ಸಾರಾಂಶ
ವಿಜಯಪುರ: ಹಿಂದೂಗಳ ಸಾಂಪ್ರದಾಯಿಕ ಹಬ್ಬಗಳಲ್ಲಿ ಹೋಳಿ ಹುಣ್ಣಿಮೆ ಬಣ್ಣದ ಹಬ್ಬ. ಹೋಳಿ ಹಬ್ಬಕ್ಕೆ ರಂಗು ತುಂಬುವುದು ಒಂದು ಬಣ್ಣ, ಇನ್ನೊಂದು ಹಲಗೆ. ಗುಮ್ಮಟನಗರಿಯ ಹಲಗೆಯ ಸದ್ದು ಎಲ್ಲೆಡೆ ಸದ್ದು ಮಾಡಿದೆ.
ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಹಿಂದೂಗಳ ಸಾಂಪ್ರದಾಯಿಕ ಹಬ್ಬಗಳಲ್ಲಿ ಹೋಳಿ ಹುಣ್ಣಿಮೆ ಬಣ್ಣದ ಹಬ್ಬ. ಹೋಳಿ ಹಬ್ಬಕ್ಕೆ ರಂಗು ತುಂಬುವುದು ಒಂದು ಬಣ್ಣ, ಇನ್ನೊಂದು ಹಲಗೆ. ಗುಮ್ಮಟನಗರಿಯ ಹಲಗೆಯ ಸದ್ದು ಎಲ್ಲೆಡೆ ಸದ್ದು ಮಾಡಿದೆ.
ಅದರಲ್ಲೂ ಯುವಕರು ಕುಣಿದು ಕುಪ್ಪಳಿಸುವ ಏಕೈಕ ಜೋರದಾರ ಹಬ್ಬ ಎಂದರೆ ಅದು ಹೋಳಿಹುಣ್ಣಿವೆ. ಹೀಗಾಗಿಯೇ ಶಿವರಾತ್ರಿ ಮಾರನೇ ದಿನದಿಂದ ಶುರುವಾಗಲು ಹಲಗೆ ಬಾರಿಸುವ ಖಯಾಲಿ ಹದಿನೈದು ದಿನಗಳವರೆಗೆ ನಡೆಯುತ್ತದೆ. ನಾನಾ ಬಗೆಯ ಹಲಗೆಯನ್ನು ಖರೀದಿಸುವ ಯುವಕ ಮಂಡಳಿ ನಿತ್ಯ ಸಂಜೆ ಸಮಯದಲ್ಲಿ ತಮ್ಮ ತಮ್ಮ ಗಲ್ಲಿಗಳಲ್ಲಿ ಸೇರಿ ಬಾಯಿ ಬಡಿದುಕೊಳ್ಳುತ್ತ, ಹೋಳಿಹಬ್ಬದ ಪದಗಳನ್ನು ಹಾಡುತ್ತ, ಜೋರಾಗಿ ಹಲಗೆ ಬಡಿದು ಸಂಭ್ರಮಿಸುತ್ತಾರೆ. ಈಗಂತೂ ಶಾಸ್ತ್ರೀ ಮಾರುಕಟ್ಟೆ ಮುಂಭಾಗ, ಗಾಂಧಿಚೌಕ ರಸ್ತೆ, ಸ್ಟೇಡಿಯಂ ರಸ್ತೆ ಸೇರಿದಂತೆ ನಗರದ ಮಾರುಕಟ್ಟೆಯ ತುಂಬೆಲ್ಲ ಫೈಬರ್ ಹಾಗೂ ಪ್ಲಾಸ್ಟಿಕ್ ಹಲಗೆಗಳದ್ದೇ ದರ್ಬಾರ್ ಜೋರಾಗಿದ್ದು, ವಿವಿಧ ಆಕಾರದ ಹಲಗೆಗಳಿಗೆ ಬೇರೆ ಬೇರೆ ರೀತಿಯ ದರ ಇರುತ್ತದೆ. ಮಕ್ಕಳಿಗಾಗಿ ಇರುವ ಚಿಕ್ಕ ಹಲಗೆಗೆ ₹50 ಇದ್ರೆ ಯುವಕರು ಬಾರಿಸುವ ಹಲಗೆಗೆ ₹200 ರಿಂದ 250 ದರ ಇದೆ. ಇದಕ್ಕೂ ದೊಡ್ಡ ಪ್ರಮಾಣದಲ್ಲಿ ಬೇಕು ಎಂದರೆ ₹500ರಿಂದ 1 ಸಾವಿರ ಕೊಡಬೇಕಾಗುತ್ತದೆ.ಹೈದಿನೈದು ದಿನ ಹಲಗೆ ಸದ್ದು:
