ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಎಂಬತ್ತೇಳನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾದ ಬೆನ್ನಲ್ಲೇ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಹಾಗೂ ಸಮ್ಮೇಳನ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ನಡುವಿನ ಭಿನ್ನಮತ ಬಹಿರಂಗವಾಗಿ ಸ್ಫೋಟಗೊಂಡಿದೆ.
ಸಮ್ಮೇಳನ ನಡೆಯುವ ಕೆಲ ತಿಂಗಳು ಮುಂಚಿನಿಂದಲೂ ಇಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ. ಆಂತರಿಕ ಕಚ್ಚಾಟ, ರಾಜ್ಯಾಧ್ಯಕ್ಷರ ಪ್ರತಿಷ್ಠೆ, ಏಕಸ್ವಾಮ್ಯ ಧೋರಣೆಗಳಿಗೆ ಸಂಚಾಲಕಿ ಡಾ.ಮೀರಾ ಸ್ಪಂದಿಸಲಿಲ್ಲ. ಇದು ಪ್ರಮುಖವಾಗಿ ರಾಜ್ಯಾಧ್ಯಕ್ಷರ ಸಿಟ್ಟಿಗೆ ಕಾರಣವಾಯಿತು. ಸಮ್ಮೇಳನ ಮುಗಿವವರೆಗೂ ನಿರಂತವಾಗಿ ಇಬ್ಬರೂ ಕದನ ಮುಂದುವರೆಸಿಕೊಂಡು ಬಂದಿದ್ದರು.ಅಂತಿಮವಾಗಿ ಸಂಚಾಲಕಿ ಜವಾಬ್ದಾರಿಯಿಂದ ಡಾ.ಮೀರಾ ಅವರನ್ನು ಬಿಡುಗಡೆಗೊಳಿಸಿ ಕಾರ್ಯಕಾರಿ ಸಮಿತಿ ಅಧ್ಯಕ್ಷರನ್ನಾಗಿ ಡಾ.ಎಚ್.ಎಸ್.ಮುದ್ದೇಗೌಡ ಅವರನ್ನು ನಾಮನಿರ್ದೇಶನ ಮಾಡುವುದರೊಂದಿಗೆ ಜೋಶಿ ಮೇಲುಗೈ ಸಾಧಿಸಿದ್ದಾರೆ.
ಸಮ್ಮೇಳನದ ಸಂಚಾಲಕಿಯನ್ನಾಗಿ ಡಾ.ಮೀರಾ ಶಿವಲಿಂಗಯ್ಯ ಅವರನ್ನು ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ನೇಮಕ ಮಾಡಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ದಿನ ಕಳೆದಂತೆ ರಾಜ್ಯಾಧ್ಯಕ್ಷರು ಸಮ್ಮೇಳನ ಸಂಚಾಲಕಿ ಆದಿಯಾಗಿ ಜಿಲ್ಲಾ ಘಟಕದ ಎಲ್ಲಾ ಪದಾಧಿಕಾರಿಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದಕ್ಕೆ ಮುಂದಾದರು. ಅವರ ತೀರ್ಮಾನಗಳಿಗೆಲ್ಲಾ ದನಿಗೂಡಿಸಬೇಕಿತ್ತು. ಅಂತಹವರಿಗಷ್ಟೇ ಮನ್ನಣೆ ನೀಡುತ್ತಿದ್ದರು.ಪುಸ್ತಕ ಸಮಿತಿಯಿಂದ ಡಾ.ಮ.ರಾಮಕೃಷ್ಣ, ಡಾ.ಬೋರೇಗೌಡ ಚಿಕ್ಕಮರಳಿ ಪುಸ್ತಕ ಸಮಿತಿ ಸಂಪಾದಕರ ಸಮಿತಿಯಿಂದ ತೆಗೆಯಬೇಕು. ಪ್ರೊ.ಎಚ್.ಎಸ್.ಮುದ್ದೇಗೌಡ ಕೇಂದ್ರದ ವಕ್ತಾರು ಹುದ್ದೆಗೆ ಸಮನ್ವಯ ಸಮಿತಿ, ಸ್ವಾಗತ ಸಮಿತಿ ಎಲ್ಲಾ ಕಡೆ ಅವರಿರಬೇಕು ಎಂಬ ಸೂಚನೆ ಕೊಟ್ಟಿದ್ದರು. ಆದರೆ, ಅದು ಕಾರ್ಯಗತವಾಗಿರಲಿಲ್ಲ.
