ನಿಷೇಧ ಬಳಿಕ ಮತ್ತೆ ಅಮೆರಿಕಕ್ಕೆ ಭಾರತದ ಸಿಗಡಿ ರಫ್ತು ಸನ್ನಿಹಿತ

| Published : Mar 29 2024, 12:53 AM IST

ನಿಷೇಧ ಬಳಿಕ ಮತ್ತೆ ಅಮೆರಿಕಕ್ಕೆ ಭಾರತದ ಸಿಗಡಿ ರಫ್ತು ಸನ್ನಿಹಿತ
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕವು ಭಾರತದ ಸಮುದ್ರ ಸಿಗಡಿಗೆ ನಿಷೇಧ ಹೇರಿದ್ದರಿಂದ ಸಿಗಡಿ ದರ ಇಳಿಮುಖವಾಗಿ ಮೀನುಗಾರರಿಗೆ ಸಮಸ್ಯೆಯಾಗಿತ್ತು. ಇದಕ್ಕೆ ಪೂರಕ ಉದ್ದಿಮೆಗಳಿಗೂ ಹೊಡೆತ ಬೀರಿತ್ತು. ಇದೀಗ ನಿಷೇಧ ತೆರವಾದರೆ ಮತ್ತೆ ಸಿಗಡಿ ಉದ್ದಿಮೆ ಗರಿಗೆದರುವ ನಿರೀಕ್ಷೆ ಹೊಂದಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಐದು ವರ್ಷಗಳ ನಿಷೇಧದ ಬಳಿಕ ರುಚಿಕರವಾದ ಭಾರತದ ಸಮುದ್ರ ಸಿಗಡಿ ಮತ್ತೆ ಅಮೆರಿಕಕ್ಕೆ ಹಾರುವ ಕಾಲ ಸನ್ನಿಹಿತವಾಗಿದೆ. ಇದರೊಂದಿಗೆ ವಾರ್ಷಿಕ 4500 ಕೋಟಿ ರು. ವಹಿವಾಟೂ ಆರಂಭವಾಗಲಿದೆ.ಭಾರತದಲ್ಲಿ ಸಿಗಡಿ ಮೀನುಗಾರಿಕೆಯ ಯಾಂತ್ರೀಕೃತ ಬೋಟ್‍ಗಳಲ್ಲಿ ಬಳಸಲಾಗುವ ಬಲೆಗಳು ಅಳಿವಿನಂಚಿನಲ್ಲಿರುವ ಕಡಲಾಮೆಗಳ ಸಂರಕ್ಷಣೆಗೆ ಪೂರಕವಾಗಿಲ್ಲ ಎಂಬ ಕಾರಣಕ್ಕೆ 2019ರಲ್ಲಿ ಅಮೆರಿಕವು ಭಾರತದ ಸಮುದ್ರ ಸಿಗಡಿ ಆಮದಿಗೆ ನಿಷೇಧ ಹಾಕಿತ್ತು. ಭಾರತದ ಮೀನುಗಾರಿಕಾ ಬಲೆಗಳಲ್ಲಿ ಆಮೆಗಳು ಸಿಲುಕಿ ಪ್ರಾಣ ಕಳೆದುಕೊಳ್ಳುತ್ತವೆ, ಈ ಮೂಲಕ ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸುವ ಆಮೆಗಳ ಸಂತತಿಗೆ ಧಕ್ಕೆ ಬರುತ್ತದೆ ಎಂಬ ಆಕ್ಷೇಪ ಅಮೆರಿಕದ್ದಾಗಿತ್ತು.ಅಮೆರಿಕ ನಿಷೇಧ ಹೇರಿದ್ದರೂ ಬೇರೆ ದೇಶಗಳಿಗೆ ಭಾರತದ ಸಿಗಡಿ ರಫ್ತಾಗುತ್ತಿತ್ತು. ಆದರೆ ಭಾರತದ ಸಿಗಡಿಗೆ ಅಮೆರಿಕದ ಪಾಲು ಶೇ. 20ರಷ್ಟು ಇದ್ದುದರಿಂದ ಆರ್ಥಿಕ ವಹಿವಾಟಿನ ಮೇಲೆ ದೊಡ್ಡ ಹೊಡೆತ ಬಿದ್ದಿತ್ತು. ಈ ನಿಷೇಧವೀಗ ತೆರವಾಗುವ ಹಂತಕ್ಕೆ ಬಂದಿದೆ.ಹೊಸ ತಂತ್ರಜ್ಞಾನ ಅಭಿವೃದ್ಧಿ: ನಿಷೇಧ ತೆರವುಗೊಳಿಸುವ ಉದ್ದೇಶದಿಂದ ಭಾರತೀಯ ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು ಭಾರತದ ಮೀನುಗಾರಿಕಾ ದೋಣಿಗಳಲ್ಲಿ ಟರ್ಟಲ್ ಎಕ್ಸ್‌ಕ್ಲೂಸರ್ ಡಿವೈಸ್ (ಟಿಇಡಿ) ಅಭಿವೃದ್ಧಿಪಡಿಸಿದ್ದು, ಇದಕ್ಕೆ ಅಮೆರಿಕದ ತಜ್ಞರಿಂದ ಒಪ್ಪಿಗೆ ದೊರಕಿದೆ ಎಂದು ತಿಳಿದುಬಂದಿದೆ.

ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಭಾರತೀಯ ಸಾಗರ ಉತ್ಪನ್ನಗಳ ಅಭಿವೃದ್ಧಿ ಪ್ರಾಧಿಕಾರವು ಸೆಂಟ್ರಲ್ ಇನ್‍ಸ್ಟಿಟ್ಯೂಟ್ ಆಫ್ ಫಿಶರೀಸ್ ಟೆಕ್ನಾಲಜಿ ಸಂಸ್ಥೆಗೆ ವಹಿಸಿತ್ತು. ಅಮೆರಿಕದ ತಜ್ಞರ ಮಾರ್ಗಸೂಚಿಯಂತೆ ಮೀನುಗಾರಿಕಾ ಬಲೆಗಳಿಗೆ ಆಮೆಗಳು ಸಿಲುಕದಂತೆ ಟರ್ಟಲ್ ಎಕ್ಸ್‍ಕ್ಲೂಡರ್ ಡಿವೈಸ್ (ಟಿಇಡಿ)ನ್ನು ಈ ಸಂಸ್ಥೆ ಅಭಿವೃದ್ಧಿಪಡಿಸಿದೆ. ಇದಕ್ಕೆ ಅಮೆರಿಕ ಗ್ರೀನ್ ಸಿಗ್ನಲ್ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕವು ಭಾರತದ ಸಮುದ್ರ ಸಿಗಡಿಗೆ ನಿಷೇಧ ಹೇರಿದ್ದರಿಂದ ಸಿಗಡಿ ದರ ಇಳಿಮುಖವಾಗಿ ಮೀನುಗಾರರಿಗೆ ಸಮಸ್ಯೆಯಾಗಿತ್ತು. ಇದಕ್ಕೆ ಪೂರಕ ಉದ್ದಿಮೆಗಳಿಗೂ ಹೊಡೆತ ಬೀರಿತ್ತು. ಇದೀಗ ನಿಷೇಧ ತೆರವಾದರೆ ಮತ್ತೆ ಸಿಗಡಿ ಉದ್ದಿಮೆ ಗರಿಗೆದರುವ ನಿರೀಕ್ಷೆ ಹೊಂದಲಾಗಿದೆ.