ಕನ್ನಡಪ್ರಭ ವಾರ್ತೆ ಮಂಡ್ಯ
ಹುಟ್ಟುಹಬ್ಬಗಳ ಆಚರಣೆಗಳು ಸಾರ್ವಜನಿಕರಿಂದ ಆಚರಣೆಗೊಂಡಾಗ ಮಾತ್ರ ಸಾರ್ಥಕತೆ ಪಡೆಯುತ್ತವೆ ಎಂದು ನಿವೃತ್ತ ಪ್ರಾಂಶುಪಾಲ ಮ.ರಾಮಕೃಷ್ಣ ಹೇಳಿದರು.ನಗರದ ಗಾಂಧಿ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಎನ್.ಚಲುವರಾಯಸ್ವಾಮಿ ಅಭಿಮಾನಿಗಳ ಬಳಗದ ಸಹಯೋಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಜನ್ಮದಿನದ ಪ್ರಯುಕ್ತ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಚಲುವರಾಯಸ್ವಾಮಿ ಅವರು ಸಾರಿಗೆ, ಆರೋಗ್ಯ ಸಚಿವರಾಗಿ, ಕೃಷಿ ಸಚಿವರಾಗಿ ಅಭಿವೃದ್ಧಿಗೆ ಬೆಂಬಲವಾಗಿ ನಿಂತಿದ್ದಾರೆ. ಅಧಿಕಾರದಲ್ಲಿದ್ದಾಗ ನೆನಪಿಸಿಕೊಳ್ಳುವಂತಹ ಶಾಶ್ವತ ಕೊಡುಗೆ ನೀಡಿದ್ದಾರೆ. ಪೋಷಕರು ಮಕ್ಕಳಲ್ಲಿ ಸೇವಾ ಮನೋಭಾವ, ತ್ಯಾಗ ದೇಶಪ್ರೇಮ ಮೂಡಿಸಬೇಕು. ಹುಟ್ಟುಹಬ್ಬಗಳಲ್ಲಿ ಮಕ್ಕಳಿಗೆ ಪುಸ್ತಕಗಳನ್ನು ಕೊಂಡು ಓದಿಸುವ ಹವ್ಯಾಸ ಬೆಳೆಸಬೇಕು. ಆಗ ಮಕ್ಕಳು ದೇಶಕ್ಕೆ ಒಳಿತಾಗುವ ಕೆಲಸ ಮಾಡುತ್ತಾರೆ ಎಂದರು.ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಅಂಕಗಳ ಜೊತೆಗೆ ಬುದ್ಧಿವಂತಿಕೆ ಬೆಳೆಸಿಕೊಳ್ಳಬೇಕು. ಅಂಕವೊಂದರಿಂದಲೇ ಏನೂ ಮಾಡಲು ಸಾಧ್ಯವಿಲ್ಲ. ಕೌಶಲ್ಯ ಜ್ಞಾನ ಬೆಳೆಸಿಕೊಂಡರೆ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ ಎಂದರು.
ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಕೃಷಿ ಸಚಿವರಾಗಿ ಖಾತೆಗೆ ಮೆರುಗು ಬರುವಂತೆ ಕೆಲಸ ಮಾಡಿರುವ ಚಲುವರಾಯಸ್ವಾಮಿ ಅವರಿಗೆ ಡಿ.ಕೆ.ಶಿವಕುಮಾರ್ ಸಂಪುಟದಲ್ಲೂ ಉತ್ತಮ ಖಾತೆ ಸಿಗುವ ಮೂಲಕ ಉಜ್ವಲ ನಾಯಕರಾಗಿ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿ ಎಂದು ಆಶಿಸಿದರು.
ಚಲುವರಾಯಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಪ್ರಸನ್ನಕುಮಾರ್ ಕೆರಗೋಡು (ಶಿಕ್ಷಣ ಕ್ಷೇತ್ರ), ಡಾ.ಆರ್.ಮುರಳಿ ಮೋಹನ್ (ವೈದ್ಯಕೀಯ ಕ್ಷೇತ್ರ), ಉಮೇಶ್ ಶಿವಾರ (ಜನಪದ ಕ್ಷೇತ್ರ), ಮಧುಕುಮಾರ್ ಕಾರೆಕಟ್ಟೆ (ಕೃಷಿ ಕ್ಷೇತ್ರ) ಹಾಗೂ ಉಪನ್ಯಾಸಕಿ ಡಾ.ಎನ್.ಎಸ್.ದೇವಿಕಾ (ಜನಪದ ಸಾಹಿತ್ಯ) ಅವರನ್ನು ಅಭಿನಂದಿಸಲಾಯಿತು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಸಣ್ಣ ಕೈಗಾರಿಕೆ ಇಲಾಖೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲ ಸುಂಡಹಳ್ಳಿ ಮಂಜುನಾಥ್ ಜಿಲ್ಲಾ ಕಾಂಗ್ರೆಸ್ ವಕ್ತಾರ ಸಿ.ಎಂ.ದ್ಯಾವಪ್ಪ, ಹಿಂದುಳಿದ ವರ್ಗಗಳ ಅಧ್ಯಕ್ಷ ಸಾತನೂರು ಕೃಷ್ಣ, ಕಿರಣ್‌ಕುಮಾರ್, ಎಲ್.ಸಂದೇಶ್, ಗುರುರಾಜ್, ಚಿನಕುರಳಿ ರಮೇಶ್ ಸೇರಿದಂತೆ ಇತರರು ಹಾಜರಿದ್ದರು.ಚಲುವರಾಯಸ್ವಾಮಿ ಕೃಷಿ ಸಚಿವರಾಗಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಜಿಲ್ಲೆಗೆ ಕೊಡುಗೆಯಾಗಿ ನೀಡಿದ್ದಾರೆ. ಯುವಜನರನ್ನು ಕೃಷಿಯತ್ತ ಆಕರ್ಷಿಸುವಲ್ಲಿ, ವಿವಿಧ ಬೆಳೆಗಳನ್ನು ಬೆಳೆಯುವ ಬಗ್ಗೆ ಜ್ಞಾನ ದೊರಕಿಸುವಲ್ಲಿ ವಿಶ್ವವಿದ್ಯಾಲಯ ಮಹತ್ವದ ಪಾತ್ರ ವಹಿಸಲಿದೆ. ವಿಶ್ವವಿದ್ಯಾಲಯ ಸ್ಥಾಪನೆ ವಿಚಾರದಲ್ಲಿ ಅವರ ದೂರದೃಷ್ಟಿಯನ್ನು ಕಾಣಬಹುದು. ಮೈಷುಗರ್ ಕಾರ್ಖಾನೆಗೂ ಕಾಯಕಲ್ಪ ದೊರಕಿಸಿಕೊಟ್ಟ ಕೀರ್ತಿ ಅವರದ್ದಾಗಿದೆ.
- ಸಿ.ತ್ಯಾಗರಾಜು, ಮಾಜಿ ಅಧ್ಯಕ್ಷರು, ಮಂಡ್ಯ ತಾಪಂಅಭಿಮಾನಿಗಳಿಂದ ಚಲುವರಾಯಸ್ವಾಮಿ ಜನ್ಮದಿನಾಚರಣೆಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ಪ್ರಭಾವಿ ರಾಜಕಾರಣಿ, ಹಿರಿಯ ಶಾಸಕ ಎನ್. ಚಲುವರಾಯಸ್ವಾಮಿ ಅವರ ೬೬ನೇ ಜನ್ಮ ದಿನಾಚರಣೆ ಅಂಗವಾಗಿ ವಿವಿಧ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ನಗರದ ಶ್ರೀವಿದ್ಯಾಗಣಪತಿ ದೇವಾಲಯದಲ್ಲಿ ಅಭಿಷೇಕ, ವಿಶೇಷ ಪೂಜೆ ಆಯೋಜಿಸಿ ಚಲುವರಾಯಸ್ವಾಮಿ ಅವರಿಗೆ ಆಯಸ್ಸು, ಆರೋಗ್ಯ ಹಾಗೂ ಉನ್ನತ ಅಧಿಕಾರ ದೊರೆಯಲಿ ಎಂದು ಪ್ರಾರ್ಥಿಸಲಾಯಿತು.
ಮಿಮ್ಸ್ ಆವರಣದಲ್ಲಿರುವ ಮಮತೆಯ ಮಡಿಲು ಕೇಂದ್ರದಲ್ಲಿ ರೋಗಿಗಳಿಗೆ ಬೆಳಗಿನ ಉಪಾಹಾರ ಮಧ್ಯಾಹ್ನ ಹಾಗೂ ರಾತ್ರಿ ವೇಳೆಯ ಊಟ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು. ಸೇವಾಕಿರಣ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ಉಪಾಹಾರ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಹಮ್ಮಿಕೊಳ್ಳಲಾಗಿತ್ತು.