ವರ್ಷವಿಡಿ ವೃತ್ತಿ, ಉದ್ಯೋಗ, ವ್ಯಾಪಾರ ಮಾಡುವುದರಲ್ಲೇ ಕಾರ್ಯನಿರತರಾಗುವ ಯುವಕರ ತಂಡಗಳೆಲ್ಲ ಸೇರುವುದು ಇದೇ ಹೋಳಿಹುಣ್ಣಿಮೆಗೆ. ಅದರಲ್ಲೂ ವಿಜಯಪುರ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಹಲಗೆ ಬಾರಿಸುವುದು ಹದಿನೈದು ದಿನಗಳವರೆಗೆ ವಿಶೇಷವಾಗಿ ಆಚರಿಸಲಾಗುತ್ತದೆ. ಪ್ರತಿ ಓಣಿ ಓಣಿಯಲ್ಲೂ ಎಂಟತ್ತು ಹುಡುಗರ ತಂಡಗಳಾಗಿ ಸಂಜೆಯಿಂದ ರಾತ್ರಿಯವರೆಗೂ ಹೋಳಿಹಬ್ಬದ ಪದಗಳು, ಹಲಗೆಮೇಳ, ಹಲಗೆ ಹಬ್ಬ, ಹಲಗೆ ಬಾರಿಸುವ ಸ್ಪರ್ಧೆಗಳ ಮೂಲಕ ಆಚರಿಸಲಾಗುತ್ತದೆ. ಒಂದಾದ ಮೇಲೊಂದರಂತೆ ತಂಡಗಳಾಗಿ ಕಿವಿ ಗಡಚಿಕ್ಕುವಂತೆ ಜಾನಪದ ಶೈಲಿಯಲ್ಲಿ ಹಲಗೆ ಬಾರಿಸುತ್ತಾರೆ.ಕಾಮಣ್ಣನ ಸುಡುವುದು:
ನಿರಂತರ ಹದಿನೈದು ದಿನಗಳವರೆಗೆ ಹಲಗೆ ಹಬ್ಬ ಆಚರಿಸಿದ ಬಳಿಕ ಹೋಳಿಹುಣ್ಣಿಮೆ ದಿನ ರಾತ್ರಿ ಕಾಮಣ್ಣನ ಸುಡುವ ಆಚರಣೆ ಮಾಡಲಾಗುತ್ತದೆ. ಇದಕ್ಕಾಗಿ ಮೂರು ದಿನಗಳ ಮುಂಚಿತವಾಗಿ ಒಣ ಕಟ್ಟಿಗೆಗಳನ್ನು ಕದ್ದುತಂದು ಕೂಡಿಹಾಕಲಾಗುತ್ತದೆ. ರಾತ್ರಿ ಒಂದೆರಡು ಗಂಟೆಗಳವರೆಗೆ ಹಲಗೆ ಬಾರಿಸಿ ಹೋಳಿ ಪದಗಳನ್ನು ಹಾಡಲಾಗುತ್ತದೆ. ಅಂದು ಓಣಿಗೆ ಒಂದರಂತೆ ಸರ್ಕಲ್‌ಗಳಲ್ಲಿ ಗುಂಡಿ ತೆಗೆದು ರಾತ್ರಿ ಸೌದೆಗಳನ್ನು ಹಾಕಿ ಬೆಂಕಿ ಹಚ್ಚಿ ಅದರ ಸುದುತ್ತಲೂ ಬಾಯಿ ಬಡಿಕೊಂಡು ಸುತ್ತು ಹಾಕುವುದರ ಮೂಲಕ ಕಾಮಣ್ಣನನ್ನು ಸುಡುವ ಕಾರ್ಯ ನಡೆಸಲಾಗುತ್ತದೆ.---
ಬಾಕ್ಸ್....ತಿಂಗಳ ವ್ಯಾಪಾರ ವರ್ಷದ ಗಂಜಿಗೆ ಆಧಾರ
