ಎರಡು ದಶಕದ ಬಳಿಕ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಕಾಂಗ್ರೆಸ್‌ ಕೈ ಚಳಕ

| Published : Jun 05 2024, 12:31 AM IST

ಎರಡು ದಶಕದ ಬಳಿಕ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಕಾಂಗ್ರೆಸ್‌ ಕೈ ಚಳಕ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಅಭ್ಯರ್ಥಿ ಗೆಲುವು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಪಕ್ಷದ ಶಾಸಕರ ಒಗ್ಗಟ್ಟಿನ ಶ್ರಮ ಎಂದೇ ವಿಶ್ಲೇಷಿಸಲಾಗುತ್ತಿದೆ.

ಬಳ್ಳಾರಿ: ಲೋಕಸಭಾ ಕ್ಷೇತ್ರದ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಭರ್ಜರಿಗೆ ಗೆಲುವು ಸಾಧಿಸಿದ್ದಾರೆ. ಚುನಾವಣೋತ್ತರ ಸಮೀಕ್ಷೆಯಿಂದ ಜಯದ ನಿರೀಕ್ಷೆಯಲ್ಲಿದ್ದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು 87 ಸಾವಿರ ಮತಗಳ ಅಂತರದಲ್ಲಿ ಸೋಲುಂಡು ಮುಖಭಂಗ ಅನುಭವಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಗೆಲುವು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಪಕ್ಷದ ಶಾಸಕರ ಒಗ್ಗಟ್ಟಿನ ಶ್ರಮ ಎಂದೇ ವಿಶ್ಲೇಷಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಮಬಲದಿಂದ ಗೆದ್ದು ಬೀಗುವ ಉತ್ಸುಕತೆಯಲ್ಲಿದ್ದ ಬಿಜೆಪಿಗೆ ಜಿಲ್ಲೆಯ ಮತದಾರ ತಿರುಗೇಟು ನೀಡಿದ್ದಾನೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದ ಬಿ.ಶ್ರೀರಾಮುಲುಗೆ ಲೋಕಸಭಾ ಚುನಾವಣೆ ರಾಜಕೀಯ ನೆಲೆ ನೀಡಲಿದೆ ಎಂಬ ನಿರೀಕ್ಷೆಯೂ ಹುಸಿಯಾಗಿದೆ. ಬಿಜೆಪಿ ಪ್ರಭಾವಿ ನಾಯಕ ಎಂದೇ ಗುರುತಿಸಿಕೊಂಡಿದ್ದ ಶ್ರೀರಾಮುಲುಗೆ ಸತತ ಸೋಲಿನ ಪೆಟ್ಟು ಬಿದ್ದಿದೆ.

ನಿರಂತರ ಮುನ್ನಡೆ: ನಗರದ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಿತು.

12ನೇ ಸುತ್ತಿನಲ್ಲಿ ಬಿಜೆಪಿ 5 ಸಾವಿರ ಲೀಡ್ ಪಡೆದುಕೊಂಡಿದ್ದು ಬಿಟ್ಟರೆ, ಉಳಿದ ಸುತ್ತುಗಳಲ್ಲಿ ಬಿಜೆಪಿಗೆ ಹಿನ್ನಡೆಯಾಯಿತು. ನಿರಂತರ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ಹಾದಿ ಸುಗಮಗೊಳಿಸಿಕೊಂಡರು. ಬೆಳಗ್ಗೆ 9 ಗಂಟೆಗೆ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ 3940 ಮತಗಳ ಮುನ್ನಡೆ ಸಾಧಿಸಿತು. ನಂತರದಲ್ಲಿ ಗೆಲುವಿನ ಅಂತರವನ್ನು ಹಿಗ್ಗಿಸಿಕೊಳ್ಳುತ್ತಾ ಸಾಗಿತು. 6ನೇ ಸುತ್ತಿನಲ್ಲಿ ಕಾಂಗ್ರೆಸ್ 50 ಸಾವಿರ ಮತಗಳ ಮುನ್ನಡೆ ದಾಟಿ ಗೆಲುವಿನ ಸುಳಿವು ನೀಡಿತು. ಮಧ್ಯಾಹ್ನ 1 ಗಂಟೆ ವೇಳೆಗೆ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಾತ್ರಿಯಾಯಿತು.

