ಸಾರಾಂಶ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಕಡು ಬೇಸಗೆ ನಂತರ ಮಳೆ ಅಬ್ಬರದ ನಡುವೆ ತಂಪಾಗಿರುವ ವಾತಾವರಣದಲ್ಲಿ ಈ ಬಾರಿಯ ಶೈಕ್ಷಣಿಕ ಚಟುವಟಿಕೆ ಆರಂಭಗೊಳ್ಳುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಘೋಷಿಸಿದ ಬೇಸಗೆ ರಜೆ ಮೇ 28 ರ ಮಂಗಳವಾರಕ್ಕೆ ಮುಕ್ತಾಯಗೊಂಡಿದ್ದು, 29 ರ ಬುಧವಾರದಿಂದ ಶಾಲೆಗಳ ಬಾಗಿಲುಗಳು ತೆರೆಯಲಿವೆ.ಶಿಕ್ಷಣ ಇಲಾಖೆ ಉದ್ದೇಶಿತ ಸೂಚನೆ ಅನ್ವಯ ಬುಧವಾರ ಬೆಳಿಗ್ಗೆ ಶಾಲೆಗಳು ತೆರೆಯುವವಾದರೂ ಮಕ್ಕಳು ಆಗಮಿಸುವುದಿಲ್ಲ. ಬದಲಾಗಿ ಶಿಕ್ಷಕರು ಬಾಗಿಲು ತೆಗೆದು ಎಲ್ಲವನ್ನು ಸ್ವಚ್ಚಗೊಳಿಸಲಿದ್ದಾರೆ. ಎಸ್‌ಡಿಎಂಸಿಗಳ ಜೊತೆ ಸಂಪರ್ಕ ಸಾಧಿಸಿ ವಿದ್ಯಾರ್ಥಿಗಳ ಸ್ವಾಗತಿಸಲು ಸಿದ್ಧತೆ ನಡೆಸಲಿದ್ದಾರೆ. ಇಡೀ ವರ್ಷದ ಶೈಕ್ಷಣಿಕೆ ಚಟುವಟಿಕೆ ಸಂಬಂಧಿ ಸಿದಂತೆ ವೇಳಾಪಟ್ಟಿ, ಕ್ರಿಯಾಯೋಜನೆ ಎಲ್ಲವನ್ನೂ ತಯಾರಿಸಿಕೊಳ್ಳಲಿದ್ದಾರೆ.
ಜಿಲ್ಲೆಯಲ್ಲಿ 858 ಕಿರಿಯ ಹಾಗೂ 1168 ಹಿರಿಯ ಸೇರಿ 2026 ಪ್ರಾಥಮಿಕ ಹಾಗೂ 493 ಪ್ರೌಢ ಸೇರಿ ಒಟ್ಟು 2519 ಶಾಲೆಗಳಿದ್ದು, ಸುಮಾರು 1.60 ಲಕ್ಷ ಮಕ್ಕಳಿದ್ದಾರೆ. ಸರ್ಕಾರಿ ಶಾಲೆಗಳತ್ತ ಹೆಜ್ಜೆ ಹಾಕುವ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲಾಗುತ್ತಿದೆ. ಪೋಷಕರು, ಎಸ್ ಡಿಎಂಸಿ ಸದಸ್ಯರು, ಶಿಕ್ಷಕರು ಶಾಲೆಗಳಿಗೆ ತಳಿರು ತೋರಣ ಕಟ್ಟಿ ವಿಶೇಷ ಮೆರಗುಪ ನೀಡಿ ಮಕ್ಕಳ ಸ್ವಾಗತಿಸಲಿದ್ದಾರೆ. ಕೆಲವು ಕಡೆ ಸಿಹಿಯೂಟಕ್ಕೂ ವ್ಯವಸ್ಥೆ ಮಾಡಲಾಗಿದೆ .ಎಸ್ ಡಿಎಂಸಿ ಸ್ಟ್ರಾಂಗ್ ಇರುವ ಕಡೆ ಹೋಳಿಗೆ ಸೀಕರಣೆಗೂ ಸಿದ್ದತೆ ನಡೆದಿವೆ. ಇದರೊಟ್ಟಿಗೆ ರಾಜ್ಯ ಸರ್ಕಾರದ ಮಹತ್ವದ ಬಿಸಿಯೂಟ, ಕ್ಷೀರಭಾಗ್ಯ ಯೋಜನೆಗಳು ಪುನರಾರಂಭವಾಗಲಿವೆ.