ಎರಡು ತಿಂಗಳ ಬಳಿಕ ಇಂದು ಕ್ಷೇತ್ರಕ್ಕೆ ರುದ್ರಪ್ಪ ಲಮಾಣಿ

| Published : May 18 2025, 11:50 PM IST

ಎರಡು ತಿಂಗಳ ಬಳಿಕ ಇಂದು ಕ್ಷೇತ್ರಕ್ಕೆ ರುದ್ರಪ್ಪ ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಮಾ. 14ರಂದು ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ ನಿಂತಿದ್ದ ವೇಳೆ ದ್ವಿಚಕ್ರ ವಾಹನ ಸವಾರನೊಬ್ಬ ವೇಗದಲ್ಲಿ ಬಂದು ಗುದ್ದಿದ್ದ. ಇದರಿಂದ ರುದ್ರಪ್ಪ ಲಮಾಣಿ ಅವರು ಗಂಭೀರವಾಗಿ ಗಾಯಗೊಂಡಿದ್ದರು.

ಹಾವೇರಿ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿಧಾನಸಭಾ ಉಪಾಧ್ಯಕ್ಷ ಹಾಗೂ ಹಾವೇರಿ ಶಾಸಕರೂ ಆದ ರುದ್ರಪ್ಪ ಲಮಾಣಿ ಅವರು ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದು, ಸೋಮವಾರ ಸ್ವಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಇದರಿಂದ ಕಾರ್ಯಕರ್ತರಲ್ಲಿ ಸಂಭ್ರಮ ಮನೆಮಾಡಿದೆ.

ಕಳೆದ ಮಾ. 14ರಂದು ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ ನಿಂತಿದ್ದ ವೇಳೆ ದ್ವಿಚಕ್ರ ವಾಹನ ಸವಾರನೊಬ್ಬ ವೇಗದಲ್ಲಿ ಬಂದು ಗುದ್ದಿದ್ದ. ಇದರಿಂದ ರುದ್ರಪ್ಪ ಲಮಾಣಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಇದೀಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಎರಡು ತಿಂಗಳ ಬಳಿಕ ಸೋಮವಾರ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಅವರನ್ನು ಸ್ವಾಗತಿಸಲು ಕಾರ್ಯಕರ್ತರು, ಅಭಿಮಾನಿಗಳು ಅಣಿಯಾಗಿದ್ದಾರೆ.

ಸೋಮವಾರ ಮಧ್ಯಾಹ್ನ 12 ಗಂಟೆಗೆ ಆಗಮಿಸಲಿರುವ ಅವರು, ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಭೇಟಿಯಾಗಲಿದ್ದಾರೆ. ಮಧ್ಯಾಹ್ನ 2.45ಕ್ಕೆ ಕಾರ್ಮಿಕ ಕಲ್ಯಾಣ ಇಲಾಖೆಯ ಸಂಚಾರಿ ಆರೋಗ್ಯ ತಪಾಸಣಾ ವಾಹನಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ 4 ಗಂಟೆಗೆ ರೈತರಿಗೆ ಬೀಜ, ಗೊಬ್ಬರ ವಿತರಣೆ ಮಾಡಿ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಪುತ್ರನಿಂದ ಕ್ಷೇತ್ರದಲ್ಲಿ ಓಡಾಟ: ತಂದೆ ಗಾಯಗೊಂಡು ವಿಶ್ರಾಂತಿ ಪಡೆಯುತ್ತಿರುವ ಎರಡು ತಿಂಗಳ ಕಾಲ ಅವರ ಅನುಪಸ್ಥಿತಿಯನ್ನು ಅವರ ಪುತ್ರ ದರ್ಶನಕುಮಾರ ಲಮಾಣಿ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಷೇತ್ರದ ಕೆಲಸ ಕಾರ್ಯಗಳು, ಕಾರ್ಯಕರ್ತರ ಕೆಲಸಗಳು ನಿಲ್ಲಬಾರದು ಎಂಬ ಕಾರಣಕ್ಕೆ ದರ್ಶನಕುಮಾರ್ ಲಮಾಣಿ ಕ್ಷೇತ್ರದ ಹಳ್ಳಿಹಳ್ಳಿಗೆ ಓಡಾಡಿ ಜನರ ಯೋಗಕ್ಷೇಮ ವಿಚಾರಿಸಿಕೊಂಡು ತಂದೆಯ ಅನುಪಸ್ಥಿತಿ ಕಾಡದಂತೆ ನೋಡಿಕೊಂಡಿದ್ದಾರೆ. ಅಲ್ಲದೇ ಅಧಿಕಾರಿಗಳಿಗೆ ಸಲಹೆ ನೀಡಿ ಕ್ಷೇತ್ರದಲ್ಲಿ ಕೆಲಸ ಕಾರ್ಯಗಳು ಆಗುವಂತೆ ನೋಡಿಕೊಂಡಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ಹೇಳುತ್ತಿದ್ದಾರೆ. ಹಾರ, ತುರಾಯಿ ಬೇಡ