ಕಳೆದೊಂದು ತಿಂಗಳ ಹಿಂದೆ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಾಹಿತಿಗಳ ಸಭೆಯಲ್ಲಿ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಮುಜುಗರಕ್ಕೊಳಗಾಗುವ ಪ್ರಸಂಗಗಳು ನಡೆದವು. ಪ್ರೊ.ಜಯಪ್ರಕಾಶಗೌಡರ ತಂಡ ರಾಜ್ಯಾಧ್ಯಕ್ಷರ ವಿರುದ್ಧ ತಿರುಗಿಬಿದ್ದಿದ್ದರು. ಇದನ್ನು ಸಹಿಸದ ಡಾ.ಮಹೇಶ್ ಜೋಶಿ ಅವರು ಪ್ರೊ.ಬಿ.ಜಯಪ್ರಕಾಶಗೌಡರ ವಿರುದ್ಧ ಪತ್ರಿಕಾಗೋಷ್ಠಿ ಕರೆದು ಮಾತನಾಡುವಂತೆ ಡಾ.ಮೀರಾ ಅವರಿಗೆ ಒತ್ತಡ ಹೇರಿದ್ದರು. ಅದಕ್ಕೆ ಅವರು ಒಪ್ಪಿರಲಿಲ್ಲ. ಕೊನೆಗೆ ತಮಗೆ ಆಪ್ತರಾಗಿದ್ದ ಡಾ.ಎಚ್.ಎಸ್.ಮುದ್ದೇಗೌಡರ ಮೂಲಕ ಆ ಕೆಲಸ ಮಾಡಿಸಿದರು. ಆ ದಿನ ನಡೆದ ಗೋಷ್ಠಿಯಲ್ಲಿ ಮೈಕ್‌ಗಾಗಿ ಮೀರಾ-ಗೌಡರ ನಡುವೆ ಜಟಾಪಟಿಯೇ ನಡೆದುಹೋಗಿತ್ತು.ಇದಾದ ಬಳಿಕ ಡಾ.ಮೀರಾ ಅವರನ್ನು ಜೋಶಿ ದೂರವಿಡುತ್ತಲೇ ಬಂದರು. ಪರಿಷತ್ತಿನ ಪದಾಧಿಕಾರಿಗಳನ್ನೇ ಎರಡು ಗುಂಪುಗಳನ್ನಾಗಿ ಮಾಡಿ ತಮ್ಮ ಮಾತುಗಳಿಗೆ ಮನ್ನಣೆ ನೀಡುವವರಿಗಷ್ಟೇ ಪ್ರಾಧಾನ್ಯತೆ ನೀಡಿಕೊಂಡು ಬಂದರು. ಇದರಿಂದ ಮೀರಾ ಅವರಿಗೆ ನೋವುಂಟಾದರೂ ಬಹಿರಂಗವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಇವರಿಬ್ಬರ ನಡುವಿನ ವೈಮನಸ್ಸನ್ನು ದೂರ ಮಾಡುವುದಕ್ಕೆ ಸಚಿವರು, ಜಿಲ್ಲಾಡಳಿತಕ್ಕೆ ಸಮಯವೂ ಸಿಗಲಿಲ್ಲ. ಆಂತರಿಕ ಬೇಗುದಿ ಮುಂದುವರಿದೇ ಇತ್ತು.
