ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕರ್ನಾಟಕ ಭೂ ಹಕ್ಕುದಾರರ ವೇದಿಕೆ ವತಿಯಿಂದ ಪರಿಭಾವಿತ ಅರಣ್ಯ ಎಂದು ಘೋಷಣೆ ಮಾಡಿರುವ ಬಗರ್ ಹುಕುಂ ಸಾಗುವಳಿದಾರರ ಗೋಮಾಳ ಭೂಮಿಯನ್ನು ಅರಣ್ಯ ಇಲಾಖೆಯಿಂದ ವಾಪಸ್ ಕೊಡಿಸುವಂತೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರನ್ನು ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ಮುನಿಕೃಷ್ಣಪ್ಪ ಒತ್ತಾಯಿಸಿದ್ದಾರೆ.ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಬಗರುಹುಕುಂ ಭೂ ಸಾಗುವಳಿದಾರರು ಸುಮಾರು 30-40 ವರ್ಷಗಳಿಂದ ಜೀವನೋಪಾಯಕ್ಕಾಗಿ ಸರ್ಕಾರದ ಭೂಮಿಯನ್ನು ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದಾರೆ. ಭೂ ಹಕ್ಕು, ಮಂಜೂರಾತಿ ಪಡೆಯವುದಕ್ಕಾಗಿ (ಭೂ ಸಕ್ರಮೀಕರಣಕ್ಕಾಗಿ) ನಮೂನೆ 50ಮತ್ತು 53 ಹಾಗು 57 ರಲ್ಲಿ ಸುಮಾರು ರೈತರು ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದರು.
ಪರಿಭಾವಿತ ಅರಣ್ಯದಿಂದ ಸಂಕಷ್ಟಅದರೆ ಈಗ ಸುಪ್ರಿಂಕೋರ್ಟಿ ಆದೇಶದಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 20016.99 ಹೇಕ್ಟೇರ್ ಭೂಮಿಯನ್ನು ಪರಿಭಾವಿತ ಅರಣ್ಯ ಎಂದು ಘೋಷಣೆ ಮಾಡಿರುವುದು ಬಡ ರೈತರಿಗೆ ತುಂಬಾ ತೊಂದರೆ ಯಾಗಿರುತ್ತದೆ. ಪರಿಭಾವಿತ ಅರಣ್ಯ ಎಂದು ಘೋಷಣೆಯಾಗಿರುವ ಭೂಮಿ ಗೋಮಾಳ ಎಂದು ಕಂದಾಯ ಇಲಾಖೆಯ ದಾಖಲೆಗಳಲ್ಲಿ, ಅರ್ಜಿ ಸಲ್ಲಿಸುವಾಗ ಇತ್ತು. ಈಗಲೂ ಸಹ ಅದೇರೀತಿ ಇರುವುದು ಕಂಡು ಬರುತ್ತಿರುತ್ತದೆ. ಇದು ಜೀವನೋಪಾಯಕ್ಕಾಗಿ ಸಾಗುವಳಿ ಮಾಡುತ್ತಿರುವ ಬಡ ರೈತರ ಪಾಲಿಗೆ ನುಂಗಲಾರದ ತುತ್ತಾಗಿದ್ದು,ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ ಎಂದರು.
ಸಾಗುವಳಿ ಚೀಟಿ ಪಡೆದುಕೊಂಡಿರುವ ರೈತರಿಗೆ ಖಾತೆ ಮತ್ತು ಮುಟೇಷನ್ ಮಾಡಿಕೊಟ್ಟಿಲ್ಲ, ಕೆಲವು ರೈತರಿಗೆ ಪಹಣಿ ಬಂದಿದ್ದು, ರೈತರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಈಗಾಗಲೇ ಕೃಷಿ ಸಾಲ ಪಡೆದಿದ್ದಾರೆ. ಆದರೆ ಈಗ ಪಹಣಿಯಲ್ಲಿ ಎಕರೆ ಕಾಲಂ ನಲ್ಲಿ ಸೊನ್ನೆ ಎಂದು ದಾಖಲಾಗಿದ್ದು, ಸರ್ಕಾರದಿಂದ ಬರಬೇಕಾದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ ಎಂದರು.ಅರಣ್ಯ ಇಲಾಖೆಯಿಂದ ಸಸಿ
