ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಸರ್ಕಾರ ಪತನ

| Published : Mar 17 2024, 02:05 AM IST

ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಸರ್ಕಾರ ಪತನ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದಲ್ಲಿ ಅನುದಾನದ ಕೊರತೆ ಹಿನ್ನೆಲೆ ಗುತ್ತಿಗೆದಾರರು ವಿವಿಧ ಕಾಮಗಾರಿಗಳಿಗೆ ಟೆಂಡರ್ ಹಾಕಲು ಹಿಂದೇಟು ಹಾಕುತ್ತಿದ್ದಾರೆ. ಗುತ್ತಿಗೆದಾರರಿಗೆ ವಿಷ ಕುಡಿಯುವ ಪರಿಸ್ಥಿತಿ ಬಂದಿದೆ

ಡಂಬಳ: ಸ್ಪಷ್ಟ ಬಹುಮತ ಪಡೆದ ಅಧಿಕಾರ ಸ್ವೀಕರಿಸಿದ ನಾಲ್ಕೈದು ತಿಂಗಳಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜನವಿರೋಧಿ ಅಲೆ ವ್ಯಕ್ತವಾಗಿದೆ. ಲೋಕಸಭಾ ಚುನಾವಣೆಗೆ ರಾಜ್ಯದ ಹಲವು ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳು ಸಿಗುತ್ತಿಲ್ಲ. 40ರಿಂದ 50 ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಬರಲು ಸಿದ್ಧರಾಗಿದ್ದಾರೆ. ಲೋಕಸಭೆ ಚುನಾವಣೆ ಮುಗಿದ ಆರು ತಿಂಗಳಲ್ಲಿ ರಾಜ್ಯದ ಕಾಂಗ್ರೆಸ್‌ ಸರ್ಕಾರ ಪತನವಾಗಲಿದೆ ಎಂದು ಮಾಜಿ ಶಾಸಕ ಕಳಕಪ್ಪ ಬಂಡಿ ಹೇಳಿದರು.

ಡಂಬಳ ಗ್ರಾಮದ ತೋಂಟದಾರ್ಯ ಕಲಾಭವನದಲ್ಲಿ ಶನಿವಾರ ನಡೆದ ಬಿಜೆಪಿ ಡಂಬಳ ಮಂಡಲ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೊಸ ಟೆಂಡರ್‌ ಪ್ರಕ್ರಿಯೆ ನಡೆದಿಲ್ಲ. ಸರ್ಕಾರದಲ್ಲಿ ಅನುದಾನದ ಕೊರತೆ ಹಿನ್ನೆಲೆ ಗುತ್ತಿಗೆದಾರರು ವಿವಿಧ ಕಾಮಗಾರಿಗಳಿಗೆ ಟೆಂಡರ್ ಹಾಕಲು ಹಿಂದೇಟು ಹಾಕುತ್ತಿದ್ದಾರೆ. ಗುತ್ತಿಗೆದಾರರಿಗೆ ವಿಷ ಕುಡಿಯುವ ಪರಿಸ್ಥಿತಿ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಶಾಸಕರು ₹50 ಸಾವಿರರಿಂದ ₹ 1 ಲಕ್ಷ ಮೊತ್ತದ ಕಾಮಗಾರಿಗಳಿಗೆ ಭೂಮಿಪೂಜೆ ಮಾಡುವ ಪರಿಸ್ಥಿತಿ ಬಂದಿರುವುದು ದುರ್ದೈವದ ಸಂಗತಿ ಎಂದು ಕಿಡಿಕಾರಿದರು.

ರಾಜ್ಯದ 15ರಿಂದ 16 ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಸಿಗುತ್ತಿಲ್ಲ. ಜನ ಮೋದಿಗೆ ಮತ ಹಾಕಲು ಸಿದ್ಧರಿದ್ದಾರೆ. ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಮಂತ್ರಿಯಾಗುವುದು ಖಚಿತವಾಗಿದೆ. ಹೀಗಾಗಿ ಪಕ್ಷದ ಕಾರ್ಯಕರ್ತರು ಬೂತ್‌ ಮಟ್ಟದಿಂದ ಪಕ್ಷ ಸಂಘಟನೆ ಮಾಡಬೇಕು. ಹಾವೇರಿ ಮತಕ್ಷೇತ್ರಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ನಮ್ಮ ಅಭ್ಯರ್ಥಿ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಬೇಕೆಂದು ಮಾಜಿ ಶಾಸಕ ಕಳಕಪ್ಪ ಬಂಡಿ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಬೀರಪ್ಪ ಎಸ್. ಬಂಡಿ, ಡಂಬಳ ಮಂಡಲ ಅಧ್ಯಕ್ಷ ರವಿ ಕರಿಗಾರ, ಮುದ್ಲಿಂಗಪ್ಪ ಕೊರ್ಲಹಳ್ಳಿ, ವೆಂಕನಗೌಡ ಪಾಟೀಲ, ಬಸವರಾಜ ಚನ್ನಹಳ್ಳಿ, ಫಕ್ಕನಗೌಡ ರಡ್ಡೇರ, ಶಿವಪ್ಪ ಅಂಕದ, ಉಮೇಶ ಮಲ್ಲಾಪುರ, ಕವಿತಾ ಹಿರೇಗೌಡರ, ಮಲ್ಲೇಶ ಮಠದ, ಅಂದಪ್ಪ ಹಾರೂಗೇರಿ, ನಾಗರಾಜ ಕಾಟ್ರಹಳ್ಳಿ, ಬಸವರಾಜ ಸಂಗನಾಳ, ನಿಂಗಪ್ಪ ಹರಿಜನ, ಯಮನೂರ ದೊಡ್ಡಮನಿ, ಪಂಚಾಕ್ಷರಿ ಹರ್ಲಾಪುರಮಠ, ಕೃಷ್ಣ ಬಂಡಿ, ಪ್ರಕಾಶ ಕೋತಂಬರಿ, ಸೋಮಶೇಖರ ಹಿರೇಮಠ, ಲಕ್ಷ್ಮಣ ಬೂದಿಹಾಳ, ನಂದಿನಿ ಹೊಳಗುಂದಿ ಇದ್ದರು.