ಒಂದು ಹಂತದಲ್ಲಿ ಸಮ್ಮೇಳನ ನಡೆಯುವ ಮುನ್ನವೇ ಸಂಚಾಲಕಿ ಜವಾಬ್ದಾರಿಯಿಂದ ಡಾ.ಮೀರಾ ಅವರನ್ನು ಬಿಡುಗಡೆಗೊಳಿಸಲು ಡಾ.ಮಹೇಶ್ ಜೋಶಿ ನಿರ್ಧರಿಸಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಇದರ ನಡುವೆ ಸಮ್ಮೇಳನದ ಎರಡನೇ ದಿನ ರಾತ್ರಿ ಖಾಸಗಿ ಹೋಟೆಲ್‌ನಲ್ಲಿ ಮುಂದಿನ ಸಮ್ಮೇಳನ ಎಲ್ಲಿ ನಡೆಸಬೇಕೆಂಬ ಕುರಿತು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಡಾ.ಮೀರಾ ಕೂಡ ಇದ್ದರು. ಆದರೆ, ಜೋಶಿ ಅವರು ಡಾ.ಮೀರಾ ಅವರನ್ನು ಸಭೆಯಿಂದ ಹೊರಗೆ ಕಳುಹಿಸಿದ್ದರಿಂದ ತೀವ್ರ ಅವಮಾನಕ್ಕೊಳಗಾಗಿ ಕಣ್ಗಳಲ್ಲಿ ನೀರು ತುಂಬಿಕೊಂಡೇ ಹೊರಬಂದರು. ಸಚಿವರು, ಶಾಸಕರೆದುರು ನೋವು ತೋಡಿಕೊಂಡರೂ ಪ್ರಯೋಜನವಾಗಲಿಲ್ಲ.ಯಶಸ್ವಿ ಸಮ್ಮೇಳನ ನಡೆಸಿದ ಡಾ.ಮೀರಾ ಅವರಿಗೆ ಜೋಶಿ ಅವರು ಹೊರಡಿಸಿರುವ ಹೊಸ ಆದೇಶ ಬರಸಿಡಿಲು ಬಡಿದಂತಾಗಿದೆ. ಇಷ್ಟೊಂದು ತೀವ್ರಗತಿಯಲ್ಲಿ ಈ ತೀರ್ಮಾನ ಹೊರಬೀಳುವ ನಿರೀಕ್ಷೆ ಇರಲಿಲ್ಲ. ಆದರೆ, ಜೋಶಿ ಬೆಂಗಳೂರಿಗೆ ಹೋದ ಮರುದಿನವೇ ಅಧಿಕೃತ ಆದೇಶ ಹೊರಡಿಸಿ ಅಧ್ಯಕ್ಷರ ಪರಮಾಧಿಕಾರ ಪ್ರಯೋಗಿಸಿದ್ದಾರೆ.ರಾಜ್ಯಾಧ್ಯಕ್ಷರು ನನಗೆ ಸಾಕಷ್ಟು ಬಾರಿ ಸಭೆಗಳಲ್ಲಿ ಅವಮಾನ ಮಾಡಿದ್ದಾರೆ. ಎಲ್ಲಿಯೂ ಮಾತನಾಡುವುದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಹಲವಾರು ವಿಚಾರಗಳಲ್ಲಿ ನಾನು ಅವರು ಹೇಳಿದಂತೆ ಕೇಳಲಿಲ್ಲ ಎಂಬ ಕಾರಣಕ್ಕೆ ನನ್ನನ್ನು ದೂರವಿಟ್ಟರು. ಕಾರ್ಯಕಾರಿ ಸಭೆಗಳಿಗೆ ಆಹ್ವಾನಿಸಿದರೂ ಅಭಿಪ್ರಾಯ ಹೇಳುವುದಕ್ಕೂ ಬಿಡಲಿಲ್ಲ. ಸಂಚಾಲಕಿ ಹುದ್ದೆಯಿಂದ ಬಿಡುಗಡೆಗೊಳಿಸಿರುವುದಕ್ಕೆ ನನಗೆ ಬೇಸರವಿಲ್ಲ. ಇಂತಹ ರಾಜ್ಯಾಧ್ಯಕ್ಷರ ಕೈಕೆಳಗೆ ಕೆಲಸ ಮಾಡುವುದಕ್ಕೆ ನನಗೂ ಇಷ್ಟವಿಲ್ಲ.