ಈಗಾಗಲೇ ಪಹಣಿ ಮತ್ತು ಮುಟೇಷನ ಆಗಿರುವ ರೈತರುಗಳನ್ನು ಒಕ್ಕಲೆಬ್ಬಿಸಿ ಭೂಮಿಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡು ಗಿಡಗಳನ್ನು ನಾಟಿ ಮಾಡಲು ಪ್ರಯತ್ನ ಮಾಡಿದ್ದು, ರೈತರ ಜೀವನೋಪಾಯಕ್ಕೆ ತೊಂದರೆಯಾಗಿದೆ. ಸಾಗುವಳಿ ಚೀಟಿ ಪಡೆದುಕೊಂಡು ಅವರ ಹೆಸರಿಗೆ ಜಮೀನು ಖಾತೆಯಗಿದ್ದರೂ ಹದ್ದುಬಸ್ತು ಮಾಡಿಕೊಟ್ಟಿಲ್ಲ. ಈ ವಿಚಾರ ಕುರಿತಂತೆ ಹಲವು ರೈತರು ನ್ಯಾಯಾಲಯದ ಮೋರೆ ಹೋಗಿದ್ದಾರೆಂದರು.ಅದುದರಿಂದ ಬಗರು ಹುಕುಂ ಸಾಗುವಳಿದಾರರಾದ ನಮ್ಮ ಈಬೇಡಿಕೆಗಳಾದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಚಿಂತಾಮಣಿ,ಶಿಡ್ಲಘಟ್ಟ, ವಿಧಾನಸಭಾ ಕ್ಷೇತ್ರಗಳಲ್ಲಿ ಭೂ ಸಕ್ರಮೀಕರಣ ಸಮಿತಿಯನ್ನು ಶೀಘ್ರವಾಗಿ,ಕೂಡಲೆ ರಚಿಸಬೇಕು. ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ ಮತ್ತು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ರಚನೆಯಾಗಿರುವ ಭೂಸಕ್ರಮೀಕರಣ ಸಮಿತಿಗಳು ಮಂಚೇನಹಳ್ಳಿ ಮತ್ತು ಗುಡಿಬಂಡೆ ತಾಲ್ಲೂಕುಗಳಲ್ಲಿ ಸಭೆಗಳನ್ನು ನಿಯಮಾನುಸಾರ ಏರ್ಪಡಿಸಿ ಭೂ ಮಂಜೂರಾತಿ ನೀಡಬೇಕು ಎಂದರು.ಸಾಗುವಳಿ ಚೀಟಿ ವಿತರಿಸಿ
ರೈತರು 30-40 ವರ್ಷಗಳಿಂದ ಅನದೀಕೃತವಾಗಿ ಸಾಗುವಳಿ ಮಾಡುತ್ತಿದ್ದು ನಮೂನೆ 53,57ರಲ್ಲಿ ಅರ್ಜಿ ಸಲ್ಲಿಸಿರುವವರಿಗೆ ಭೂ ಮಂಜೂರಾತಿ ನೀಡಿ ಸಾಗುವಳಿ ಚೀಟಿ ವಿತರಿಸಬೇಕು. 2018-19,2020-23 ರ ಸಾಲಿನಲ್ಲಿ ಬಗರು ಹುಕುಂ ಸಮಿತಿಯಲ್ಲಿ ಭೂ ಮಂಜೂರು ಮಾಡಿರುವ ಕೆಲವು ರೈತರಿಂದ ಹಣ ಕಟ್ಟಿಸಿಕೊಂಡಿದ್ದು, ಸಾಗುವಳಿ ಚೀಟಿಗಾಗಿ ಕಾಯುತ್ತಿರುವ ರೈತರಿಗೆ ಸಾಗುವಳಿ ಚೀಟಿ ವಿತರಿಸಬೇಕು. ಈಗಾಗಲೇ ಸಾಗುವಳಿ ಚೀಟಿ ವಿತರಿಸಿರುವ ರೈತರ ಜಮೀನುಗಳನ್ನು ಜಂಟಿ ಸರ್ವೇ ಮಾಡಿ ಹದ್ದು ಬಸ್ತು ,ಆಕಾರ ಬಂದು, ಮಾಡಿಕೊಡ ಬೇಕು. ಪಹಣಿಯಲ್ಲಿ ಪಿ, ಪಿ1 ಎಂದು ನಮೂದು ಆಗಿರುವುದನ್ನು ಸರಿಪಡಿಸಬೇಕು ಎಂದು ಕೃಷಿ ಸಚಿವರಿಗೆ ಮನವಿ ಮಾಡಿದರು. .ಸುದ್ದಿಗೋಷ್ಠಿಯಲ್ಲಿ ಅಸೇಡಾ ಸಂಘಟನೆಯ ಕಾರ್ಯದರ್ಶಿ ಬಿ.ಆರ್.ಬಾಲಗಂಗಾಧರ್ ಮಂಜುನಾಥ,ಗಂಗಾಧರ, ಲಕ್ಷ್ಮಮ್ಮ,ಆವುಲಮ್ಮ,ಮಲ್ಲೇಶ,ಪುಷ್ಪಲತ ಮತ್ತಿತರರು ಇದ್ದರು.