ಚುನಾವಣೆ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು, ಮತ ಎಣಿಕೆ ಕೇಂದ್ರದ ಹೊರ ವಲಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಕೈ ಅಭ್ಯರ್ಥಿ ಗೆಲುವು ಖಚಿತವಾಗುತ್ತಿದ್ದಂತೆಯೇ ಜಯಘೋಷ ಕೂಗಿದರು. ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ಅವರನ್ನು ಎತ್ತಿ ಸಂಭ್ರಮಿಸಿದ ಪಕ್ಷದ ಬೆಂಬಲಿಗರು, ಪಕ್ಷದ ರಾಷ್ಟ್ರೀಯ ನಾಯಕರು ಹಾಗೂ ರಾಜ್ಯ ನಾಯಕರ ಪರ ಘೋಷಣೆಗಳನ್ನು ಕೂಗಿ, ಕುಣಿದಾಡಿದರು.

ವಿಜಯೋತ್ಸವದ ವೇದಿಕೆ ತೆರವು: ಚುನಾವಣೋತ್ತರ ಸಮೀಕ್ಷೆಯನ್ನು ನಂಬಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸದಲ್ಲಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ನಗರದ ಎಸ್ಪಿ ವೃತ್ತದಲ್ಲಿರುವ ಬಿಜೆಪಿ ಹಳೆಯ ಕಚೇರಿ ಮುಂಭಾಗ ವಿಜಯೋತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ವೇದಿಕೆ ನಿರ್ಮಾಣ, ನೂರಾರು ಜನರಿಗೆ ಸಿಹಿಯೂಟ, ಮೆರವಣಿಗೆ, ಹಾಲಿನ ಅಭಿಷೇಕಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ಹಾದಿಯತ್ತ ಮುನ್ನುಗ್ಗುತ್ತಿದ್ದಂತೆಯೇ ವೇದಿಕೆಯನ್ನು ತೆರವುಗೊಳಿಸಿದರು.

ತೀವ್ರ ಪೈಪೋಟಿ ಕಂಡು ಬಂದಿದ್ದ ಬಳ್ಳಾರಿ ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ಭಾರೀ ಕುತೂಹಲವಿತ್ತು. ಜಿಲ್ಲೆಯ ಜನರು ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದರು. ಬೆಳಗ್ಗೆಯಿಂದಲೇ ಟಿವಿ ಮುಂದೆ ಕುಳಿತು ದೇಶ ಹಾಗೂ ರಾಜ್ಯದ ಫಲಿತಾಂಶವನ್ನು ವೀಕ್ಷಿಸಿದರು. ಹೀಗಾಗಿ ನಗರದ ಪ್ರಮುಖ ರಸ್ತೆಗಳು ಜನರಿಲ್ಲದೆ ಬಿಕೋ ಎಂದವು. ಬೆಂಗಳೂರು ರಸ್ತೆ, ಗ್ರಹಂ ರಸ್ತೆ, ಬ್ರಾಹ್ಮಣ ಬೀದಿ, ಟ್ಯಾಂಕ್ ಬಂಡ್ ರಸ್ತೆ ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಗ್ರಾಹಕರು ಕಂಡು ಬರಲಿಲ್ಲ.

20 ವರ್ಷದ ಬಳಿಕ ಗೆಲುವು ಕಂಡ ಕಾಂಗ್ರೆಸ್: 2004ರಿಂದ ಸತತ ಗೆಲುವಿನ ರುಚಿ ಕಂಡಿದ್ದ ಬಿಜೆಪಿ ಈ ಬಾರಿ ಸೋಲಿನ ಕಹಿ ಉಂಡಿದೆ. 2004ರಲ್ಲಿ ಜನಾರ್ದನ ರೆಡ್ಡಿಯ ಹಿರಿಯ ಸಹೋದರ ಜಿ.ಕರುಣಾಕರ ರೆಡ್ಡಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದು ಬಿಜೆಪಿಯ ಮೊದಲ ಗೆಲುವಾಗಿತ್ತು.

