ಲೋಕಸಭಾ ಚುನಾವಣೆ ನಂತರ ದೇಶದಲ್ಲಿ ಕಾಂಗ್ರೆಸ್ ಧೂಳಿಪಟ-ಬಿ.ಸಿ. ಪಾಟೀಲ

| Published : May 06 2024, 12:33 AM IST

ಲೋಕಸಭಾ ಚುನಾವಣೆ ನಂತರ ದೇಶದಲ್ಲಿ ಕಾಂಗ್ರೆಸ್ ಧೂಳಿಪಟ-ಬಿ.ಸಿ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪ್ರತಿ ಬಡ ಕುಟುಂಬಕ್ಕೆ ಮಹಾಲಕ್ಷ್ಮೀ ಯೋಜನೆಯಡಿ ಪ್ರತಿ ವರ್ಷ ಒಂದು ಲಕ್ಷ ಹಣ ನೀಡುವುದಾಗಿ ಹೇಳಿಕೊಂಡಿದೆ. ಆದರೆ ದೇಶದ ಬಜೆಟ್‌ಗೆ ಮೀರಿದ ಹಣವನ್ನು ಮತದಾರರಿಗೆ ಆಮಿಷ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ರಟ್ಟೀಹಳ್ಳಿ: ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪ್ರತಿ ಬಡ ಕುಟುಂಬಕ್ಕೆ ಮಹಾಲಕ್ಷ್ಮೀ ಯೋಜನೆಯಡಿ ಪ್ರತಿ ವರ್ಷ ಒಂದು ಲಕ್ಷ ರು. ನೀಡುವುದಾಗಿ ಹೇಳಿಕೊಂಡಿದೆ. ಆದರೆ ದೇಶದ ಬಜೆಟ್‌ಗೆ ಮೀರಿದ ಹಣ ನೀಡುವುದಾಗಿ ಮತದಾರರಿಗೆ ಆಮಿಷ ಒಡ್ಡುತ್ತಿರುವುದು ಹಾಸ್ಯಾಸ್ಪದ ಎಂದು ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ವಿವಿಧ ವಾರ್ಡ್‌ಗಳಲ್ಲಿ ಹಾವೇರಿ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಮತಯಾಚನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಬಿಟ್ಟಿ ಭಾಗ್ಯಗಳನ್ನು ನೀಡಿದ ಪರಿಣಾಮ ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ. ಅದೇ ರೀತಿ ದೇಶದ ಆರ್ಥಿಕ ಪರಿಸ್ಥಿತಿಯನ್ನು ಅಸ್ಥಿರಗೊಳಿಸುವ ಅವರ ಬಿಟ್ಟಿಭಾಗ್ಯಗಳಿಗೆ ಮರುಳಾಗಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ನೀಡಿ ಈಗ ಕೈ ಹಿಸುಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು ಕಾಂಗ್ರೆಸ್ ಎಂದರೆ ಮೂಗು ಮುರಿಯುತ್ತಿದ್ದಾರೆ ಎಂದು ಹೇಳಿದರು.

ಈ ಬಾರಿ ಲೋಕಸಭಾ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಕಳೆದ ಹತ್ತು ವರ್ಷದ ಅವಧಿಯಲ್ಲಿ ದೇಶದ ಆರ್ಥಿಕತೆ ಸಾಕಷ್ಟು ಸದೃಢವಾಗಿದೆ. ಮತದಾರರು ಕಾಂಗ್ರೆಸ್‌ನ ಪೊಳ್ಳು ಆಮಿಷಗಳಿಗೆ ಒಳಗಾಗದೆ ಬಸವರಾಜ ಬೊಮ್ಮಾಯಿ ಅವರಿಗೆ ಮತ ಚಲಾಯಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲ ಪಡಿಸಬೇಕಾಗಿದೆ. ಈ ಬಾರಿ 400 ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ, ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದರು.

ಬಿಜೆಪಿ ಮುಖಂಡ ಚಂದ್ರಶೇಖರ ಜಾಡರ ಮಾತನಾಡಿ, ಮೇ 7ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ನಮ್ಮ ವಾರ್ಡ್‌ನಲ್ಲಿ ಅತ್ಯಧಿಕ ಮತ ನೀಡುವ ಮೂಲಕ ಬೊಮ್ಮಾಯಿ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡುವುದೇ ನಮ್ಮ ಗುರಿ. ಆ ಮೂಲಕ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರ ಪಡೆಯುವುದು ನಿಶ್ಚಿತ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಸೃಷ್ಟಿ ಪಾಟೀಲ್, ಆರ್.ಎನ್. ಗಂಗೋಳ, ಎಸ್.ಎಸ್. ಪಾಟೀಲ್, ಸರೋಜಾ ಹುರಕಡ್ಲಿ, ಬಸವರಾಜ ಆಡಿನವರ, ಮಾಲತೇಶ ಬೆಳಕೇರಿ, ರಾಘವೇಂದ್ರ ಹರವಿಶೆಟ್ಟರ್, ಸುನೀಲ ಸರಶೆಟ್ಟರ, ಸಿದ್ದು ಸಾವಕ್ಕಳವರ, ಪ್ರಶಾಂತ ದ್ಯಾವಕ್ಕಳವರ, ಮಂಜು ತಳವಾರ ಮುಂತಾದವರು ಇದ್ದರು.