ಶಾಲೆಗಳ ಆವರಣ, ಕೊಠಡಿಗಳ ಸ್ವಚ್ಛತೆ ನಡೆಸಿ, ತಳಿರು, ತೋರಣಗಳಿಂದ ಶಾಲೆಗಳನ್ನು ಸಿಂಗರಿಸಲು, ಮಕ್ಕಳನ್ನು ಬರಮಾಡಿಕೊಳ್ಳಲು ಅಗತ್ಯ ತಯಾರಿ ನಡೆದಿದೆ. ಮಧ್ಯಾಹ್ನದ ಬಿಸಿಯೂಟಕ್ಕೂ ಚಾಲನೆ ದೊರೆಯಲಿದ್ದು, ಶಾಲೆ ಆರಂಭದ ದಿನ ಆಯಾ ಶಾಲೆಗಳಲ್ಲಿ ಶಾಲಾ ಆಡಳಿತ ಮಂಡಳಿ ನೇತೃತ್ವದಲ್ಲಿ ಪಾಯಸ, ಅನ್ನ ಸಾಂಬಾರು ತಯಾರಿಸಿ ಮಕ್ಕಳಿಗೆ ಉಣಬಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೆಲವು ಕಡೆ ಶಾಲೆಗಳು ಸೋರಿದ್ದು ಅವುಗಳ ದುರಸ್ತಿ ಕಡೆ ಗಮನ ಹರಿಸಲಾಗುತ್ತಿದೆ. ಅಕ್ಷರ ದಾಸೋಹದ ಅಡುಗೆ ಮನೆಗಳು ಸುಣ್ಣ ಬಣ್ಣ ಕಾಣಲಿವೆ. ಕುಡಿಯುವ ನೀರು ಸೇರಿದಂತೆ ಮತ್ತಿತರ ಅಗತ್ಯ ಸಿದ್ಧತೆ ನಡೆಯಲಿದೆ. ಶಿಕ್ಷಣ ಇಲಾಖೆ ಆಯಾ ಶಾಲಾ ಹಂತದಲ್ಲಿ ಎಸ್ ಡಿಎಂಸಿ ಪದಾಧಿಕಾರಿಗಳ ಸಭೆ ನಡೆಸಿ ಸ್ವಚ್ಚತೆ ಕಾರ್ಯಗಳ ಕೈಗೊಳ್ಳುವ ಬಗ್ಗೆ ಸೂಚನೆಗಳ ನೀಡಿದೆ.ಶೇ.100 ರಷ್ಟು ಪಠ್ಯಪುಸ್ತಕ ಪೂರೈಕೆ2024-25 ನೇ ಸಾಲಿಗೆ ಅಗತ್ಯವಾಗಿ ಬೇಕಾಗಿರುವ ಎಲ್ಲ ಪಠ್ಯ ಪುಸ್ತಗಳು ಸರ್ಕಾರದಿಂದ ಪೂರೈಕೆಯಾಗಿ ಆಯಾ ಶಾಲೆಗಳಿಗೆ ತಲುಪಿವೆ. ಒಂದರಿಂದ ಹತ್ತನೇ ತರಗತಿವರೆಗೆ ಒಟ್ಟಾರೆ 24, 78,345 ಪುಠ್ಯಪುಸ್ತಕಗಳ ಬೇಡಿಕೆಯಿದ್ದು ಎಲ್ಲವನ್ನು ಪೂರೈಕೆ ಮಾಡಲಾಗದಿೆ.ಒಂದರಿಂದ ಹತ್ತನೇ ತರಗತಿವರೆಗೆ ಸರ್ಕಾರಿ ಮತ್ತು ಅನುದಾನಿ ಶಾಲೆಗಳಿಗೆ ಉಚಿತ ಪುಸ್ತಕ ಪೂರೈಕೆಯಾಗುತ್ತದೆ. ಉಳಿದಂತೆ ಅನುದಾನ ರಹಿತ ಶಾಲೆಗಳು ಹಣ ಪಾವತಿಸಿ ಪುಸ್ತಕಖರೀದಿ ಮಾಡಬೇಕಿದೆ. ಎರಡೂ ಹಂತದ ಸಮವಸ್ತ್ರಗಳು ಈಗಾಗಲೇ ಎಲ್ಲ ಶಾಲೆಗಳಿಗೆ ಪೂರೈಕೆಯಾಗಿವೆ.
