ಸಾರಾಂಶ
ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಬಾರಿಗೆ ಸಿಜೇರಿಯನ್ ಶಸ್ತ್ರ ಚಿಕಿತ್ಸೆ ನಡೆಸಿ ಹೆರಿಗೆ ಆಗಿದೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬೇಗೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ ಹತ್ತು ವರ್ಷದ ಬಳಿಕ ಗರ್ಭಿಣಿಯೊಬ್ಬರಿಗೆ ಪ್ರಥಮವಾಗಿ ಇಲ್ಲಿನ ವೈದ್ಯರು ಸಿಜೇರಿಯನ್ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.ಬೇಗೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾಲೂಕಿನ ಕೋಟೆಕೆರೆ ಗ್ರಾಮದ ರಕ್ಷಿತಾಳಿಗೆ ತಾಲೂಕು ಆರೋಗ್ಯಾಧಿಕಾರಿ, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಅಲಿಂ ಪಾಶ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ರೇಣುಕಾದೇವಿ ಸಿಜೆರಿಯನ್ ಶಸ್ತ್ರ ಚಿಕಿತ್ಸೆ ನಡೆಸಿ ಹೆರಿಗೆ ಮಾಡಿಸಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿ ಇದ್ದಾರೆ.ಕಳೆದ ಹತ್ತು ವರ್ಷಗಳಲ್ಲಿ ಬೇಗೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಜೇರಿಯನ್ ಹೆರಿಗೆ ಮಾಡಿರಲಿಲ್ಲ. ತಾಲೂಕು ಆರೋಗ್ಯಾಧಿಕಾರಿ ಡಾ.ಅಲಿಂ ಪಾಶ ಸೂಚನೆಯಂತೆ ಸಿಜೇರಿಯನ್ ಹೆರಿಗೆ ನಡೆದಿದೆ. ಈ ಸಮಯದಲ್ಲಿ ಡಾ.ಲೀಲ, ಅರವಳಿಕೆ ತಜ್ಞ ವೈದ್ಯ ಡಾ.ಪ್ರಜ್ವಲ್, ಮಕ್ಕಳ ತಜ್ಞ ವೈದ್ಯೆ ಡಾ.ವಸುದಾ ಹಾಗೂ ನರ್ಸ್‌ಗಳಾದ ಲಲಿತ, ಬಿಂದು, ಕಲ್ಪನಾ, ನಾಗಮ್ಮ ಹಾಗೂ ಅಶ್ವಿನಿ, ರಾಘವೇಂದ್ರ, ಆನಂದ, ಕುಮಾರ, ಆಶಾ ಕಾರ್ಯಕರ್ತೆ ಗಾಯಿತ್ರಿ ಇದ್ದರು.
ಹೆರಿಗೆ ಮತ್ತು ಸಿಜೇರಿಯನ್ ಹೆರಿಗೆ ಉಚಿತವಾಗಿ ಬೇಗೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೇವೆ ಸಿಗುತ್ತದೆ. ಬೇಗೂರು ಭಾಗದ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಿ.-ಡಾ.ಅಲಿಂ ಪಾಶ, ಟಿಎಚ್‌ಒ, ಆಸ್ಪತ್ರೆ ಆಡಳಿತ ವೈದ್ಯೆ