ಆದರೆ, ಸಮ್ಮೇಳನಕ್ಕಾಗಿ ದುಡಿದ ಪದಾಧಿಕಾರಿಗಳ ಹುದ್ದೆಗಳನ್ನೆಲ್ಲಾ ರದ್ದು ಮಾಡಿರುವುದು ನೋವುಂಟು ಮಾಡಿದೆ.- ಡಾ.ಮೀರಾ ಶಿವಲಿಂಗಯ್ಯ, ಸಮ್ಮೇಳನದ ಮಾಜಿ ಸಂಚಾಲಕಿಜಿಲ್ಲಾ ಕಾರ್ಯಕಾರಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಪ್ರೊ.ಎಚ್.ಎಸ್.ಮುದ್ದೇಗೌಡ ಆಯ್ಕೆ
ಕನ್ನಡಪ್ರಭ ವಾರ್ತೆ ಮಂಡ್ಯಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕಾರ್ಯಕಾರಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ.ಎಚ್.ಎಸ್.ಮುದ್ದೇಗೌಡ ಅವರನ್ನು ನಾಮನಿರ್ದೇಶನಗೊಳಿಸಿ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಆದೇಶ ಹೊರಡಿಸಿದ್ದಾರೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಾಲಕಿ ಜವಾಬ್ದಾರಿಯಿಂದ ಡಾ.ಮೀರಾ ಶಿವಲಿಂಗಯ್ಯ ಅವರನ್ನು ಬಿಡುಗಡೆಗೊಳಿಸಲಾಗಿದೆ. ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದ ಸಿ.ಕೆ.ರವಿಕುಮಾರ ಚಾಮಲಾಪುರ ನಿಧನದಿಂದ ಅಧ್ಯಕ್ಷ ಸ್ಥಾನ ತೆರವಾಗಿರುವ ಹಿನ್ನೆಲೆಯಲ್ಲಿ ಸಾಹಿತ್ಯಪರಿಷತ್ತಿನ ಅನುಮೋದಿತ ತಿದ್ದುಪಡಿ ನಿಬಂಧನೆ ೩೩(೨)(ಅ)ರಲ್ಲಿ ಉಲ್ಲೇಖಿತವಾಗಿರುವಂತೆ ನಿಯಮಾನುಸಾರ ನಿರ್ವಹಿಸಬೇಕಾದ ಎಲ್ಲ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಕೇಂದ್ರ ಪರಿಷತ್ತಿನ ಅಧ್ಯಕ್ಷರು ಸಮಿತಿಯೊಂದನ್ನು ರಚಿಸಿ ಅದರ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸಬೇಕಿರುತ್ತದೆ.ಆ ಹಿನ್ನೆಲೆಯಲ್ಲಿ ಡಾ.ಎಚ್.ಎಸ್.ಮುದ್ದೇಗೌಡ ಅವರನ್ನು ಜಿಲ್ಲಾ ಕಾರ್ಯಕಾರಿ ಸಮಿತಿ ಅಧ್ಯಕ್ಷರನ್ನಾಗಿ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಲಾಗಿದೆ. ಈ ಹಿಂದೆ ಮಂಡ್ಯ ಜಿಲ್ಲಾಧ್ಯಕ್ಷರಾಗಿದ್ದ ಸಿ.ಕೆ.ರವಿಕುಮಾರ ಅನುಮೋದನೆ ನೀಡಲಾಗಿದ್ದ ಎಲ್ಲಾ ಜಿಲ್ಲಾ, ತಾಲೂಕು ಕಾರ್ಯಕಾರಿ ಸಮಿತಿ ಹಾಗೂ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ನಾಮನಿರ್ದೇಶನಗೊಂಡಿದ್ದ ಜಿಲ್ಲಾ ಪದಾಧಿಕಾರಿಗಳು, ಸಹ ಕಾರ್ಯದರ್ಶಿಗಳು, ಸಂಘಟನಾ ಕಾರ್ಯದರ್ಶಿಗಳು, ನಗರ ಘಟಕದ ಅಧ್ಯಕ್ಷರು, ಮಾಧ್ಯಮ ಸಂಯೋಜಕರು, ಜಿಲ್ಲೆಯ ಎಲ್ಲಾ ಸಹ ಹಾಗೂ ಸಂಘಟನಾ ಕಾರ್ಯದರ್ಶಿಗಳು, ಹೋಬಳಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳ ಸ್ಥಾನವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.