ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರ ಆಯ್ಕೆಗೆ ಸಲಹಾ ಸಮಿತಿ

| Published : Oct 11 2025, 12:02 AM IST

ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರ ಆಯ್ಕೆಗೆ ಸಲಹಾ ಸಮಿತಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಸಾಲಿನ ‘ರಾಜ್ಯೋತ್ಸವ ಪ್ರಶಸ್ತಿ’ಗೆ ವಿವಿಧ ಕ್ಷೇತ್ರಗಳ ಸಾಧಕರ ಆಯ್ಕೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅಧ್ಯಕ್ಷತೆಯಲ್ಲಿ 47 ಮಂದಿ ಸದಸ್ಯರನ್ನೊಳಗೊಂಡ ಸಲಹಾ ಸಮಿತಿಯನ್ನು ಸರ್ಕಾರ ರಚಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರಸಕ್ತ ಸಾಲಿನ ‘ರಾಜ್ಯೋತ್ಸವ ಪ್ರಶಸ್ತಿ’ಗೆ ವಿವಿಧ ಕ್ಷೇತ್ರಗಳ ಸಾಧಕರ ಆಯ್ಕೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅಧ್ಯಕ್ಷತೆಯಲ್ಲಿ 47 ಮಂದಿ ಸದಸ್ಯರನ್ನೊಳಗೊಂಡ ಸಲಹಾ ಸಮಿತಿಯನ್ನು ಸರ್ಕಾರ ರಚಿಸಿದೆ.

ಈ ಸಮಿತಿಯು ಮಾಧ್ಯಮ, ಸಾಹಿತ್ಯ, ವೈದ್ಯಕೀಯ, ಕೃಷಿ, ಸಮಾಜ ಸೇವೆ, ಚಲನಚಿತ್ರ, ಕ್ರೀಡೆ, ಜಾನಪದ, ಸಮಾಜಸೇವೆ ಸೇರಿ ನಾನಾ ಕ್ಷೇತ್ರಗಳ ತಜ್ಞರನ್ನು ಒಳಗೊಂಡಿದೆ. ಜತೆಗೆ ಮೂರು ಪ್ರಾಧಿಕಾರಗಳು, ಹತ್ತು ಅಕಾಡೆಮಿಗಳ ಅಧ್ಯಕ್ಷರು, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಆಯುಕ್ತರುಗಳು ಪದನಿಮಿತ್ತ ಸದಸ್ಯರಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

ಚಿತ್ರನಟ ರವಿಚಂದ್ರನ್, ಮಂಡ್ಯದ ರೈತ ಮುಖಂಡರಾದ ಸುನಂದಾ ಜಯರಾಂ, ಪರಿಸರ ತಜ್ಞ ಎ.ಎನ್.ಯಲ್ಲಪ್ಪರೆಡ್ಡಿ, ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್, ಕನ್ನಡಪ್ರಭದ ಕಾರ್ಯನಿರ್ವಾಹಕ ಸಂಪಾದಕ ಎಸ್‌.ಗಿರೀಶ್‌ಬಾಬು, ಸಾಹಿತಿ ಡಾ.ಮಾಲತಿ ಪಟ್ಟಣಶೆಟ್ಟಿ ಮತ್ತಿತರರು ಈ ಸಲಹಾ ಸಮಿತಿಯಲ್ಲಿದ್ದಾರೆ.

ಸಲಹಾ ಸಮಿತಿ ಸದಸ್ಯರು:

