ನೀರಿನ ಮಿತ ಬಳಕೆಗೆ ಮುಂದಾಗಿ: ನ್ಯಾಯಾಧೀಶ ಎಸ್.ಕೆ. ಜನಾರ್ದನ

| Published : Mar 24 2025, 12:32 AM IST

ಸಾರಾಂಶ

ಮನುಷ್ಯನಿಗೆ ಮಾತ್ರವಲ್ಲ ಬೆಳೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ ಕಾರ್ಖಾನೆಗಳಿಗೂ ನೀರು ಬೇಕಾಗಿದೆ.

ಹಾನಗಲ್ಲ: ಎಲ್ಲ ಜೀವಿಗಳಿಗೂ ಬದುಕುವ ಹಕ್ಕಿದೆ. ಆಹಾರ ನೀರಿನಾದಿಯಾಗಿ ಎಲ್ಲ ಅವಶ್ಯಕತೆಗಳನ್ನು ಪಡೆಯಲು ಪ್ರಾಣಿಗಳಿಗೂ ಹಕ್ಕಿದೆ. ಮನುಷ್ಯನು ಪ್ರಾಣಿಗಳ ಜೀವ ಕಾಪಾಡಲು ಮುಂದಾಗಬೇಕು ಎಂದು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಎಸ್.ಕೆ. ಜನಾರ್ದನ ತಿಳಿಸಿದರು.ತಾಲೂಕಿನ ಅರಳೇಶ್ವರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾನೂನು ಸೇವೆ ಸಮಿತಿ, ನ್ಯಾಯವಾದಿಗಳ ಸಂಘ ಆಯೋಜಿಸಿದ್ದ ವಿಶ್ವ ಗ್ರಾಹಕರ ಹಕ್ಕುಗಳ ದಿನ ಹಾಗೂ ವಿಶ್ವ ಜಲ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನುಷ್ಯನಿಗೆ ಮಾತ್ರವಲ್ಲ ಬೆಳೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ ಕಾರ್ಖಾನೆಗಳಿಗೂ ನೀರು ಬೇಕಾಗಿದೆ. ನೀರು ಉಳಿಸಿ ಬಳಸೋಣ. ಪ್ರಕೃತಿ ಮುನಿಸಿಕೊಂಡರೆ ನೀರೇ ಸಿಗದಾದೀತು. ಅಂತಹ ಸಂದರ್ಭಗಳಲ್ಲಿ ನೀರಿನ ಬೆಲೆ ಆರ್ಥವಾಗುತ್ತದೆ. ಅಂತಹ ನೀರಿನ ಹಾಹಾಕಾರವನ್ನು ಹಲವು ಸಂದರ್ಭದಲ್ಲಿ ನಾಡಿನ ಜನ ಅನುಭವಿಸಿದ್ದಾರೆ ಎಂಬುದರ ಅರಿವು ಎಲ್ಲರಿಗೂ ಇರಲಿ. ನೀರಿನ ಹಿತ ಮಿತ ಬಳಕೆಗೆ ಮುಂದಾಗಿ ಎಂದರು.ನ್ಯಾಯವಾದಿ ಎಸ್.ಎಂ. ಹಾದಿಮನಿ ಮಾತನಾಡಿ, ವಿಶ್ವ ಗ್ರಾಹಕರ ದಿನದಂದು ನಾವೆಲ್ಲ ಎಚ್ಚರಿಕೆ ವಹಿಸಬೇಕಾಗಿರುವುದು ಎಲ್ಲ ಖರೀದಿಗೆ ಕಡ್ಡಾಯವಾಗಿ ರಸೀದಿ ಪಡೆಯುವುದಾಗಿದೆ. ಎಲ್ಲ ಗ್ರಾಹಕರು ತಾವು ಖರೀದಿಸಿದ ವಸ್ತುವಿಗೆ ಸರಿಯಾದ ರಸೀದಿ ಪಡೆದಿದ್ದರೆ ಅಗತ್ಯ ಸಂದರ್ಭಗಳಲ್ಲಿ ಕಾನೂನು ಹೋರಾಟಕ್ಕೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಗ್ರಾಹಕರು ಮೋಸಕ್ಕೂ ಒಳಗಾಗಬಹುದು. ಯಾವುದೇ ವಾಹನ ಚಾಲನೆಗೆ ಎಲ್ಲರೂ 18 ವರ್ಷ ವಯಸ್ಸಿನ ವಯೋಮಿತಿ ದಾಟಿರಬೇಕು. ವಾಹನ ಚಾಲನೆಗೆ ಹೆಲ್ಮೆಟ್ ಕಡ್ಡಾಯ ಎಂದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಪ್ಪ ಕುರಿಯವರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಸುಭಾಸ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈ.ಡಿ. ಹೊಸಮನಿ, ದಿವ್ಯಾ ಡಂಬಳಪ್ಪನವರ, ಗಿರೀಶ ತವರಿ, ನಾಗರಾಜ ಡಂಬಳಪ್ಪನವರ, ಮಲ್ಲಿಕಾರ್ಜುನ ಚಿಕ್ಕೇರಿ, ಗದಿಗೆಪ್ಪ ಮಡಿವಾಳರ, ನಾಗರಾಜ ತವರಿ, ಕಲ್ಲಪ್ಪ ತಾಂಡೂರ, ನಾಗರಾಜ ಪೂಜಾರ, ಎಸ್.ಕೆ. ಶಾಸ್ತ್ರಿ, ಸಂತೋಷ, ವೀರಣ್ಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹಿರೇಕೆರೂರ ತಹಸೀಲ್ದಾರ್ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ

ಹಾವೇರಿ: ಹಿರೇಕೆರೂರು ತಹಸೀಲ್ದಾರ್ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಕಂದಾಯ ದಾಖಲೆಗಳನ್ನು ಪರಿಶೀಲಿಸಿದರು.

ಕಂದಾಯ ದಾಖಲೆಗಳ ಡಿಜಟಿಲೀಕರಣವನ್ನು ವೇಗವಾಗಿ ಮಾಡಬೇಕು ಎಂದು ಅಧಿಕಾರಿ ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದರು. ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಸಹನೆಯಿಂದ ನಡೆದುಕೊಳ್ಳಬೇಕು ಹಾಗೂ ಅವರ ಕುಂದುಕೊರತೆಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು ಎಂದು ಸಲಹೆ ನೀಡಿದರು.