ಚಿತ್ರದುರ್ಗ ಜಿಲ್ಲೆ ಡಿಡಿಪಿಐ ಎಂ.ನಾಸಿರುದ್ದೀನ್ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲೆ ಪ್ರಾರಂಭೋತ್ಸವಕ್ಕೆ ಭರದ ಸಿದ್ಧತೆ ಗಳು ನಡೆದಿವೆ. ಬುಧವಾರದಿಂದಲೇ ಶಿಕ್ಷಕರು ಶಾಲೆಗಳಿಗೆ ತೆರಳಿ ಅಗತ್ಯ ಪೂರ್ವ ಸಿದ್ದತೆ ಕೈಗೊಳ್ಳುವರು. ಅಕ್ಷರ ದಾಸೋಹ ಸೇರಿದಂತೆ ಎಲ್ಲ ಯೋಜನೆಗಳಿಗೆ ಎಲ್ಲಿಯೂ ಲೋಪವಾಗದಂತೆ ಎಚ್ಚರವಹಿಸುವರು. ಶಾಲೆ ಗಳು ತಳಿರು ತೋರಣಗಳಿಂದ ಸಿಂಗಾರಗೊಳಿಸಲು ಎಸ್ ಡಿಎಂಸಿಗಳು ಸಜ್ಜಾಗಿವೆ. ಕುಡಿವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳ ಕಡೆ ಗಮನ ಹರಿಸಲಾಗಿದೆ ಎಂದು ಹೇಳಿದರು.ಶಾಲೆಗಳನ್ನು ಸಂಭ್ರಮದಿಂದ ಆರಂಭಿಸಿ: ಬಿಇಒ ಇ.ನಿರ್ಮಲಾದೇವಿಮೊಳಕಾಲ್ಮುರು: ಶಾಲಾ ದಾಖಲಾತಿ ಆಂದೋಲನವನ್ನು ಕೈಗೊಂಡು ಶಾಲೆ ಬಿಟ್ಟ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕರೆತರುವ ಮೂಲಕ ಮೇ 30 ರಂದು ವಿದ್ಯುಕ್ತವಾಗಿ ಶಾಲೆಗಳನ್ನು ಆರಂಭಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಇ.ನಿರ್ಮಲಾದೇವಿರವರು ತಿಳಿಸಿದ್ದಾರೆ.ಪಟ್ಟಣದ ಶ್ರೀದುರ್ಗಾ ಪ್ರೌಢಶಾಲೆಯ ಸಭಾಂಗಣದಲ್ಲಿ ಮಂಗಳವಾರ 2024-25ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಪೂರ್ವ ಸಿದ್ಧತೆ ಕುರಿತು ಮುಖ್ಯ ಶಿಕ್ಷಕರ ಸಭೆಯಲ್ಲಿ ಮಾತನಾಡಿದರು.
ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಮುಖ್ಯ ಶಿಕ್ಷಕರು ಶಾಲಾ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಶಾಲಾ ಕಟ್ಟಡ, ಅಡುಗೆ ಕೋಣೆ ಹಾಗೂ ಶೌಚಾಲಯವನ್ನು ಸುಣ್ಣ ಬಣ್ಣಗಳಿಂದ ಸ್ವಚ್ಛಗೊಳಿಸಲು ಕಾಲಾವಕಾಶ ಪಡೆದು ಸ್ವಚ್ಛತೆ ಕೈಗೊಳ್ಳಬೇಕು. ಮಕ್ಕಳ ದಾಖಲಾತಿಗಾಗಿ ಅಂಗನವಾಡಿಗಳನ್ನು ಬೇಟಿ ನೀಡಿ ಎಲ್ಲಾ ಮಕ್ಕಳನ್ನು ದಾಖಲಿಸಿಕೊಳ್ಳಬೇಕು. ನಿರಂತರವಾಗಿ ಗೈರಾದ ಮಕ್ಕಳನ್ನು ಕರೆತರಲು ಆಯಾ ಶಿಕ್ಷಕರು ಮನೆ ಬೇಟಿ ಮಾಡಿ ಆ ಮಕ್ಕಳನ್ನು ಶಾಲೆಗೆ ಪುನಃ ಕರೆತರಬೇಕು. ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯ ಪುಸ್ತಕ ಹಾಗೂ ಲಭ್ಯವಿರುವ ಸೌಲಭ್ಯಗಳನ್ನು ನೀಡಿ ಮಕ್ಕಳನ್ನು ಸ್ವಾಗತಿಸಬೇಕು ಎಂದರು.ಶಾಲಾಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಿಕೊಂಡು ಸ ಶಾಲೆಯ ಅಭಿವೃದ್ಧಿ ಶ್ರಮಿಸಬೇಕು.ಕೈಗೊಳ್ಳಬೇಕಾಗಿದೆ. ಈ ವರ್ಷ ಸರ್ಕಾರವು ಕಲಿಕಾ ಬಲವರ್ಧನಾ ವರ್ಷ ಎಂದು ಘೋಷಣೆ ಮಾಡಿದ್ದು, ಮಕ್ಕಳ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ತಿಳಿಸಿದರು. ಈ ವೇಳೆ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಕೆ.ತಿಪ್ಪೇಸ್ವಾಮಿ ಮಾತನಾಡಿ, ಶಿಕ್ಷಣ ಇಲಾಖೆಯ ಆಯುಕ್ತರ ಆದೇಶದ ಮೇರೆಗೆ ಪ್ರತಿ ಶಾಲೆಯಲ್ಲಿ ಈ ವರ್ಷದ ಶೈಕ್ಷಣಿಕ ಆರಂಭದಿಂದ ಕೊನೆಯವರೆಗೂ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳನ್ನೊಳಗೊಂಡ ವಿಸ್ತೃತ ವರದಿಯುಳ್ಳ ಶೈಕ್ಷಣಿಕ ಮಾರ್ಗದರ್ಶಿಯನ್ನು ಹೊಂದಿರ ಬೇಕು. ಮುಖ್ಯವಾಗಿ ದಾಖಲಾತಿ ಆಂದೋಲನ ಕೈಗೊಳ್ಳಬೇಕು. ನಲಿ-ಕಲಿ ಕಾರ್ಯಕ್ರಮ ಬದಲಾಗಿದ್ದು, ಜೂನ್ ತಿಂಗಳಲ್ಲಿ ಎಲ್ಲಾ ಶಿಕ್ಷಕರಿಗೆ ಒಂದು ದಿನದ ತರಬೇತಿಯನ್ನು ನೀಡಲಾಗುವುದು. ಪ್ರಮುಖವಾಗಿ ಈ ಬಾರಿ ಬುನಾದಿ ಸಾಕ್ಷರತೆ ಮತ್ತು ಮೂಲಭೂತ ಸಂಖ್ಯಾ ಜ್ಞಾನದ ( ಎಫ್.ಎಲ್.ಎನ್.) ಕಾರ್ಯಕ್ರಮಗಳನ್ನು ನೀಡಲಾಗುವುದು. ಪ್ರತಿ ಜೂನ್ ತಿಂಗಳಲ್ಲಿ ಪ್ರತಿ ಶಾಲೆಯ ಮಕ್ಕಳು ಕಲಿತಿರುವ ಓದು, ಬರಹ ಹಾಗೂ ಲೆಕ್ಕದ ಬಗ್ಗೆ ಸರ್ವೆ ಮಾಡಲಾಗುವುದು.ಸಂದರ್ಭದಲ್ಲಿ ಬಿ.ಆರ್.ಪಿ. ಮಂಜುನಾಥ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಕೆ.ಹೆಚ್.ಸಣ್ಣಯಲ್ಲಪ್ಪ, ಸರ್ಕಾರಿ ನೌಕರರ ಸಂಘದ ಪದಾಧಿಕಾರಿ ಗಳಾದ ಮಲ್ಲೇಶ್, ಸದಸ್ಯ ಕರಿಬಸಪ್ಪ, ಇ.ಸಿ.ಒ. ಓಂಕಾರಪ್ಪ, ಸಿ.ಆರ್.ಪಿ.ಮಂಜುನಾಥ, ಸಿ.ಆರ್.ಪಿ.ಗಳು, ಬಿ.ಐ.ಆರ್.ಟಿ.ಗಳು ಹಾಗೂ ಕಸಬಾ ಹೋಬಳಿ ಮಟ್ಟದ ಶಾಲಾ ಮುಖ್ಯ ಶಿಕ್ಷಕರು ಭಾಗವಹಿಸಿದ್ದರು.