ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಸುಪ್ರೀಂ ಕೋರ್ಟ್ ಆದೇಶದಂತೆ ಮತ್ತು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯ ಅನುಸಾರ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಅಸ್ಪೃಶ್ಯ ಜನಾಂಗದ ವಕೀಲ ಮಿತ್ರರ ಒಳಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ವಕೀಲರು ನಗರದದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ಗೆ ಸೋಮವಾರ ಮನವಿ ಸಲ್ಲಿಸಿದರು.ಪರಿಶಿಷ್ಟ ಜಾತಿಗಳ ಒಳಮೀಸಲಾತಿಗಾಗಿ 30 ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಅಸ್ಪೃಶ್ಯರು ಸಮಾಜದಲ್ಲಿ ಅನುಭವಿಸುತ್ತಿರುವ ಶೋಷಣೆ, ಅವಕಾಶ ವಂಚನೆ, ಹಾಗೂ ತುಳಿತಕ್ಕೊಳಗಾದವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬುದು ಸಂವಿಧಾನ ರಚನೆ ಮಾಡಿದ ಡಾ.ಬಿ.ಆರ್.ಅಂಬೇಡ್ಕರ್ ಆಶಯವಾಗಿದೆ. ಅದರಂತೆ ಪರಿಶಿಷ್ಟ ಜನಾಂಗದಲ್ಲಿರುವ ೧೦೧ ಜಾತಿಗಳಿಗೆ ಜನಸಂಖ್ಯೆ ಆಧಾರದಲ್ಲಿ ಅವಕಾಶ, ಸವಲತ್ತು ದೊರೆಯಬೇಕು ಎಂದು ಹೇಳುವ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಅನುಸರಿಸಿ ಒಳಮೀಸಲಾತಿ ವರ್ಗೀಕರಣ ಮಾಡಿ ಜಾರಿ ಮಾಡಬೇಕು ಎಂದು ವಕೀಲರಾದ ರಂಗಧಾಮಯ್ಯ, ಗೋವಿಂದರಾಜು, ಹರೀಶ್, ರಾಮಾಂಜನಯ್ಯ, ಲಿಂಗರಾಜು, ಕೆ.ಎನ್.ಹರೀಶ್, ಮರಿಚೆನ್ನಮ್ಮ ಒತ್ತಾಯಿಸಿದರು.ಪರಿಶಿಷ್ಟಜಾತಿಗಳಿಗೆ ಮೀಸಲಾತಿಯು ಅಸಮಾನವಾಗಿ ಹಂಚಿಕೆ ಆಗುತ್ತಿರುವುದನ್ನು ತಡೆದು ನ್ಯಾಯಯುತವಾಗಿ ಪೂರಕ ಅವಕಾಶ ಕಲ್ಪಿಸಬೇಕು ಎಂಬುದು ಒಳಮೀಸಲಾತಿ ಒತ್ತಾಯಕ್ಕೆ ಮುಖ್ಯ ಕಾರಣ. ಪರಿಶಿಷ್ಟರ ಪಾಲಿನ ಅತಿ ಹೆಚ್ಚಿನ ಪಾಲನ್ನು ಪರಿಶಿಷ್ಟರ ಗುಂಪಿನಲ್ಲಿರುವ ಸ್ಪರ್ಶ ಜನಾಂಗದವರು ಪಡೆದುಕೊಂಡು ಉಳಿದವರಿಗೆ ಅನ್ಯಾಯವಾಗುತ್ತಿದೆ. ಅಸ್ಪೃಶ್ಯ ಜಾತಿಯವರು ಇಂದೂ ಅವಕಾಶಗಳಿಂದ ದೂರ ಉಳಿದಿದ್ದಾರೆ. ಸುಪ್ರೀಂ ಕೋರ್ಟ್ ಇತ್ತೀಚೆಗೆ ಒಳಮೀಸಲಾತಿ ಜಾರಿ ಬಗ್ಗೆ ಆಯಾ ರಾಜ್ಯ ಸರ್ಕಾರ ತೀರ್ಮಾನಿಸಬಹುದು ಎಂದು ತಿಳಿಸಿದೆ. ಅದರಂತೆ ಈ ಸಮಾಜದ ಜಾತಿಯ ಜನಸಂಖ್ಯೆಗೆ ಆಧಾರದಲ್ಲಿ ಸವಲತ್ತು ಸಿಗಬೇಕು. ಸರ್ಕಾರ ಕೂಡಲೇ ಕ್ಯಾಬಿನೆಟ್‌ನಲ್ಲಿ ಒಳಮೀಸಲಾತಿ ಬಗ್ಗೆ ತೀರ್ಮಾನ ತೆಗೆದುಕೊಂಡು ಜಾರಿ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.ಒಳಮೀಸಲಾತಿ ಡಾ.ಅಂಬೇಡ್ಕರ್ ಅವರ ಸಿದ್ಧಾಂತದ ಭಾಗವೇ ಆಗಿದೆ. ಒಳಮೀಸಲಾತಿ ಜಾರಿಯಾದರೆ ಯಾವ ದಲಿತ ಜಾತಿಯೂ ಮೀಸಲಾತಿ ಕಳೆದುಕೊಳ್ಳುವುದಿಲ್ಲ, ಆದರೆ ಜನಸಂಖ್ಯೆ ಹಾಗೂ ಪ್ರಾತಿನಿದ್ಯದ ಆಧಾರದಲ್ಲಿ ಮೀಸಲಾತಿ ಪ್ರಮಾಣದ ಮರು ವಿಂಗಡಣೆಯಾಗುತ್ತದೆ. ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಒಳಮೀಸಲಾತಿ ಜಾರಿಗೊಳಿಸುತ್ತೇವೆ ಎಂದು ಹೇಳುವುದು, ನಂತರ ಸುಮ್ಮನಾಗುವುದು ಹೀಗೇ ನಿರಂತರವಾಗಿ ನಮ್ಮ ಜನಾಂಗದ ಮುಗ್ದತೆಯನ್ನು ವೋಟ್ ಬ್ಯಾಂಕ್‌ಗಾಗಿ ಬಳಸಿಕೊಂಡು ಚುನಾವಣೆ ಮುಗಿದ ನಂತರ ಒಳಮೀಸಲಾತಿ ವಿಚಾರ ಮರೆಯುತ್ತಾರೆ ಎಂದು ಟೀಕಿಸಿದರು.ವಕೀಲ ಮುಖಂಡರಾದ ಲಿಂಗರಾಜು, ಗೋವಿಂದರಾಜು, ಮರಿಚೆನ್ನಮ್ಮ, ಕೆ.ಎನ್.ಹರೀಶ್, ರಾಮಾಂಜನೇಯ, ವೆಂಕಟೇಶ್, ರಂಗಧಾಮಯ್ಯ, ನಾಗರಾಜು, ಹರೀಶ್, ಪಾಲಯ್ಯ, ಸುಮಲತ, ಮಂಜುಳಾ, ಮಂಗಳ, ಓಬಳೇಶ್, ಜಗದೀಶ್, ನಾಗೇಶ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.