ಸಾರಾಂಶ
ಗುಂಡ್ಲುಪೇಟೆ ಪ್ರಜಾಸೌಧದಲ್ಲಿ ನಡೆದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಯಲ್ಲಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬಗರ್ ಹುಕುಂ ಆ್ಯಪ್ ಮೂಲಕ ತಾಲೂಕಿನ ೪೦ ಮಂದಿ ರೈತರಿಗೆ ಸರ್ಕಾರಿ ಜಮೀನನ್ನು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಯಲ್ಲಿ ಮಂಜೂರಾತಿಗೆ ಅನುಮೋದನೆ ನೀಡಲಾಗಿದೆ ಎಂದು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷರೂ ಆದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.ಪಟ್ಟಣದ ಪ್ರಜಾಸೌಧದ ಸಭಾ ಭವನದಲ್ಲಿ ಮಂಗಳವಾರ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಜು.೧೧ ರಂದು ನಡೆದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಯಲ್ಲಿ ೧೫ ಮಂದಿ ರೈತರಿಗೆ ಸಾಗುವಳಿಗೆ ಮಂಜೂರಿಗೆ ನೀಡಲಾಗಿತ್ತು ಎಂದರು. ಇಂದಿನ ಸಭೆಯಲ್ಲಿ ೪೦ ಮಂದಿ ರೈತರಿಗೆ ಸಾಗುವಳಿ ಚೀಟಿ ನೀಡಲು ಅನುಮೋದನೆ ನೀಡುವ ಮೂಲಕ ರಾಜ್ಯದಲ್ಲಿ ಅತೀ ಹೆಚ್ಚು ಸಾಗುವಳಿಗೆ ಅನುಮೋದನೆ ನೀಡಿದ ಹೆಗ್ಗಳಿಕೆಗೆ ಗುಂಡ್ಲುಪೇಟೆ ಪಾತ್ರವಾಗಿದೆ ಎಂದರು.
ರಾಜ್ಯದ ೧೭೦ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗಳಲ್ಲಿ ಗುಂಡ್ಲುಪೇಟೆ ತಾಲೂಕು ಒಟ್ಟು ೫೫ ಮಂದಿ ರೈತರಿಗೆ ಸಾಗುವಳಿಗೆ ಮಂಜೂರಾತಿ ನೀಡಲಾಗಿದ್ದು, ಜಮೀನು ದುರಸ್ಥಿಯಾದ ಬಳಿಕ ಸಾಗುವಳಿ ಚೀಟಿ ಕೊಟ್ಟು, ರಿಜಿಸ್ಟರ್ ಮಾಡಲು ಕನಿಷ್ಟ ೨ ತಿಂಗಳು ಬೇಕಾಗುತ್ತದೆ ಎಂದರು. ಸಭೆಯಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯರಾದ ಪಿ.ಮಹದೇವಪ್ಪ, ಹಂಗಳ ನಾಗರಾಜು, ಕಲಾವತಿ ಮಹೇಶ್, ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಕಾರ್ಯದರ್ಶಿಗಳೂ ಆದ ತಹಸೀಲ್ದಾರ್ ಟಿ.ರಮೇಶ್ ಬಾಬು, ಸೇರಿದಂತೆ ಕಂದಾಯ ನಿರೀಕ್ಷಕರು,ಗ್ರಾಮ ಆಡಳಿತ ಅಧಿಕಾರಿಗಳು ಸೇರಿದಂತೆ ಹಲವರಿದ್ದರು.ಸಾಗುವಳಿ ಮಂಜೂರಾತೀಲಿ ಗುಂಡ್ಲುಪೇಟೆ ಪ್ರಥಮ!ಬಗರ್ ಹುಕುಂ ಆ್ಯಪ್ ಮೂಲಕ ರೈತರಿಗೆ ಸಾಗುವಳಿ ಮಂಜೂರಾತಿಯಲ್ಲಿ ಗುಂಡ್ಲುಪೇಟೆ ಪ್ರಥಮ ಸ್ಥಾನದಲ್ಲಿದೆ ಎಂದು ತಹಸೀಲ್ದಾರ್ ಟಿ.ರಮೇಶ್ ಬಾಬು ಹೇಳಿದರು. ಕನ್ನಡಪ್ರಭದೊಂದಿಗೆ ಮಾತನಾಡಿ, ಕಳೆದ ಜುಲೈ ತಿಂಗಳಲ್ಲಿ ನಡೆದ ರಾಜ್ಯದ ಮೊದಲ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಯಲ್ಲಿ ಪುತ್ತೂರು ತಾಲೂಕು ಮೊದಲ ಸ್ಥಾನದಲ್ಲಿತ್ತು. ಇಂದಿನ ಸಭೆಯಲ್ಲಿ ೪೦ ಸಾಗುವಳಿ ಮಂಜೂರಾತಿ ನೀಡುವ ಮೂಲಕ ಜುಲೈ ತಿಂಗಳ ೧೫ ಸಾಗುವಳಿ ಸೇರಿದರೆ ೫೫ ಸಾಗುವಳಿ ಮಂಜೂರಾದ ತಾಲೂಕಾಗಿ ಗುಂಡ್ಲುಪೇಟೆ ಬರಲಿದೆ ಎಂದರು.ಬಗರ್ ಹುಕುಂ ಸಾಗುವಳಿ ಮಂಜೂರಾತಿಯಲ್ಲಿ ಗುಂಡ್ಲುಪೇಟೆ ತಹಸೀಲ್ದಾರ್ ಟಿ.ರಮೇಶ್ ಬಾಬು ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಮೆಚ್ಚುಗೆ ಸೂಚಿಸಿದ್ದಾರೆ. ಈ ತಿಂಗಳು ಬೆಂಗಳೂರಲ್ಲಿ ನಡೆದ ತಹಸೀಲ್ದಾರ್, ಉಪ ವಿಭಾಗಾಧಿಕಾರಿಗಳ ವಿಡಿಯೋ ಸಂವಾದದಲ್ಲಿ ಗುಂಡ್ಲುಪೇಟೆಯಲ್ಲಿ ಫಲಾನುಭವಿಗಳ ಗುರುತಿಸುವಲ್ಲಿ ಗುಂಡ್ಲುಪೇಟೆ ತಹಸೀಲ್ದಾರ್ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.