ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಇಂದಿನ ಉದ್ಯೋಗ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಪೈಪೋಟಿಯನ್ನು ಗಮನದಲ್ಲಿಟ್ಟುಕೊಂಡು ಯುವಜನತೆ ತಮ್ಮ ಕ್ರಿಯಾಶೀಲತೆ, ನೈಪುಣ್ಯತೆಯನ್ನು ಮತ್ತು ಸಂವಹನ ಕಲೆಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಬಾಸ್ ಸಂಸ್ಥೆಯ ಅಖಿಲ ಭಾರತ ಮಟ್ಟದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ವಿಭಾಗದ ಮುಖ್ಯಸ್ಥೆ ಸಾಕಿನ ಬಕ್ಕರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಾಹೇ ಮತ್ತು ಬಾಸ್ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ‘ಬೃಹತ್ ಉದ್ಯೋಗ ಮೇಳ’ ಉದ್ಘಾಟಿಸಿ ಮಾತನಾಡಿ, ಉದ್ಯೋಗಮೇಳದಂತಹ ಸಮಾಜಮುಖಿ ಕಾರ್ಯಕ್ರಮಗಳು ಅತ್ಯಂತ ಪ್ರಶಂಸನೀಯವಾಗಿವೆ. ಇವತ್ತಿನ ಯುವಜನತೆ ತಮ್ಮ ಕ್ರಿಯಾಶೀಲತೆ ಮತ್ತು ಸಂವಹನ ಕಲೆಯನ್ನು ಅತ್ಯಂತ ದೂರದೃಷ್ಟಿಯನ್ನು ಇಟ್ಟುಕೊಂಡು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ ಮಾತನಾಡಿ, ಇಂದು ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವಕಾಶಗಳು ಸಾಕಷ್ಟಿವೆ. ಈ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು. ಸಾಮಾಜಿಕ ಮಾಧ್ಯಮಗಳನ್ನು ಅವಶ್ಯಕತೆಗೆ ತಕ್ಕಂತೆ ಬಳಸಿಕೊಂಡು ನಿಮ್ಮ ಜೀವನವನ್ನು ಉತ್ತಮಗೊಳಿಸಿಕೊಳ್ಳಿ ಎಂದು ಹೇಳಿದರು.ಸಾಹೇ ಕುಲಸಚಿವ ಡಾ. ಅಶೋಕ್ ಮೆಹ್ತಾ ಮಾತನಾಡಿ, ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನಾವು ಹೊಂದಾಣಿಕೆಯನ್ನು ಮಾಡಿಕೊಂಡಾಗ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಉಳಿದುಕೊಳ್ಳಬಹುದು. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಕಷ್ಟು ಉದ್ಯೋಗವಕಾಶಗಳು ಇವೆ, ಆದರೆ ಈ ಉದ್ಯೋಗಕ್ಕೆ ಬೇಕಾದ ಕೌಶಲ್ಯ ಉಳ್ಳವರು ಕಡಿಮೆಯಾಗುತ್ತಿದ್ದಾರೆ. ಹಾಗಾಗಿ ಉದ್ಯೋಗಕ್ಕೆ ತಕ್ಕ ಕೌಶಲ್ಯವನ್ನು ರೂಪಿಸಿಕೊಂಡು ನಿಮ್ಮ ಜೀವನವನ್ನು ರೂಪಿಸಿಕೊಳ್ಳಿ ಎಂದು ಹೇಳಿದರು.
ಎಸ್ ಎಸ್ ಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಎಂಎಸ್ ರವಿಪ್ರಕಾಶ್ ಮಾತನಾಡಿ, ನಾವು ಮಾಡುವ ಕೆಲಸದ ಮೇಲೆ ಅಭಿಮಾನ ಇರಿಸಿಕೊಂಡು ಕ್ಷುಲ್ಲಕ ಕಾರಣಗಳಿಗೆ ಸಿಕ್ಕ ಉದ್ಯೋಗವನ್ನು ಬಿಟ್ಟು ಬೇರೊಂದು ಉದ್ಯೋಗಕ್ಕೆ ಹೋಗದೆ ಇರುವ ಉದ್ಯೋಗದಲ್ಲಿ ಉತ್ತಮ ಸಾಧನೆ ಮಾಡಿ ಮುಂದುವರಿಯಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರ್ಥದ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಂ.ಎಸ್. ರವಿಪ್ರಕಾಶ್, ಉದ್ಯೋಗ ಮೇಳದ ಆಯೋಜಕ ಡಾ. ಶ್ರೀನಿಧಿ ಮತ್ತು ಉದ್ಯೋಗಾಧಿಕಾರಿಗಳಾದ ಡಾ. ಕಲೀಮ್, ಡಾ. ಹರೀಶ್ ಮುಂತಾದವರು ಭಾಗವಹಿಸಿದ್ದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ೧೫೦೦ ಉದ್ಯೋಗಾಂಕ್ಷಿಗಳು ಮತ್ತು ವಿವಿಧ ಕಂಪನಿಯ ೬೬ ಉದ್ಯೋಗಾಧಿಪತಿಗಳು ಮೇಳದಲ್ಲಿ ಭಾಗವಹಿಸಿದ್ದರು.ಸುಮಾರು ೧೬೦ ಉದ್ಯೋಗಾಕಾಂಕ್ಷಿಗಳಿಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಲು ಅಂತಿಮಗೊಳಿಸಿ, ಆಯ್ಕೆ ಪಟ್ಟಿ ಪ್ರಕಟಿಸಲಾಯಿತು. ಪ್ರಮುಖವಾಗಿ ವಿಶೇಷ ಚೇತನರಿಗೆ ಸಾಧ್ಯವಾಗುವಂತಹ ಉದ್ಯೋಗಗಳನ್ನು ಕೊಡಲು ಕೆಲವು ಸಂಸ್ಥೆಗಳು ಮುಂದೆ ಬಂದು ಹಲವಾರು ವಿಕಲಚೇತನರು ಸಹ ಈ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ತಮ್ಮ ಬದುಕನ್ನು ಕಟ್ಟಿಕೊಳ್ಳುವ ಉದ್ಯೋಗಗಳನ್ನು ಪಡೆದುಕೊಂಡರು.