ಸಾರಾಂಶ
ಕನ್ನಡಪ್ರಭ ವಾರ್ತೆ ಭಾರತೀನಗರ
ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜೊತೆಗೆ ದೇಶದ ಮಹತ್ವವನ್ನು ಇಂದಿನ ಯುವ ಪೀಳಿಗೆ ಅರಿತು ಭಾರತವನ್ನು ಮುನ್ನಡೆಸಬೇಕು ಎಂದು ಭಾರತ ವಿಕಾಸ ಪರಿಷತ್‌ನ ಕರ್ನಾಟಕ ದಕ್ಷಿಣ ಪ್ರಾಂತದ ಪೂರ್ವಾಧ್ಯಕ್ಷ ಡಿ.ಪಿ.ಸ್ವಾಮಿ ಕಿವಿಮಾತು ಹೇಳಿದರು.ಹನುಮಂತನಗರದ ಭಾರತೀ ವಸತಿ ನಿಲಯದಲ್ಲಿ ಭಾರತ ವಿಕಾಸ ಪರಿಷತ್ ವತಿಯಿಂದ ಆಯೋಜಿಸಿದ್ದ ಪ್ರಾಂತ ಮಟ್ಟದ ಭಾರತ್ ಕೋ ಜಾನೋ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತೀಯ ಸಂಸ್ಕೃತಿಯು ನೆಲೆ ನಿಂತಿರುವುದು ಯುವಕರ ಆಧಾರದ ಮೇಲೆ. ಹಾಗಾಗಿ ಯುವಕರೇ ಆ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಮುಂದಾಗಬೇಕು ಎಂದರು.
ಭಾರತ ವಿಕಾಸ ಪರಿಷತ್ ಮೈಸೂರು ಪ್ರಾಂತ ಅಧ್ಯಕ್ಷ ಆರ್.ನಾಗಭೂಷಣ್ ಮಾತನಾಡಿ, ಭಾರತದ ಸಂಸ್ಕೃತಿಗೆ ಇತಿಹಾಸವಿದೆ. ವಿದೇಶಗಳಲ್ಲೂ ಅಪಾರ ಗೌರವವಿದೆ. ವಿದೇಶಿಗರು ಕೂಡ ತಮ್ಮ ಜೀವನಕ್ಕೂ ಅಳವಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.ಸ್ವಾಮಿ ವಿವೇಕಾನಂದರು ಸ್ವಾತಂತ್ರ್ಯ ಪೂರ್ವದಲ್ಲಿಯೇ ದೇಶ ವಿದೇಶಗಳಲ್ಲಿ ಭಾರತದ ಸಂಸ್ಕೃತಿಯನ್ನು ಅನಾವರಣಗೊಳಿಸಿದ್ದಾರೆ. ವಿಶ್ವವ್ಯಾಪಿ ಗೌರವ ಹೊಂದಿರುವ ನಮ್ಮ ಸಂಸ್ಕೃತಿ ಪ್ರಸ್ತುತ ಅಧೋಗತಿಗಿಳಿಯುತ್ತಿದೆ ಎಂಬ ಭಾವನೆ ವ್ಯಕ್ತವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಭಾರತ ವಿಕಾಸ ಪರಿಷತ್ ಮೈಸೂರು ಪ್ರಾಂತ ಉಪಾಧ್ಯಕ್ಷ ಎಂ.ಮಾಯಪ್ಪ ಮಾತನಾಡಿ, ಮಕ್ಕಳಲ್ಲಿ ಪುಸ್ತಕ ಪ್ರೀತಿಯನ್ನು ಹುಟ್ಟು ಹಾಕುವ ಸಲುವಾಗಿ ಭಾರತ ವಿಕಾಸ ಪರಿಷದ್‌ನಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.ನಂತರ ಕಿರಿಯರ ವಿಭಾಗ: ಚಾಮರಾಜನಗರದ ಎಂಸಿಎಸ್ (ಪ್ರಥಮ ಬಹುಮಾನ), ಜೆಎನ್‌ವಿ ಶಿವಾರಗುಡ್ಡ (ದ್ವಿತೀಯ), ಕೇಂಬ್ರಿಡ್ಜ್ ಭಾರತೀನಗರ ಶಾಲೆ(ತೃತೀಯ), ಹಿರಿಯರ ವಿಭಾಗ : ಬಿವಿಎಸ್ ನಂಜನಗೂಡು(ಪ್ರಥಮ), ಮೈಸೂರು ಗಂಗೋತ್ರಿ(ದ್ವಿತೀಯ), ಶಿವಾರ ಗುಡ್ಡ(ತೃತೀಯ) ಬಹುಮಾನ ಪಡೆದರು. ಎಲ್ಲಾ ವಿದ್ಯಾರ್ಥಿಗಳಿಗೂ ಸಮಾಧಾನಕರ ಬಹುಮಾನ ವಿತರಣೆ ಮಾಡಲಾಯಿತು.
ವೇದಿಕೆಯಲ್ಲಿ ಮೈಸೂರು ವಿಜಯ ವಿಠಲ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಸತ್ಯಪ್ರಸಾದ್, ಹನುಮಂತನಗರ ಭಾರತೀ ವಸತಿ ವಿದ್ಯಾಲಯದ ಪ್ರಾಚಾರ್ಯ ಪುಟ್ಟಸ್ವಾಮಿ, ಭಾರತೀನಗರ ಬೌದ್ಧಾಯನ ಶಾಖೆ ಅಧ್ಯಕ್ಷ ಶಿವಮಾದೇಗೌಡ, ಕಾರ್ಯದರ್ಶಿಗಳಾದ ಕೆ.ಎಸ್.ಶಿವರಾಮು, ಎಂ.ಬಿ.ಬಸವರಾಜು, ಪ್ರಾಂತ ಸಂಚಾಲಕ ಆರ್.ಶಿವಕುಮಾರ್, ಖಜಾಂಚಿ ಗಾಯಿತ್ರಿ, ಗೋವಿಂದಯ್ಯ, ಶೆಟ್ಟಹಳ್ಳಿ ಬೋರಯ್ಯ, ಗಿರೀಶ್, ರಾಜೇಗೌಡ, ಎ.ಎಲ್.ರಮೇಶ್, ಮಂಚೇಗೌಡ, ದಾಸೇಗೌಡ, ವೆಂಕಟೇಶ ಸೇರಿದಂತೆ ಹಲವರಿದ್ದರು.