ವರ್ಷವಿಡಿ ವ್ಯಾಪಾರ ಮಾಡಿದರೂ ಆಗದಷ್ಟು ಕೇವಲ ಹದಿನೈದು ದಿನಗಳಲ್ಲಿ ಹಲಗೆಗಳ ವ್ಯಾಪಾರ ಆಗುತ್ತದೆ. ₹50ಯಿಂದ ಹಿಡಿದು 2 ಸಾವಿರ ರುಪಾಯಿವರೆಗಿನ ಹಲಗೆಗಳಿಗೆ ಬೇಡಿಕೆ ಇದ್ದು, ಈ ಹೋಳಿಹುಣ್ಣಿವೆಯ ಆಸುಪಾಸಿನಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೂ ವ್ಯಾಪಾರ ನಡೆಯುತ್ತದೆ. ಹೀಗಾಗಿ ಹಬ್ಬದ ವೇಳೆ ಇಲ್ಲಿ ವ್ಯಾಪಾರ ಮಾಡುವ ಮಾರಾಟಗಾರಿಗೆ ಇದೊಂದು ಭರ್ಜರಿ ಆದಾಯದ ಮೂಲವಾಗಿದೆ. ಪ್ರತಿಯೊಬ್ಬ ವ್ಯಾಪಾರಸ್ಥರು ಸಹ ಕೇವಲ ಹದಿನೈದು ದಿನದಲ್ಲಿ ಲಕ್ಷಾಂತರ ರುಪಾಯಿ ತಮಟೆಗಳ ವ್ಯಾಪಾರ ಮಾಡುತ್ತಾರೆ. ಹೀಗಾಗಿ ಈ ವೇಳೆ ನಡೆಯುವ ವ್ಯಾಪಾರ ಅವರ ಕುಟುಂಬಕ್ಕೆ ವರ್ಷದ ಅನ್ನ ನೀಡುತ್ತದೆ.---
ಕೋಟ್:ಈ ಬಾರಿ ಬರಗಾಲ ಇರುವುದರಿಂದ ಹೆಚ್ಚು ಜನ ಹಲಗೆ ಖರೀದಿ ಮಾಡ್ತಾರೋ ಇಲ್ಲವೋ ಎಂಬ ಆತಂಕವಿತ್ತು. ಆದರೆ, ಹೋಳಿಹಬ್ಬದಲ್ಲಿ ಹಲಗೆಗಳ ಮಾರಾಟ ಜೋರಾಗಿ ನಡೆಯುತ್ತಿದೆ. ವರ್ಷವಿಡಿ ತಮಟೆಗಳನ್ನು ಮಾರಾಟ ಮಾಡಿದರು ಇಷ್ಟೊಂದು ಆದಾಯ ಬರುವುದಿಲ್ಲ, 15 ರಿಂದ 20 ದಿನಗಳಲ್ಲಿ ವ್ಯಾಪಾರದಲ್ಲಿ ಉತ್ತಮ ಲಾಭವಾಗಲಿದೆ.
-ಗಣೇಶ ಬಜಂತ್ರಿ, ಹಲಗೆ ಮಾರಾಟಗಾರ---
ವರ್ಷಪೂರ್ತಿ ಹೊಲಮನೆ ಕೆಲಸಗಳಲ್ಲೇ ನಾವು ತೊಡಗಿರುತ್ತೇವೆ. ಆದರೆ ಹೋಳಿಹುಣ್ಣಿವೆ ಬೇಸಿಗೆ ಸಮಯದಲ್ಲಿ ಬರುವುದರಿಂದ ಇದೀಗ ಜಮೀನಿನಲ್ಲಿ ಕೆಲಸಗಳು ಇರುವುದಿಲ್ಲ. ಹೀಗಾಗಿ ಈ ಹದಿನೈದು ದಿನ ನಿತ್ಯ ಸಂಜೆ ನಮ್ಮೂರಲ್ಲಿ ಹುಡುಗರೆಲ್ಲ ಸೇರಿ ಹಲಗೆ ಬಾರಿಸುವ ಮೂಲಕ ಸಂಭ್ರಮಿಸುತ್ತೇವೆ. ಹಿಂದೂಗಳ ಸಾಂಪ್ರದಾಯಕ ಹಬ್ಬವಾದ ಹೋಳಿಯನ್ನು ನಾವೆಲ್ಲ ಅದ್ಧೂರಿಯಿಂದ ಆಚರಿಸುತ್ತೇವೆ.-ಶಿವು ತೇರದಾಳ, ಹಲಗೆ ವಾದಕ