ಫಿಲಿಪೈನ್ಸ್‌ನ ಅಂತಾರಾಷ್ಟ್ರೀಯ ರೈಸ್ ರಿಸರ್ಚ್ ಸೆಂಟರ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡು ರೋಗನಿರೋಧಕ ಭತ್ತದ ತಳಿಗಳನ್ನು ನಮ್ಮಲ್ಲಿ ಬೆಳೆಯಲಾಗುವುದು. ೨೦೦ ತಳಿಗಳನ್ನು ಪರಿಚಯಿಸಲು ನಿರ್ಧರಿಸಲಾಗಿದ್ದು, ಎರಡೇ ವರ್ಷದಲ್ಲಿ ರೈತರಿಗೆ ಹೊಸ ತಳಿಗಳನ್ನು ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ, ಮಂಡ್ಯ

ಐದು ಜಿಲ್ಲೆಗಳನ್ನೊಳಗೊಂಡು ಸ್ಥಾಪಿಸಲಾಗಿರುವ ಕೃಷಿ ವಿಶ್ವವಿದ್ಯಾನಿಲಯದ ಮಹತ್ವ ಮತ್ತು ಅದರ ಉಪಯೋಗ ಈಗ ಜನರಿಗೆ ಅರ್ಥವಾಗುವುದಿಲ್ಲ. ಎರಡು- ಮೂರು ವರ್ಷದ ಬಳಿಕ ಜಿಲ್ಲೆಯ ಜನರಿಗೆ ಅರ್ಥವಾಗಲಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲೂಕಿನ ವಿ.ಸಿ.ಫಾರಂನಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರಥಮ ಬಾರಿಗೆ ಆಯೋಜಿಸಿದ್ದ ಕೃಷಿ ಮೇಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಭಾಗದ ರೈತರನ್ನು ಆರ್ಥಿಕವಾಗಿ ಅಭಿವೃದ್ಧಿ ಮಾಡಲು ಮಂಡ್ಯದ ವಿ.ಸಿ ಫಾರಂ ನಲ್ಲಿ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ಬೆಂಗಳೂರಿನ ಜಿಕೆವಿಕೆಯಲ್ಲಿ ಇತ್ತೀಚೆಗೆ ಕೃಷಿ ಮೇಳ ನಡೆಸಿದಾಗ ದಾಖಲೆಯ ೫೦ ಲಕ್ಷ ಜನರು ಸೇರಿದ್ದರು. ಆದರೆ, ಮಂಡ್ಯ ಕೃಷಿ ವಿಶ್ವವಿದ್ಯಾಲಯದಿಂದ ನಡೆಸಿರುವ ಕೃಷಿಮೇಳ ನಿರೀಕ್ಷಿತ ಪ್ರಮಾಣದಲ್ಲಿ ಜನರನ್ನು ತಲುಪುವುದಕ್ಕೆ ಸಾಧ್ಯವಾಗಿಲ್ಲ ಎಂದೆನಿಸಿದೆ. ಮುಂದಿನ ದಿನಗಳಲ್ಲಿ ಐದೂ ಜಿಲ್ಲೆಗಳ ರೈತರು ಮೇಳದಲ್ಲಿ ಭಾಗವಹಿಸುವಂತೆ ಕಾರ್ಯಯೋಜನೆ ರೂಪಿಸಲಾಗುವುದು ಎಂದು ನುಡಿದರು.

ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ ಮಾಡಲು ಹೊರಟಾಗ ಜಿಕೆವಿಕೆಯನ್ನು ವಿಭಾಗ ಮಾಡುವ ಬಗ್ಗೆ ಗೊಂದಲ ಸೃಷ್ಟಿಯಾಗಿತ್ತು. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲರ ಮನವೊಲಿಸಿ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸುವ ದೃಢ ನಿರ್ಧಾರ ಮಾಡಿದರು. ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ಥಾಪನೆಯಾದ ಮೊದಲ ವರ್ಷದಲ್ಲೇ ಯುಜಿಸಿ ಮಾನ್ಯತೆ ಪಡೆದಿದೆ. ಶಿವಮೊಗ್ಗ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ೨೦೦೮ ರಲ್ಲಿ ಅನುಮತಿ ದೊರೆತಿತ್ತು. ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ೨೦೧೩ ರ ಅವಧಿಯಲ್ಲಿ ಶಿವಮೊಗ್ಗ ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯಕ್ಕೆ ಶಕ್ತಿ ತುಂಬಲಾಯಿತು ಎಂದು ಸ್ಮರಿಸಿದರು.

ಫಿಲಿಪೈನ್ಸ್‌ನ ಅಂತಾರಾಷ್ಟ್ರೀಯ ರೈಸ್ ರಿಸರ್ಚ್ ಸೆಂಟರ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡು ರೋಗನಿರೋಧಕ ಭತ್ತದ ತಳಿಗಳನ್ನು ನಮ್ಮಲ್ಲಿ ಬೆಳೆಯಲಾಗುವುದು. ೨೦೦ ತಳಿಗಳನ್ನು ಪರಿಚಯಿಸಲು ನಿರ್ಧರಿಸಲಾಗಿದ್ದು, ಎರಡೇ ವರ್ಷದಲ್ಲಿ ರೈತರಿಗೆ ಹೊಸ ತಳಿಗಳನ್ನು ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರ ಜೀವನವನ್ನು ಸುಧಾರಿಸುವುದು ಬಹಳ ಮುಖ್ಯ. ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ರೈತರು ಸಮಗ್ರ ಕೃಷಿ ಜೊತೆಗೆ ಉಪ ಉತ್ಪನ್ನ ಮಾಡುವುದು, ತಾವು ಉತ್ಪಾದಿಸಿದ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಿ ಹೆಚ್ಚಿನ ಲಾಭ ಗಳಿಸಬೇಕು ಎಂದು ಸಲಹೆ ನೀಡಿದರು.

ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಅಭಿವೃದ್ಧಿಪಡಿಸಿದ ಐದು ತಳಿಗಳನ್ನು ಮತ್ತು ೯ ತಾಂತ್ರಿಕತೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದರು. ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಕೃಷಿ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.