ಸಾರಾಂಶ
- ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಪಕ್ಷದಿಂದ ಸಂಭ್ರಮಾಚರಣೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರರಾಜ್ಯದ ಒಂದು ವರ್ಷದ ಕಾಂಗ್ರೆಸ್ ಆಡಳಿತವನ್ನು ಜನತೆ ತಿರಸ್ಕರಿಸಿದ್ದಾರೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಹೇಳಿದರು.
ಮಂಗಳವಾರ ಸಂಜೆ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವದಲ್ಲಿ ಮಾತನಾಡಿ, ರಾಜ್ಯದ ಜನತೆ ಬಿಟ್ಟಿ ಭಾಗ್ಯಗಳನ್ನು ವಿರೋಧಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಬಿಟ್ಟಿ ಭಾಗ್ಯ ಗಳ ಆಮಿಷಕ್ಕೊಳಗಾಗದೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಆಡಳಿತಕ್ಕೆ ಬೆಂಬಲ ಸೂಚಿಸಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಆಡಳಿತಕ್ಕೆ ಜನರು ಅಸ್ತು ಎಂದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಗಳ 5 ಕ್ಷೇತ್ರ ಗಳಲ್ಲೂ ಕಾಂಗ್ರೆಸ್ ಶಾಸಕರೇ ಇದ್ದರೂ ಅತೀ ಹೆಚ್ಚು ಮತಗಳನ್ನು ಜಿಲ್ಲೆಯ ಜನರು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ನೀಡಿದ್ದಾರೆ. ಅದರಲ್ಲ್ಲೂ ಶೃಂಗೇರಿ ಕ್ಷ್ರೇತ್ರದಲ್ಲಿ ಹೆಚ್ಚಿನ ಮಹಿಳೆಯರು ಬಿಜೆಪಿಯನ್ನೇ ಬೆಂಬಲಿಸಿದ್ದಾರೆ. ನಾಯಕರಾದ ಎಚ್.ಡಿ.ದೇವೇಗೌಡ, ಬಿ.ಎಸ್.ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ಆರ್.ಅಶೋಕ್ ಸೇರಿದಂತೆ ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಕೈ ಬಲ ಪಡಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ನಡುವೆಯೂ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಅತೀ ಹೆಚ್ಚು ಅಂತರಗಳಿಂದ ಜಯಶೀಲರಾಗಿ ಮಾಡಿರುವುದು ನಿಜಕ್ಕೂ ಸಂತಸ ತಂದಿದೆ. ಜಯಗಳಿಸಿದ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿಗಳೆಲ್ಲರೂ ಕೂಡ ಅತ್ಯಧಿಕ ಮತಗಳ ಅಂತರದಿಂದಲೇ ಗೆದ್ದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 5 ಕಾಂಗ್ರೆಸ್ ಶಾಸಕರಿದ್ದರೂ ಕೂಡ ಹೀನಾಯ ಸ್ಥಿತಿ ತಲುಪಿದೆ. ನಾವು ಈ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಕೊಂಡಿದ್ದೆವು. ಆದರೆ ಈ ರೀತಿ ಅಭೂತ ಪೂರ್ವ ಗೆಲುವು ಸಾಧಿಸುತ್ತೇವೆ ಎಂದು ಕೊಂಡಿರಲಿಲ್ಲ. ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಗೆಲುವು ಇಡೀ ಕ್ಷೇತ್ರದ ಮತ ದಾರರ ಗೆಲುವಾಗಿದೆ. ಈ ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದೀಜಿ ಪ್ರಧಾನಿಯಾಗಲಿದ್ದು ದೇಶ ಸುಭದ್ರವಾಗಲಿದೆ ಎಂದರು.ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಈ ಗೆಲುವಿನಲ್ಲಿ ಮಾಚಿ ಸಚಿವ ಡಿ.ಎನ್. ಜೀವರಾಜ್ ಹಾಗೂ ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಪರಿಶ್ರಮ ಬಹಳಷ್ಟಿದೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಹಗಲಿರುಳು ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ ಎಂದರು.ಬಿಜೆಪಿ ಕಾರ್ಯಕರ್ತರು ಅಂಬೇಡ್ಕರ್ ವೃತ್ತದಲ್ಲಿ ಪಟಾಕಿ ಸಿಡಿಸಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರ ಪರ ಘೋಷಣೆ ಕೂಗಿ ಸಂಭ್ರಮಾಚರಿಸಿದರು. ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕಾರಿಣಿ ಸಮಿತಿ ಸದಸ್ಯ ಸೈಯದ್ ಫರ್ವೀಜ್, ಬಿಜೆಪಿ ಮಂಡಲ ಅಧ್ಯಕ್ಷ ಅರುಣ ಕುಮಾರ್, ನಗರ ಘಟಕ ಅಧ್ಯಕ್ಷ ಸುರಭಿರಾಜೇಂದ್ರ, ತಾಲೂಕು ವಕ್ತಾರ ಎನ್.ಎಂ.ಕಾಂತರಾಜ್, ಬಿಜೆಪಿ ಮುಖಂಡರಾದ ಕೆಸವಿ ಮಂಜುನಾಥ್, .ಎಸ್.ಆಶೀಶ್‌ಕುಮಾರ್, ಎ.ಬಿ.ಮಂಜುನಾಥ್,ಎಚ್.ಡಿ.ಲೋಕೇಶ್, ವಿಜಯಕುಮಾರ್, ವೈ.ಎಸ್.ರವಿ, ಜೆಡಿಎಸ್ ಮುಖಂಡರಾದ ಇ.ಸಿ.ಸೇವಿಯಾರ್, ಶಿವದಾಸ್ ಮತ್ತಿತರರು ಉಪಸ್ಥಿತರಿದ್ದರು.