್ರಹಾರದ ಬಿಡಿಎ ಲೇಔಟ್ (ವಾರ್ಡ್ ಸಂಖ್ಯೆ 113)- ಹೆಚ್.ಬಿ.ಆರ್ ಲೇಔಟ್ 5ನೇ ಬ್ಲಾಕ್- ಮೈಸೂರು ರಸ್ತೆಯ ಆರ್.ಆರ್ ನಗರ ಆರ್ಚ್ ಸಿಗ್ನಲ್ ಹತ್ತಿರ- ಮಾಗಡಿ ಮೆಟ್ರೋ ನಿಲ್ದಾಣದ ಬಳಿಯ ಕರುಮಾರಿಯಮ್ಮ ದೇವಸ್ಥಾನ- ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ- ಸಿಲ್ಕ್ ಬೋರ್ಡ್ ಜಂಕ್ಷನ್- ಗುರುಪ್ಪನಪಾಳ್ಯ- ಕಂಠೀರವ ಕ್ರೀಡಾಂಗಣ- ಮಾನ್ಯತಾ ಟೆಕ್ ಪಾರ್ಕ್- ಮಾನ್ಫೋ ಕನ್ವೆನ್ಷನ್ ಸೆಂಟರ್ ಹತ್ತಿರದ ವೀರಣ್ಣಪಾಳ್ಯ ಚರಂಡಿ- ನಿಟ್ಟೆ ಮೀನಾಕ್ಷಿ ಕಾಲೇಜು ಹತ್ತಿರದ ಪ್ರದೇಶ- ಹೊರವರ್ತುಲ ರಸ್ತೆಯ ಕರಿಯಣ್ಣಪಾಳ್ಯ ಸೇತುವೆ- ಕೊಗಿಲು ಕ್ರಾಸ್, ಉಡುಪಿ ಗ್ರ್ಯಾಂಡ್ ಹೋಟೆಲ್ ಹಿಂಭಾಗ- ಪುಟ್ಟೇನಹಳ್ಳಿ ಕೆರೆ ಆವರಣ- ಸರ್ಜಾಪುರ ರಸ್ತೆಯ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಹತ್ತಿರ- ಗೆದ್ದಲಹಳ್ಳಿ, ಸಾಯಿ ಲೇಔಟ್ ಮತ್ತು ವಡ್ಡರಪಾಳ್ಯ ರೈಲ್ವೆ ಟ್ರ್ಯಾಕ್ ಪ್ರದೇಶ- ಪೈ ಲೇಔಟ್- ಎಕೋಸ್ಪೇಸ್ ಹತ್ತಿರದ ಸೌಳು ಕೆರೆ ಚರಂಡಿ- ಮುನ್ನೇಕೊಳಲು ಕೆರೆ ಹೊರಹರಿವಿನ ಚರಂಡಿ- ಫರ್ನ್ ಹ್ಯಾಬಿಟಾಟ್ ಹತ್ತಿರದ ದೊಡ್ಡನಕ್ಕುಂದಿ ಚರಂಡಿ- ಬೆಳತ್ತೂರು ಹತ್ತಿರದ ಹೆಚ್.ಡಿ.ಎಫ್.ಸಿ ಬ್ಯಾಂಕ್ ಬ‍ಳಿ ಚರಂಡಿ- ಹೂಡಿ ಹತ್ತಿರದ ದಿಯಾ ಶಾಲೆ ಬಳಿ- ಪಣತ್ತೂರು ರೈಲ್ವೆ ಸೇತುವೆ ಹತ್ತಿರ- ಎಸ್.ಜಿ.ಆರ್ ಡೆಂಟಲ್ ಕಾಲೇಜು- ಶಿವಗಂಗಾ ಲೇಔಟ್- ಕೃಷ್ಣ ಅಪಾರ್ಟ್‌ಮೆಂಟ್ ಹತ್ತಿರದ ರಿಚಿಸ್ ಗಾರ್ಡನ್- ಕೌಡೆನಹಳ್ಳಿ (ಅಂಬೇಡ್ಕರ್ ನಗರ)- ತಲಕಾವೇರಿ ಲೇಔಟ್- ಹೊರಮಾವು ಹೊಯ್ಸಳ ನಗರ- ತುಬರಹಳ್ಳಿ ಗೇಟ್ ಶಾಲೆ- ಐಟಿಪಿಎಲ್‌ನ ರಯಾನ್ ಇಂಟರ್‌ನ್ಯಾಷನಲ್ ಶಾಲೆ ಬಳಿ- ದೊಡ್ಡನೆಕ್ಕುಂದಿ ಫರ್ನ್ಸ್ ಸಿಟಿ- ಚಲ್ಲಘಟ್ಟ ನಲಪಾಡ್ ಅಕಾಡೆಮಿ ಹತ್ತಿರ - ಯಮಲೂರು ಎಪ್ಸಿಲಾನ್- ಕಾಡುಗೋಡಿಯ ರಾಮಯ್ಯ ಗಾರ್ಡನ್- ಚನ್ನಸಂದ್ರ ಮುಖ್ಯ ರಸ್ತೆ- ಹೊಸೂರು ರಸ್ತೆಯ ರಾಯಲ್ ಎನ್‌ಫೀಲ್ಡ್ ಶೋರೂಮ್ ಹತ್ತಿರ- ಯಲಚೇನಹಳ್ಳಿ ವಾರ್ಡ್‌ನ ಫೈಜಾಬಾದ್ ಮತ್ತು ಕನಕನಗರ- ಯಲಚೇನಹಳ್ಳಿ ವಾರ್ಡ್‌ನ ರಾಜ್ಯೋತ್ಸವ ನಗರ ಪೈಪ್‌ಲೈನ್ ರಸ್ತೆ- ಹೊಸೂರು ರಸ್ತೆ ಸಿಲ್ಕ್ ಬೋರ್ಡ್ ಜಂಕ್ಷನ್- ಆಕ್ಸ್‌ಫರ್ಡ್ ಕಾಲೇಜು ಹತ್ತಿರದ ಎನ್.ಹೆಚ್ ಜಂಕ್ಷನ್- ಆರ್.ಆರ್ ನಗರ ಬಿಇಎಂಎಲ್ 5ನೇ ಹಂತದ ಕಾಪಿ ಕಟ್ಟೆ ಹೋಟೆಲ್ ಹತ್ತಿರ- ಜವರೇಗೌಡನ ದೊಡ್ಡಿ, ಬಂಗಾರಪ್ಪ ನಗರ- ಕೇಂದ್ರೀಯ ನಗರ (ವಾರ್ಡ್ ಸಂಖ್ಯೆ 198)- ತಲಘಟ್ಟಪುರ ಕೆರೆ ಪಕ್ಕದ ಮಂತ್ರಿ ಲೇಕ್ ವ್ಯೂ ಅಪಾರ್ಟ್‌ಮೆಂಟ್- ಎಂ.ಇ.ಐ ಕಾಲೋನಿ (ವಾರ್ಡ್ ಸಂಖ್ಯೆ 41)- ಕಾವೇರಿ ನಗರ (ವಾರ್ಡ್ ಸಂಖ್ಯೆ 70)- ಅಬ್ಬಿಗೆರೆಯ ನಿಸರ್ಗ ಲೇಔಟ್