ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ 11 ನೇ ವರ್ಷದ ಪಟ್ಲ ಸಂಭ್ರಮ 2026 ಕಾರ್ಯಕ್ರಮ ಮೇ 30 ರಂದು ಮಂಗಳೂರು ಹೊರವಲಯದ ಅಡ್ಯಾರ್‌ ಗಾರ್ಡನ್‌ನಲ್ಲಿ ನಡೆಯಲಿದೆ.ಫೌಂಡೇಶನ್ ಗೌರವಾಧ್ಯಕ್ಷ ಡಾ.ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.ಅಂದು ಬೆಳಗ್ಗೆ ಸಮಾರಂಭವನ್ನು ಪಾವಂಜೆ ನಾಗವೃಜ ಕ್ಷೇತ್ರದ ಧರ್ಮದರ್ಶಿ ಡಾ.ಯಾಜಿ ನಿರಂಜನ ಭಟ್ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 8.30 ರಿಂದ 9 ರ ತನಕ ಚೌಕಿ ಪೂಜೆ ಮತ್ತು ಅಬ್ಬರ ತಾಳ, 9 ರಿಂದ 11 ರ ವರೆಗೆ ಭರತನಾಟ್ಯ ಪ್ರದರ್ಶನ, 11 ರಿಂದ 1.30 ರ ವರೆಗೆ ಸಭಾ ಕಾರ್ಯಕ್ರಮ, ಮಧ್ಯಾಹ್ನ 1.30 ರಿಂದ 2 ರ ವರೆಗೆ ನಾಗವೃಜ ಕ್ಷೇತ್ರ ಪಾವಂಜೆಯ ಶ್ರೀ ವಾಣಿ ಶಾಲಾ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ, ಮಧ್ಯಾಹ್ನ 2ರಿಂದ 3.30 ರ ವರೆಗೆ ಮಹಿಳಾ ಯಕ್ಷಗಾನ, ಸಂಜೆ 3.30 ರಿಂದ 5 ರವರೆಗೆ ಯಕ್ಷಗಾನ ಹಾಸ್ಯ ವೈಭವ ನಡೆಯಲಿದೆ ಎಂದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಅವರಿಗೆ 2026 ರ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 2026 ರ ಸಾಲಿನ ಪಟ್ಲ ಪ್ರಶಸ್ತಿಯನ್ನು ಪೋಳ್ಯ ಲಕ್ಷ್ಮೀನಾರಾಯಣ ಶೆಟ್ಟಿ ಅವರಿಗೆ ನೀಡಲಾಗುವುದು.ಬೆಳಗ್ಗೆ 11 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದರು, ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಡಾ.ಸದಾಶಿವ ಶೆಟ್ಟಿ ಕನ್ಯಾನ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಎಂಆರ್‌ಜಿ ಗ್ರೂಪ್ ಕಂಪನೀಸ್ ಬೆಂಗಳೂರು ಇದರ ಅಧ್ಯಕ್ಷ ಡಾ.ಕೆ. ಪ್ರಕಾಶ್ ಶೆಟ್ಟಿ ಅತಿಥಿಯಾಗಿರುವರು ಎಂದರು.

ಟ್ರಸ್ಟ್‌ನ ಯಕ್ಷಶಿಕ್ಷಣ ಯೋಜನೆಯಲ್ಲಿ ಒಟ್ಟು 51 ಯಕ್ಷಗಾನ ಶಿಕ್ಷಕರು ರಾಜ್ಯದ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಯಕ್ಷಶಿಕ್ಷಣದ ತರಗತಿಗಳನ್ನು ನಡೆಸುತ್ತಿದ್ದಾರೆ. ಈಗಾಗಲೇ ಒಟ್ಟು 5,234 ವಿದ್ಯಾರ್ಥಿಗಳ ಯಕ್ಷಗಾನ ರಂಗಪ್ರವೇಶ ಈಗಾಗಲೇ ಸಂಪನ್ನಗೊಂಡಿದೆ ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.

ಪುರುಷೋತ್ತಮ ಭಂಡಾರಿ ಅಡ್ಯಾರ್, ಸಿಎ ಸುದೇಶ್ ಕುಮಾರ್ ರೈ, ಸವಣೂರು ಸೀತಾರಾಮ ರೈ, ಭುಜಬಲಿ ಧರ್ಮಸ್ಥಳ, ಪ್ರದೀಪ್ ಆಳ್ವ ಕದ್ರಿ, ರವಿಚಂದ್ರ ಶೆಟ್ಟಿ, ಉದಯಕುಮಾರ್ ಶೆಟ್ಟಿ, ಆರತಿ ಆಳ್ವ, ಡಾ.ಎಂ.ಪ್ರಭಾಕರ ಜೋಶಿ, ಬಾಳ ಜಗನ್ನಾಥ ಶೆಟ್ಟಿ ಇದ್ದರು.ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ 11 ವರ್ಷಗಳಲ್ಲಿ 16 ಕೋಟಿ ರು. ಮೌಲ್ಯದ ಸೇವಾ ಕಾರ್ಯಗಳನ್ನು ನೆರವೇರಿಸಿದೆ.

............


ಖ್ಯಾತ 8 ಕಲಾವಿದರಿಗೆ ತಲಾ 1 ಲಕ್ಷ ರು. ನಗದು, ಬೆಳ್ಳಿ ಪದಕ ಹಾಗೂ ಸನ್ಮಾನ ಫಲಕ ನೀಡಿ ವಿಶೇಷವಾಗಿ ಗೌರವಿಸಲಾಗಿದೆ.

ಪಟ್ಲ ಯಕ್ಷಾಶ್ರಯ ಯೋಜನೆಯಲ್ಲಿ 56 ಮನೆಗಳನ್ನು ನಿರ್ಮಿಸಿ ಕಲಾವಿದರಿಗೆ ಹಸ್ತಾಂತರಿಸಲಾಗಿದ್ದು, 60 ಮನೆಗಳು ಅಂತಿಮ ಹಂತದ ನಿರ್ಮಾಣದಲ್ಲಿವೆ. 210 ಕಲಾವಿದರಿಗೆ ತಲಾ 25,000 ಸಾವಿರ ರು. ಮನೆ ದುರಸ್ತಿ ಸಹಾಯಧನ ವಿತರಿಸಲಾಗಿದೆ.

ತೀರಾ ಅಶಕ್ತರಾದ 175 ಕಲಾವಿದರಿಗೆ ತಲಾ 50,000 ಸಾವಿರ ರು. ನೀಡಲಾಗಿದೆ. 530 ಕಲಾವಿದರಿಗೆ ಗೌರವ ಧನ ನೀಡಲಾಗಿದೆ. ಅಪಘಾತ ವಿಮಾ ಯೋಜನೆಯಡಿ ಪ್ರತಿವರ್ಷ ಸುಮಾರು 2,450 ಕಲಾವಿದರಿಗೆ 60,000 ಸಾವಿರ ರು. ವರೆಗೆ ಚಿಕಿತ್ಸಾ ವೆಚ್ಚ ಹಾಗೂ ಆಕಸ್ಮಿಕ ಮರಣದ ಸಂದರ್ಭದಲ್ಲಿ ಕುಟುಂಬಕ್ಕೆ 10 ಲಕ್ಷ ರು. ಪರಿಹಾರ ನೀಡಲಾಗುತ್ತದೆ.