ಸಾರಾಂಶ
- ಸಿರಿಗೆರೆ ಶ್ರೀ, ಸರ್ಕಾರಗಳ ಶ್ರಮ ಸ್ಮರಿಸಿದ ಜನತೆ । ಬೈಪಾಸ್ ರಸ್ತೆ 50 ಮನೆಗಳು, ಹಾಸ್ಟೆಲ್, ಕಚೇರಿಗೆ ನುಗ್ಗಿದ ನೀರು - - - ಕನ್ನಡಪ್ರಭ ವಾರ್ತೆ ಜಗಳೂರು
ತಾಲೂಕಿನ ಬರಪೀಡಿತ ಪ್ರದೇಶದ ಜಗಳೂರಿನ ಕೆರೆ ದಸರಾ ಹಬ್ಬ ದಿನವಾದ ಶನಿವಾರ ಸುಮಾರು 50 ವರ್ಷಗಳ ನಂತರ ಕೋಡಿ ಬಿದ್ದು ಹರಿಯುತ್ತಿದೆ. ಈ ವಿಚಾರ ಜನರಲ್ಲಿ ಸಂಭ್ರಮ ಉಕ್ಕಿಸಿದ್ದು, ತುಂಬಿ ಹರಿಯುವ ಕೆರೆಯ ಸೊಬಗು ಕಣ್ಮನ ತುಂಬಿಕೊಳ್ಳಲು ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಜನರು ತಂಡೋಪತಂಡವಾಗಿ ಕೆರೆಯತ್ತ ಧಾವಿಸುತ್ತಿದ್ದಾರೆ.ಜಗಳೂರು ವಿಧಾನಸಭಾ ವ್ಯಾಪ್ತಿಯ ಜಗಳೂರು ಕೆರೆ ಸೇರಿದಂತೆ 57 ಕೆರೆಗಳಿಗೆ ನೀರು ಹರಿಸಲು ಕಾರಣರಾದ ಸಿರಿಗೆರೆ ಶ್ರೀಗಳ ಶ್ರಮವನ್ನು ಈ ಸಂದರ್ಭ ಸ್ಮರಿಸಿದ ಪಟ್ಟಣದ ಜನರು, ಸ್ವಾಮೀಜಿ ಅವರನ್ನು ಆಧುನಿಕ ಭಗೀರಥ ಎಂದು ಗುಣಗಾನ ಮಾಡುತ್ತಿದ್ದುದು ವಿಶೇಷವಾಗಿತ್ತು.
ಕೆರೆ ತುಂಬಿದ ಖುಷಿ ಜನರಲ್ಲಿ ಎಷ್ಟಿತ್ತೆಂದರೆ, ಕೆಲ ಮಕ್ಕಳು ನೀರಿನಲ್ಲಿ ಈಜಿದರು. ಅನೇಕ ಮಹಿಳೆಯರು ತುಂಬಿ ಹರಿಯುತ್ತಿರುವ ಗಂಗಾಮಾತೆಗೆ ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು. ಕಣ್ವಕುಪ್ಪೆ ಮಾರ್ಗವಾಗಿ ಪಲ್ಲಾಗಟ್ಟೆಗೆ ಹೋಗುವ ರಸ್ತೆ ಜಲಾವೃತವಾಗಿ ಜನರು, ವಾಹನ ಸಂಚಾರಕ್ಕೆ ಕೊಂಚ ಅಡಚಣೆಯಾಯಿತು.ಹಾಲಿ, ಮಾಜಿ ಶಾಸಕರಿಂದ ಕೆರೆ ವೀಕ್ಷಣೆ:
ಜಗಳೂರು ಕೆರೆ ಕೋಡಿ ಬೀಳುತ್ತಿದ್ದಂತೆ ಬೆಳಗ್ಗೆಯೇ ಹಾಲಿ ಶಾಸಕ ಬಿ.ದೇವೇಂದ್ರಪ್ಪ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್ ಪಿ.ರಾಜೇಶ್, ಕೆ.ಪಿ. ಪಾಲಯ್ಯ, ಎನ್.ಎಸ್.ರಾಜಣ್ಣ, ಬಿ.ಮಹೇಶ್ವರಪ್ಪ, ಆರ್.ಓಬಳೇಶ್, ನೀರಾವರಿ ಹೋರಾಟ ಸಮಿತಿ ಮುಖಂಡರು, ರೈತರು ಸೇರಿದಂತೆ ಅನೇಕ ಮುಖಂಡರು ವೀಕ್ಷಿಸಿ, ಸಂತಸಪಟ್ಟರು.ಸಂಚಾರಕ್ಕೆ ಹರಸಾಹಸ:
ಜಗಳೂರು ಕೆರೆ ಕೋಡಿಬಿದ್ದ ಪರಿಣಾಮ ಜಗಳೂರುನಿಂದ ಕಣ್ವಕುಪ್ಪೆ ಮಾರ್ಗವಾಗಿ ಪಲ್ಲಾಗಟ್ಟೆಗೆ ಹೋಗುವ ರಸ್ತೆ ಸಂಪೂರ್ಣವಾಗಿ ನೀರಿನಿಂದ ತುಂಬಿಹೋಗಿತ್ತು. ಇದರಿಂದಾಗಿ ವಾಹನಗಳು ಸೇರಿದಂತೆ ಸಾರ್ವಜನಿಕರಿಗೆ ಸಂಚರಿಸಲು ಹರಸಾಹಸ ಪಡುವಂತಾಗಿದೆ.ಸರ್ಕಾರಿ ಕಚೇರಿ, ಮನೆಗಳು ಜಲಾವೃತ:
ಮಳೆ ಹಾಗೂ ಕೆರೆಗಳ ನೀರು ಹರಿದು ಜಗಳೂರು ಕೆರೆ ಕೋಡಿ ಬಿದ್ದ ಪರಿಣಾಮ ಪಟ್ಟಣ ಕೆರೆ ಅಂಚಿನ ಬೈಪಾಸ್ ರಸ್ತೆಯಲ್ಲಿ ಮನೆ ನಿರ್ಮಾಣ ಮಾಡಿಕೊಂಡ ಸುಮಾರು 50ಕ್ಕೂ ಅಧಿಕ ಮನೆಗಳು, ಬಿಸಿಎಂ ಹಾಸ್ಟೆಲ್, ಟೆಲಿಪೋನ್ ಆಫೀಸ್ ಸಂಪೂರ್ಣ ಜಲಾವೃತವಾಗಿವೆ. ಇಲ್ಲಿ ವಾಸಿಸುವ ಜನರ ಗೋಳು ಏಳುತೀರದಾಗಿದೆ. ಜನರ ಬದುಕು ಬೀದಿಗೆ ಬಿದ್ದಂತಾಗಿದೆ. ಪೊಲೀಸ್ ಠಾಣೆ ಹಿಂಭಾಗದ ಆಸುಪಾಸಿನ ಲ್ಯಾಟ್ರಿನ್ ಪಿಟ್‌ಗಳು ಸಹ ತುಂಬಿಹೋಗಿವೆ. ಮನೆ ಕಳೆದುಕೊಂಡ ಬಯಲಿಗೆ ಬಿದ್ದ ಕುಟುಂಬಗಳಿಗೆ ಗಂಜಿಕೇಂದ್ರ ತೆರೆಯಬೇಕಿದೆ.- - -
ಬಾಕ್ಸ್ * ಶ್ರೀಗಳಿಂದ ಇಂದು ಬಾಗಿನ- ಶಾಸಕ ಜಗಳೂರು ಕೆರೆ ಸೇರಿದಂತೆ ತಾಲೂಕಿನ ಗಡಿಮಾಕುಂಟೆಕೆರೆ, ಹೊಸಕೆರೆ, ಹಿರೆಮಲ್ಲನಹೊಳೆ ಸೇರಿದಂತೆ ಬಹುತೇಕ ಕೆರೆಗಳು ಕೋಡಿ ಬಿದ್ದು ಹರಿಯುತ್ತಿವೆ. ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ನಾವು ಸಣ್ಣವರಿದ್ದಾಗ ಜಗಳೂರು ಕೆರೆಯಲ್ಲಿ ಈಜಾಡುತ್ತಿದ್ದೆವು. ಸಿರಿಗೆರೆ ಶ್ರೀಗಳ ಶ್ರಮ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಕುಮಾರಸ್ವಾಮಿ, ಹಾಲಿ ಸಿಎಂ ಸಿದ್ದರಾಮಯ್ಯ, ಸಚಿವರು, ಸಂಸದರು, ಶಾಸಕರ ಅಭಿವೃದ್ಧಿ ಸ್ಪಂದನೆ ಪ್ರತಿಫಲದಿಂದ ಜಗಳೂರು ಕೆರೆ ಕೋಡಿ ಬಿದ್ದಿದೆ. ಈಗ ಕೆರೆಗೆ ಬಾಗಿನ ಅರ್ಪಿಸಲು ಸಿರಿಗೆರೆ ಶ್ರೀಗಳು ಅಕ್ಟೋಬರ್ 13ರಂದು ಬರಲಿದ್ದಾರೆ. ನಾನು ಇಂದು ಸಿರಿಗೆರೆಗೆ ಭೇಟಿ ನೀಡಿ, ಮತ್ತೊಮ್ಮೆ ಶ್ರೀಗಳನ್ನು ಆಹ್ವಾನಿಸಲಿದ್ದೇನೆ. ಕಾರ್ಯಕ್ರಮಕ್ಕೆ ರೈತರು ಸೇರಿದಂತೆ ಸಾರ್ವಜನಿಕರು ಆಗಮಿಸುವಂತೆ ಜಗಳೂರು ಕ್ಷೇತ್ರ ಶಾಸಕ ಬಿ.ದೇವೇಂದ್ರಪ್ಪ ಮನವಿ ಮಾಡಿದರು.-ಫೋಟೋ: 1ಶಾಸಕ ದೇವೇಂದಪ್ಪ:- - - ಕೋಟ್ಸ್
ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ ತುಂಗಭದ್ರಾ ನದಿಯಿಂದ ಕ್ಷೇತ್ರದ 57 ಕೆರೆಗಳಿಗೆ ನೀರು ಬರಲು ಕಾಂಗ್ರೆಸ್ , ಬಿಜೆಪಿ, ಜೆಡಿಎಸ್ ಸರ್ಕಾರಗಳ ಪ್ರತಿಫಲ, ಸಂಸದ ಜಿ.ಎಂ. ಸಿದ್ದೇಶ್ವರ್, ಸಚಿವರಾಗಿದ್ದ ಎಸ್.ಎಸ್.ಮಲ್ಲಿಕಾರ್ಜುನ್, ಆಂಜನೇಯ, ಹಾಲಿ ಶಾಸಕ ದೇವೇಂದ್ರಪ್ಪ ಶ್ರಮ ಕಾರಣವಾಗಿದೆ. ಜೊತೆಗೆ ಮಳೆಯೂ ಬಂದಿರುವ ಪರಿಣಾಮ ಜಗಳೂರು ಕೆರೆ ಸೇರಿದಂತೆ ವಿವಿಧ ಕೆರೆಗಳು ಭರ್ತಿಯಾಗಿ ತುಂಬಿ ಹರಿಯುತ್ತಿವೆ. ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ- ಎಸ್ ವಿ.ರಾಮಚಂದ್ರ, ಮಾಜಿ ಶಾಸಕ
(-ಫೋಟೋ2: ಎಸ್.ವಿ.ರಾಮಚಂದ್ರ)1972-1973ನೇ ಸಾಲಿನಲ್ಲಿ ಜಗಳೂರು ಕೆರೆ ಕೋಡಿ ಬಿದ್ದಿತ್ತು. ಅನಂತರ ದಸರಾ ದಿನವಾದ ಶನಿವಾರ ಜಗಳೂರು ಕೆರೆ ಸೇರಿದಂತೆ ತಾಲೂಕಿನ ಅನೇಕ ಕೆರೆಗಳು ಕೋಡಿಬಿದ್ದಿವೆ. ಸಿರಿಗೆರೆ ಶ್ರೀಗಳು, ಅಂದಿನ-ಇಂದಿನ ಅವಧಿಗಳ ಮುಖ್ಯಮಂತ್ರಿಗಳು, ಸಚಿವರು, ಶಾಸಕರ ಶ್ರಮದಿಂದ ತುಂಗಭದ್ರಾ ನದಿಯಿಂದ ಕೆರೆಗಳಿಗೆ ನೀರು ಹರಿಯುವಂತಾಗಿದೆ. ಇದಕ್ಕಾಗಿ ಜನರ ಪರವಾಗಿ ಸರ್ಕಾರ, ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸುವೆ
- ಎಚ್.ಪಿ.ರಾಜೇಶ್, ಮಾಜಿ ಶಾಸಕ-ಫೋಟೋ: ಚಿತ್ರ 3- ಎಚ್.ಪಿ.ರಾಜೇಶ್
- - - -12ಜೆ.ಜಿ.ಎಲ್.4: ಜಗಳೂರು ಕೆರೆ ಕೋಡಿಬಿದ್ದು ನೀರು ಹರಿಯುತ್ತಿದ್ದು, ಜನಪ್ರತಿನಿಧಿಗಳು, ವಿವಿಧೆಡೆಗಳಿಂದ ಆಗಮಿಸಿದ ಜನರು ಕುತೂಹಲದಿಂದ ವೀಕ್ಷಿಸಿದರು. -12ಜೆಎಜಿಎಲ್5: ಜಗಳೂರು ಕೆರೆ ಕೋಡಿ ಬಿದ್ದ ಪರಿಣಾಮ ಜಗಳೂರುನಿಂದ ಕಣ್ವಕುಪ್ಪೆ ಮಾರ್ಗವಾಗಿ ಪಲ್ಲಾಗಟ್ಟೆಗೆ ಹೋಗುವ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ವಾಹನಗಳು, ಜನರು ಸಂಚರಿಸಲು ಹರಸಾಹಸಪಡುವಂತಾಗಿದೆ.