ಎರಡು ತಿಂಗಳ ಬಳಿಕ ಶಾಸಕರು ಆಗಮಿಸುತ್ತಿರುವುದರಿಂದ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ. ಶಾಸಕರನ್ನು ಸ್ವಾಗತಿಸಲು ಅನೇಕರು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ತಮ್ಮನ್ನು ಮಾತನಾಡಿಸಲು, ಆರೋಗ್ಯ ವಿಚಾರಿಸಲು ಬರುವವರು ಶಾಲು, ಮಾಲೆ, ಹಾರ, ಪೇಟ, ಹೂಗುಚ್ಛ ಇತ್ಯಾದಿ ಸಾಮಗ್ರಿ ತರಬಾರದು ಎಂದು ರುದ್ರಪ್ಪ ಲಮಾಣಿ ಅವರು ವಿನಮ್ರವಾಗಿಯೇ ಮನವಿ ಮಾಡಿದ್ದಾರೆ. ಶಾಸಕರ ಪ್ರವಾಸ ಪಟ್ಟಿಯಲ್ಲೇ ಇದನ್ನು ಉಲ್ಲೇಖಿಸಲಾಗಿದೆ.ಭರವಸೆ ಈಡೇರಿಕೆ ಜನಪ್ರತಿನಿಧಿಗಳ ಹೊಣೆ

ಬ್ಯಾಡಗಿ: ಜನತೆಗೆ ಕೊಟ್ಟ ಭರವಸೆ ಈಡೇರಿಸುವುದು ಶಾಸಕನಾಗಿ ನನ್ನ ಪ್ರಮುಖ ಜವಾಬ್ದಾರಿ. ಅಂತೆಯೇ ಬಡಮಲ್ಲಿ ಗ್ರಾಮದ ಪಾಂಡುರಂಗ ರುಕ್ಮಿಣಿ ದೇವಸ್ಥಾನ ನಿರ್ಮಿಸಲು ಅಗತ್ಯವಾದ ಅನುದಾನ ನೀಡುವ ಮೂಲಕ ಕೊಟ್ಟ ಮಾತನ್ನು ಈಡೇರಿಸಿದ್ದೇನೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.ತಾಲೂಕಿನ ಬಡಮಲ್ಲಿ ಗ್ರಾಮದ ಪಾಂಡುರಂಗ ರುಕ್ಮಿಣಿ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಮೊದಲ ಹಂತದ 5 ಲಕ್ಷ ಬಿಡುಗಡೆಗೊಳಿಸಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಕಳೆದ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಗ್ರಾಮದ ಪಾಂಡುರಂಗ ರುಕ್ಮಿಣಿ ದೇವಸ್ಥಾನದ ಭಕ್ತರು ಸೇರಿದಂತೆ ಗ್ರಾಮದ ಹಿರಿಯರು ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಅನುದಾನ ನೀಡಲು ಬೇಡಿಕೆಯಿಟ್ಟಿದ್ದು, ಇದೀಗ ಅದನ್ನು ಈಡೇರಿಸಿದ್ದೇನೆ ಎಂದರು. ಹಿಂದಿನ ಅವಧಿಯಲ್ಲಿ ಈಗಾಗಲೇ ಗ್ರಾಮದ ದುರ್ಗಾದೇವಿ ದೇವಸ್ಥಾನಕ್ಕೆ 15 ಲಕ್ಷ ಸಿದ್ದರಾಮೇಶ್ವರ ದೇವಸ್ಥಾನಕ್ಕೆ 10 ಲಕ್ಷ ಅನುದಾನ ಬಿಡುಗಡೆಯಾಗಿದೆ. ಪಾಂಡುರಂಗ ದೇವಸ್ಥಾನಕ್ಕೂ 15 ಲಕ್ಷ ಹೆಚ್ಚುವರಿ ನೀಡುವೆ. ಗ್ರಾಮಸ್ಥರು ಸಹಕಾರದಿಂದ ಜೀವನ ನಡೆಸುವ ಮೂಲಕ ಬೇರೆ ಗ್ರಾಮಕ್ಕೆ ಮಾದರಿಯಾಗಿರಬೇಕು ಎಂದರು.

ತಾಲೂಕಿನ ಮಲೆನಾಡು ಭಾಗದ ಸುಮಾರು 23 ಗ್ರಾಮಗಳಿಗೆ ನೀರಾವರಿ ಯೋಜನೆಗಳು ಸೇರಿದಂತೆ ಮೂಲ ಸೌಲಭ್ಯ ಒದಗಿಸಲಾಗಿದ್ದು, ಹೆಚ್ಚು ಅನುದಾನ ತರುವ ಮೂಲಕ ಹೊಸ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದರು.

ಈ ವೇಳೆ ಪಾಂಡುರಂಗ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಮೇವುಂಡಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಶಿವನಗೌಡ ವೀರನಗೌಡ್ರ, ಬಸನಗೌಡ ಸಣ್ಣಗೌಡ್ರ, ನಾಗರಾಜ ಆನ್ವೇರಿ, ಗದಿಗೆಪ್ಪಗೌಡ ಹೊಂಡದಗೌಡ್ರ, ನಾಗಪ್ಪ ಓಲೇಕಾರ, ಬಸಪ್ಪ ಗೊಂದಿ ಇತರರಿದ್ದರು.