ಬೀದರ್‌ನ ಮಾರುತಿ ಬೌದ್ಧೆ, ಉಡುಪಿಯ ಕೆ.ಪಿ.ಸುರೇಶ್‌, ಕೊಪ್ಪಳದ ಇ.ಟಿ.ರತ್ನಾಕರ್‌ ತಳವಾರ ಸೇರಿ ಸಮಾಜ ಸೇವೆಯಿಂದ ಆರು ಮಂದಿ, ಧಾರವಾಡದ ಡಾ। ಮಾಲತಿ ಪಟ್ಟಣಶೆಟ್ಟಿ, ಬೆಂಗಳೂರಿನ ಪ್ರೊ.ಜಿ.ಅಬ್ದುಲ್ ಬಷೀರ್ ಸೇರಿ ಸಾಹಿತ್ಯ ಕ್ಷೇತ್ರದಿಂದ ಏಳು ಮಂದಿ, ಮಂಡ್ಯದ ರೈತ ಮುಖಂಡರಾದ ಸುನಂದಾ ಜಯರಾಂ ಸೇರಿ ಕೃಷಿ ಕ್ಷೇತ್ರದಿಂದ ಮೂರು ಮಂದಿ, ಗದಗ್‌ನ ಸಿದ್ದಣ್ಣ ಜಕ್ಕಬಾಳ ಸೇರಿ ಜಾನಪದ ಕ್ಷೇತ್ರದಿಂದ ಮೂವರು, ಬೆಂಗಳೂರಿನ ಶ್ರೀನಿವಾಸ ಜಿ.ಕಪ್ಪಣ್ಣ ಸೇರಿ ರಂಗಭೂಮಿ ಕ್ಷೇತ್ರದಿಂದ ಇಬ್ಬರು, ವಿಜಯಪುರದ ಅನಿಲ್ ಹೊಸಮನಿ ಸೇರಿ ಮಾಧ್ಯಮ ಕ್ಷೇತ್ರದಿಂದ ಬೆಂಗಳೂರಿನ ಎಸ್‌.ಗಿರೀಶ್‌ಬಾಬು, ವಿಜಯಪುರದ ಅನಿಲ್‌ ಹೊಸಮನಿ, ಧಾರವಾಡದ ಡಾ। ಸಂಜೀವ್ ಕುಲಕರ್ಣಿ ಸೇರಿ ವೈದ್ಯಕೀಯ ಕ್ಷೇತ್ರದಿಂದ ಮೂವರು, ಧಾರವಾಡದ ಡಾ। ಎಂ.ವೆಂಕಟೇಶ್‌ ಕುಮಾರ್ ಸೇರಿ ಸಂಗೀತ ಕ್ಷೇತ್ರದಿಂದ ಇಬ್ಬರು, ಶಿವಮೊಗ್ಗದ ಗೀತಾ ದಾತಾರ್ ಸೇರಿ ನೃತ್ಯದಿಂದ ಇಬ್ಬರು, ಧಾರವಾಡದ ವೆಂಕಟೇಶ ಮಾಚಕನೂರು ಸೇರಿ ಶಿಕ್ಷಣ ಕ್ಷೇತ್ರದಿಂದ ಮೂವರು ಸದಸ್ಯರನ್ನು ನೇಮಕ ಮಾಡಲಾಗಿದೆ.

ಬೆಂಗಳೂರಿನ ಎ.ಎನ್.ಯಲ್ಲಪ್ಪ ರೆಡ್ಡಿ ಅವರನ್ನು ಕೃಷಿ ಮತ್ತು ಪರಿಸರ, ಎನ್.ಆರ್.ವಿಶುಕುಮಾರ್ ಸೇರಿ ಆಡಳಿತ ಕ್ಷೇತ್ರದಿಂದ ಇಬ್ಬರನ್ನು, ಗುಜ್ಜಾರಪ್ಪ ಅವರನ್ನು ಚಿತ್ರಕಲೆ ಕ್ಷೇತ್ರದಿಂದ, ಪ್ರೊ.ರವಿವರ್ಮ ಕುಮಾರ್ ಸೇರಿ ನ್ಯಾಯಾಂಗ ಕ್ಷೇತ್ರದಿಂದ ಇಬ್ಬರು, ಗಿರಿಜಾ ಲೋಕೇಶ್ ಕಿರುತೆರೆ/ಚಲನಚಿತ್ರ ಹಾಗೂ ವಿ.ರವಿಚಂದ್ರನ್ ಚಲನಚಿತ್ರ ಕ್ಷೇತ್ರದಿಂದ ಹಾಗೂ ಆರ್.ಉಮಾದೇವ ಸೇರಿ ಇಬ್ಬರನ್ನು ಕ್ರೀಡಾ ಕ್ಷೇತ್ರ, ಧಾರವಾಡದ ಡಾ। ಎಸ್.ಎಂ.ಶಿವಪ್ರಸಾದ್ ಸೇರಿ ಇಬ್ಬರನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಿಂದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.70 ಸಾಧಕರ ಆಯ್ಕೆ

ಕರ್ನಾಟಕ ರಾಜ್ಯೋತ್ಸವದ 70ನೇ ವರ್ಷಾಚರಣೆ ಅಂಗವಾಗಿ ಈ ಬಾರಿ 70 ಸಾಧಕರಿಗೆ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲಿದೆ. ಪ್ರಶಸ್ತಿಯು ತಲಾ ₹5 ಲಕ್ಷ ನಗದು ಹಾಗೂ 25 ಗ್ರಾಂ ಚಿನ್ನದ ಪದಕ ಒಳಗೊಂಡಿರಲಿದೆ. ಪ್ರಶಸ್ತಿಗೆ ಅರ್ಹ ವ್ಯಕ್ತಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಚಿಸಲಾಗುವ ಸಲಹಾ ಸಮಿತಿ ಹಾಗೂ ಉನ್ನತ ಮಟ್ಟದ ಆಯ್ಕೆ ಸಮಿತಿಗಳು ಅಂತಿಮಗೊಳಿಸಲಿವೆ.