2009ರಲ್ಲಿ ಶ್ರೀರಾಮುಲು ಸಹೋದರಿ ಜೆ.ಶಾಂತಾ ಅವರು ಬಿಜೆಪಿ ಅಭ್ಯರ್ಥಿಯಾಗಿ ಗೆಲವು ದಾಖಲಿಸಿದ್ದರು. 2014ರಲ್ಲಿ ಶ್ರೀರಾಮುಲು ಸ್ಪರ್ಧಿಸಿ ಜಯ ಸಾಧಿಸಿದ್ದರು. 2019ರಲ್ಲಿ ಜರುಗಿದ ಚುನಾವಣೆಯಲ್ಲಿ ವೈ. ದೇವೇಂದ್ರಪ್ಪ ಬಿಜೆಪಿಯಿಂದ ಗೆದ್ದಿದ್ದರು. 20 ವರ್ಷಗಳ ಬಳಿಕ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ಬಳ್ಳಾರಿ ಕೈ ಪಕ್ಷದ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಿದೆ. 2018 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಉಗ್ರಪ್ಪ ಕಾಂಗ್ರೆಸ್‌ನಿಂದ ಗೆದ್ದು 10 ತಿಂಗಳು ಸಂಸದರಾಗಿದ್ದು ಬಿಟ್ಟರೆ ಕಳೆದ 20 ವರ್ಷದಿಂದ ಬಿಜೆಪಿ ಸಂಸದರೇ ಇಲ್ಲಿದ್ದರು.

ರೆಡ್ಡಿ ಪ್ರಭಾವ ಕೆಲಸ ಮಾಡಲಿಲ್ಲ:

ತೀವ್ರ ಹಣಾಹಣಿ ಕಂಡು ಬಂದಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಜನಾರ್ದನ ರೆಡ್ಡಿಯ ಬಲ ಹೆಚ್ಚು ಪ್ರಭಾವ ಬೀರಲಿಲ್ಲ. ಸ್ವಂತ ಪಕ್ಷ ಕಟ್ಟಿದ್ದ ಜನಾರ್ದನ ರೆಡ್ಡಿ, ಬಳಿಕ ಬಿಜೆಪಿಯೊಂದಿಗೆ ಪಕ್ಷ ವಿಲೀನಗೊಳಿಸಿದರು. ಹೀಗಾಗಿ, ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಶ್ರೀರಾಮುಲು ಪರ ಪ್ರಚಾರ ನಡೆಸಿದರು. ರೆಡ್ಡಿ ಬಲದಿಂದ ಶ್ರೀರಾಮುಲು ಗೆಲವು ಸುಲಭವಾಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಜಿಲ್ಲೆಯ ಮತದಾರ ಬಿಜೆಪಿಯನ್ನು ತಿರಸ್ಕರಿಸಿ ಕೈಗೆ ಜೈ ಎಂದಿದ್ದಾನೆ.

ಅಣ್ಣ-ತಂಗಿ ಸೋಲು: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹಿಂದೂಪುರ ಕ್ಷೇತ್ರದಿಂದ ವೈಎಸ್ಸಾರ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಶ್ರೀರಾಮುಲು ಸಹೋದರಿ ಜೆ.ಶಾಂತಾ ಅವರು ಸೋಲುಂಡಿದ್ದಾರೆ. ತೆಲುಗು ದೇಶಂ ಪಕ್ಷದ ಅಭ್ಯರ್ಥಿ ಪಾರ್ಥಸಾರಥಿ ವಿರುದ್ಧ ಜೆ.ಶಾಂತಾ ಭಾರೀ ಅಂತರದ ಸೋಲು ಅನುಭವಿಸಿದ್ದಾರೆ. ಈ ಚುನಾವಣೆಯಲ್ಲಿ ಅಣ್ಣ-ತಂಗಿ ಸಂಸತ್ ಪ್ರವೇಶಿಸಲಿದ್ದಾರೆ ಎಂಬ ನಿರೀಕ್ಷೆ ಹುಸಿಯಾಗಿದ್ದು, ಸಂಸದರಾಗುವ ಆಸೆಗೆ ನೀರೆರಚಿದಂತಾಗಿದೆ.