ನಾಗಮಂಗಲ ಗಲಭೆ ಬಳಿಕ ಬೀದಿಗೆ ಬಂತು ಜನರ ಬದುಕು..!

| Published : Sep 23 2024, 01:15 AM IST

ಸಾರಾಂಶ

ನಾಗಮಂಗಲ ಗಲಭೆ ಘಟನೆ ನಂತರ ನಮ್ಮನ್ನು ಕಾಪಾಡಿ ಎಂದು ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಕಣ್ಮುಚ್ಚಿ ಕುಳಿತಿರುವ ಸರ್ಕಾರ ಏನು ಮಾಡುತ್ತಿದೆ. ಉಸ್ತುವಾರಿ ಮಂತ್ರಿಗಳಿಗೆ ಜನರ ನೋವು ಅರ್ಥವಾಗುತ್ತಿಲ್ಲವೇ. ಅವರೇ ಉತ್ತರ ಕೊಡಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಗಣೇಶ ವಿಸರ್ಜನೆ ವೇಳೆ ಪಟ್ಟಣದಲ್ಲಿ ನಡೆದ ಕೋಮು ಗಲಭೆಯಿಂದ ಹಲವು ಜನರ ಜೀವನ ಹಾಳಾಗಿ ಕುಟುಂಬಗಳು ಬೀದಿಗೆ ಬಂದಿವೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಜನರ ನೋವು ಅರ್ಥವಾಗುತ್ತಿಲ್ಲವೇ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಬದರಿಕೊಪ್ಪಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನೆಲಕಚ್ಚಿದೆ. ಪಟ್ಟಣದಲ್ಲಿ ನಡೆದ ಕೋಮು ಗಲಭೆಯನ್ನು ಗೃಹ ಸಚಿವರು ಇದೊಂದು ಸಣ್ಣ ಘಟನೆ ಎನ್ನುತ್ತಾರೆ. ಇದನ್ನು ಸಣ್ಣ ಘಟನೆ ಎಂದು ಪರಿಗಣಿಸಬೇಕೆ ಎಂದು ಪ್ರಶ್ನೆ ಮಾಡಿದರು. ಘಟನೆ ನಂತರ ನಮ್ಮನ್ನು ಕಾಪಾಡಿ ಎಂದು ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಕಣ್ಮುಚ್ಚಿ ಕುಳಿತಿರುವ ಸರ್ಕಾರ ಏನು ಮಾಡುತ್ತಿದೆ. ಉಸ್ತುವಾರಿ ಮಂತ್ರಿಗಳಿಗೆ ಜನರ ನೋವು ಅರ್ಥವಾಗುತ್ತಿಲ್ಲವೇ. ಅವರೇ ಉತ್ತರ ಕೊಡಬೇಕು ಎಂದು ಗುಡುಗಿದ ಅವರು, ಕೋಮು ಗಲಭೆ ನಂತರ ಜಿಲ್ಲಾಧಿಕಾರಿ, ಎಸ್ಪಿ ನೇತೃತ್ವದಲ್ಲಿ ಎರಡು ಸಮುದಾಯದ ಜನರ ನಡುವೆ ನಡೆಸಿದ ಶಾಂತಿ ಸಭೆ ಬಳಿಕ ಶಾಂತಿ ನೆಲೆಸಬೇಕಲ್ಲವೇ. ಆದರೆ, ಕಾಟಾಚಾರಕ್ಕೆ ಸಭೆ ನಡೆಸಲಾಗಿದೆ ಎಂಬ ಅನುಮಾನ ಮೂಡಿದೆ ಎಂದರು.

ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವವರನ್ನು ಕಾನೂನಿನ ಪ್ರಕಾರ ಹೊರತಂದು ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ. ಆದರೆ, ಅಮಾಯಕರು ಮಾಡಿರುವ ತಪ್ಪೇನು. ಬದರಿಕೊಪ್ಪಲು ಗ್ರಾಮದ ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಆಸುಪಾಸಿನ ಗ್ರಾಮದವರು ಬಂದು ಅವರಿಗೆ ಸಹಾಯ ಹಸ್ತ ನೀಡುತ್ತಿದ್ದಾರೆ ಎಂದರು.

ಒಂದು ಜಾತಿ ಸಮುದಾಯವನ್ನು ಓಲೈಸಿಕೊಂಡು ಜಿಲ್ಲೆಯಲ್ಲಿ ರಾಜಕಾರಣ ಮಾಡಲು ನಾವು ಸಿದ್ಧರಿಲ್ಲ. ಮಾನವೀಯತೆ ಮೆರೆಯುವ ಸಲುವಾಗಿ ಘಟನೆ ನಂತರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಎರಡು ಬಾರಿ ಭೇಟಿಕೊಟ್ಟು ಆಸ್ತಿ ಪಾಸ್ತಿ ನಷ್ಟ ಮತ್ತು ನೋವುಂಟಾಗಿರುವ ಎಲ್ಲ ಸಂತ್ರಸ್ತರಿಗೆ ಸಾಂತ್ವನ ಹೇಳಿ ವೈಯುಕ್ತಿಕವಾಗಿ ಪರಿಹಾರ ಕೊಟ್ಟುಹೋಗಿದ್ದಾರೆ ಎಂದರು.

ನಾಗಮಂಗಲವನ್ನು ಪ್ರತಿನಿಧಿಸುವ ಚಲುವರಾಯಸ್ವಾಮಿ ಅವರು ಗ್ರಾಮಸ್ಥರ ಕಷ್ಟಕ್ಕೆ ಯಾವ ರೀತಿ ಸ್ಪಂದಿಸಿದ್ದಾರೆ. ಗ್ರಾಮದ ಅಮಾಯಕರು ಏನು ತಪ್ಪು ಮಾಡಿದ್ದಾರೆ ಎಂದರು.

ಶಾಂತಿಯ ವಾತಾವರಣ ನಿರ್ಮಾಣ ಮಾಡೇಕಿದ್ದ ಜಿಲ್ಲಾಡಳಿತ ಎಲ್ಲಿಗೆ ಬಂದು ನಿಂತಿದೆ. ಕಳೆದ ವರ್ಷವೂ ಇದೇ ರೀತಿ ಘಟನೆ ಪಟ್ಟಣದಲ್ಲಿ ನಡೆದಿತ್ತು ಎನ್ನಲಾಗುತ್ತಿದೆ. ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದರು.