ಸಾರಾಂಶ
ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ನನ್ನನ್ನು ಚಕ್ರವ್ಯೂಹದಲ್ಲಿ ಸಿಲುಕಿಸಲು ಪ್ರಯತ್ನಿಸಬಹುದು. ಪ್ರತಿಪಕ್ಷ ರಾಜಕೀಯ ತಂತ್ರ ನಡೆಸುವುದು ಸಹಜ.
ಬಳ್ಳಾರಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತು ಅಜ್ಞಾತವಾಸದಲ್ಲಿದ್ದೆ. ಬಳ್ಳಾರಿ ಲೋಕಸಭಾ ಚುನಾವಣೆಗೆ ನನ್ನ ಟಿಕೆಟ್ ಖಚಿತವಾದ ಬಳಿಕ ಅಜ್ಞಾತವಾಸ ಮುಗಿದಂತಾಗಿದೆ ಎಂದು ಮಾಜಿ ಸಚಿವ, ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈವರೆಗಿನ ನನ್ನ ಜನಸೇವೆ ಹಾಗೂ ಪಕ್ಷ ನಿಷ್ಠೆಯನ್ನು ಗುರುತಿಸಿ ಪಕ್ಷ ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದರೂ ಪಕ್ಷ ನನ್ನ ಮೇಲೆ ಅಪಾರ ವಿಶ್ವಾಸವಿಟ್ಟಿದೆ. ಕಳೆದ ಮೂರೂವರೆ ದಶಕದ ರಾಜಕೀಯ ಕ್ಷೇತ್ರದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದಂತೆ ಕೆಲಸ ಮಾಡಿದ್ದೇನೆ. ಹೀಗಾಗಿಯೇ ನನಗೆ ಮತ್ತೊಮ್ಮೆ ಅವಕಾಶ ಒದಗಿ ಬಂದಿದೆ ಎಂದು ತಿಳಿಸಿದರು.ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ನನ್ನನ್ನು ಚಕ್ರವ್ಯೂಹದಲ್ಲಿ ಸಿಲುಕಿಸಲು ಪ್ರಯತ್ನಿಸಬಹುದು. ಪ್ರತಿಪಕ್ಷ ರಾಜಕೀಯ ತಂತ್ರ ನಡೆಸುವುದು ಸಹಜ. ಆದರೆ, ನನ್ನ ಕ್ಷೇತ್ರದ ಜನರು ಹಾಗೂ ಕಾರ್ಯಕರ್ತರು ನನ್ನನ್ನು ಕೈ ಹಿಡಿಯುತ್ತಾರೆ. ಚಕ್ರವ್ಯೂಹದಲ್ಲಿ ಸಿಲುಕದಂತೆ ನೋಡಿಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಶ್ರೀರಾಮುಲು, ಈ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಚುನಾವಣಾ ಮೈತ್ರಿ ಇರುವುದರಿಂದ ನನ್ನ ಗೆಲುವಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದರು.ಈ ಬಾರಿಯ ಚುನಾವಣೆ ದೇಶದ ಹಿತಕ್ಕಾಗಿ ನಡೆಯುವ ಚುನಾವಣೆಯಾಗಿದೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿಸಬೇಕು ಎಂದು ದೇಶದ ಜನರು ತೀರ್ಮಾನಿಸಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಪಕ್ಷದ ಹಿರಿಯ ನಾಯಕರು, ಚುನಾವಣೆ ರಣತಂತ್ರ ಹೆಣೆಯಲಿದ್ದಾರೆ. ಕಾಂಗ್ರೆಸ್‌ನಿಂದ ರೋಸಿ ಹೋಗಿರುವ ದೇಶದ ಜನರು ಬಿಜೆಪಿಗೆ ಅತ್ಯಧಿಕ ಸ್ಥಾನಗಳನ್ನು ಗೆಲ್ಲಿಸಿ ಕೊಡಲಿದ್ದಾರೆ ಎಂದು ತಿಳಿಸಿದರು.ಪಕ್ಷದ ಹಿರಿಯ ಮುಖಂಡ ಡಾ.ಮಹಿಪಾಲ್, ಮುರಹರಗೌಡ ಗೋನಾಳ್, ಕೆ.ಎ. ರಾಮಲಿಂಗಪ್ಪ, ಎಚ್.ಹನುಮಂತಪ್ಪ, ಡಾ.ಅರುಣಾ ಕಾಮಿನೇನಿ, ಗಣಪಾಲ್ ಐನಾಥ ರೆಡ್ಡಿ, ಪಾಲಣ್ಣ, ಇಬ್ರಾಹಿಂಬಾಬು, ಸುರೇಖಾ ಮಲ್ಲನಗೌಡ, ಡಾ.ಬಿ.ಕೆ. ಸುಂದರ್, ರಾಜೀವ್ ತೊಗರಿ, ಗೋವಿಂದರಾಜುಲು, ಓಬಳೇಶ, ಹನುಮಂತಪ್ಪ ಇದ್ದರು.