ಸಾರಾಂಶ
ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಡ್ರಗ್ಸ್ ಬಳಕೆ ಮಾಡಿದ್ದ ಆರೋಪಿಗಳ ವಿಚಾರಣೆ ನಡೆಸಿ ಪಾಲಕರ ಮುಂದೆಯೇ ಚಳಿ ಬಿಡಿಸಿದರು. ಪಾಲಕರಿಗೂ ಮಕ್ಕಳ ಚಲನವಲನದ ಮೇಲೆ ನಿಗಾ ವಹಿಸಲು ಸೂಚಿಸಿದರು.
ಹುಬ್ಬಳ್ಳಿ:
ಹು-ಧಾ ಮಹಾನಗರ ಪೊಲೀಸರಿಂದ ಡ್ರಗ್ಸ್ ವಿರುದ್ಧ 4ನೇ ಹಂತದ ಅಭಿಯಾನ ಮುಂದುವರಿದಿದೆ. ಶನಿವಾರ ವಶಕ್ಕೆ ಪಡೆದ 518 ಶಂಕಿತ ಡ್ರಗ್ಸ್ ಬಳಕೆದಾರರ ಪೈಕಿ 147 ಜನರಲ್ಲಿ ಡ್ರಗ್ಸ್ ಬಳಕೆ ದೃಢವಾಗಿದ್ದು, ಅವರ ವಿರುದ್ಧ 34 ಪ್ರಕರಣ ದಾಖಲಿಸಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ಪೆಡ್ಲರ್ ಮತ್ತು ವ್ಯಸನಿಗಳ ವಿರುದ್ಧ ಕಮಿಷನರೇಟ್‌ನಿಂದ ನಿರಂತರ ಕ್ರಮಕೈಗೊಳ್ಳಲಾಗುತ್ತಿದೆ. ಪ್ರಾರಂಭದಲ್ಲಿ ಡ್ರಗ್ಸ್ ಪೆಡ್ಲರ್, ನಂತರ ಬಳಕೆದಾರರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿತ್ತು. ಅವರು ನೀಡಿದ ಮಾಹಿತಿ ಅನುಸಾರ ತನಿಖೆ ನಡೆಸಿ ಡ್ರಗ್ಸ್ ಮಾರಾಟ ಮತ್ತು ಬಳಕೆಯನ್ನು ತಡೆಗಟ್ಟುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.ಪ್ರಾರಂಭದಲ್ಲಿ ಪತ್ತೆಯಾದ ಶಂಕಿತರದಲ್ಲಿ ಶೇ. 63. 67ರಷ್ಟು ಪಾಸಿಟಿವ್ ಬಂದಿತ್ತು. ನಂತರ 2ನೇ ಹಂತದಲ್ಲಿ ಶೇ. 53.75ರಷ್ಟು, ಮೂರನೇ ಹಂತದಲ್ಲಿ ಶೇ. 43.40ರಷ್ಟು ಪಾಸಿಟಿವ್ ಬಂದಿತ್ತು. ಶನಿವಾರ ಕೈಗೊಂಡ ಕಾರ್ಯಾಚರಣೆ ವೇಳೆ ಬಳಕೆ ಮತ್ತು ಮಾರಾಟ ಕ್ಷೀಣಿಸಿದ್ದು ಶೇ. 28. 38ಕ್ಕೆ ಇಳಿಕೆಯಾಗಿದೆ. ನಿರಂತರ ಕಟ್ಟುನಿಟ್ಟಿನ ಕಾನೂನು ಕ್ರಮದ ಪರಿಣಾಮದಿಂದ ಡ್ರಗ್ಸ್ ಮಾರಾಟ, ಬಳಕೆ ತಹಬದಿಗೆ ಬಂದಿದೆ ಎಂದು ಕಮಿಷನರ್ ತಿಳಿಸಿದರು.
ನಂತರ ಇಲ್ಲಿನ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ನಡೆದ ಡ್ರಗ್ಸ್ ಬಳಕೆದಾರರ ಸಭೆಯಲ್ಲಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಡ್ರಗ್ಸ್ ಬಳಕೆ ಮಾಡಿದ್ದ ಆರೋಪಿಗಳ ವಿಚಾರಣೆ ನಡೆಸಿ ಪಾಲಕರ ಮುಂದೆಯೇ ಚಳಿ ಬಿಡಿಸಿದರು. ಪಾಲಕರಿಗೂ ಮಕ್ಕಳ ಚಲನವಲನದ ಮೇಲೆ ನಿಗಾ ವಹಿಸಲು ಸೂಚಿಸಿದರು. ಹಲವು ಪಾಲಕರು ಮಕ್ಕಳಿಂದ ಆಗುತ್ತಿರುವ ತೊಂದರೆ ಕುರಿತು ಪೊಲೀಸ್ ಆಯುಕ್ತರ ಮುಂದೆ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು. ಈ ವೇಳೆ ಆಯುಕ್ತರು ಡ್ರಗ್ಸ್ ಬಳಕೆ ಮಾಡುವುದರಿಂದ ಕುಟುಂಬದವರ ಮೇಲೆ ಆಗುವ ಅವಮಾನ, ತೊಂದರೆ ಕುರಿತು ಮನವರಿಕೆ ಮಾಡಿದರು.