ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಉತ್ತಮವಾದ ಶಿಕ್ಷಣ ನೀಡುತ್ತಾ ಪಟ್ಟಣದಲ್ಲಿರುವ ವಿದ್ಯಾರ್ಥಿಗಳನ್ನು ಮನಸ್ಸನ್ನು ಗ್ರಾಮಾಂತರ ಪ್ರದೇಶದ ಈ ಸರ್ಕಾರಿ ಶಾಲೆಗೆ ಬರುವಂತೆ ಆಕರ್ಷಿಸುವಂತಹ ಮಟ್ಟಕ್ಕೆ ಅಭಿವೃದ್ಧಿ ಕಂಡ ಶಾಲೆಯಾಗಿ ತಾಲೂಕಿನ ಆಗರಬನ್ನಿಹಟ್ಟಿ ಸರ್ಕಾರಿ ಉರ್ದು ಶಾಲೆ ಗುರುತಿಸಿಕೊಂಡಿದ್ದು, ಅಚ್ಚುಕಟ್ಟುತನದಿಂದ ರಾಜ್ಯದ ಗಮನ ಸೆಳೆಯುತ್ತಿದೆ.
- ಮುಖ್ಯಶಿಕ್ಷಕ ಸೈಯ್ಯಾದ್ ಇಲ್ಯಾಸ್ ಅಹಮದ್, ಸಹಶಿಕ್ಷಕರು, ಎಸ್‌ಡಿಎಂಸಿ ಶ್ರಮಕ್ಕೆ ಈಗಾಗಲೇ ಹಲವಾರು ಪ್ರಶಸ್ತಿಗಳಿಗೆ ಭಾಜನ
- - -ಬಾ.ರಾ.ಮಹೇಶ್, ಚನ್ನಗಿರಿ
ಕನ್ನಡಪ್ರಭ ವಾರ್ತೆ ಚನ್ನಗಿರಿವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಉತ್ತಮವಾದ ಶಿಕ್ಷಣ ನೀಡುತ್ತಾ ಪಟ್ಟಣದಲ್ಲಿರುವ ವಿದ್ಯಾರ್ಥಿಗಳನ್ನು ಮನಸ್ಸನ್ನು ಗ್ರಾಮಾಂತರ ಪ್ರದೇಶದ ಈ ಸರ್ಕಾರಿ ಶಾಲೆಗೆ ಬರುವಂತೆ ಆಕರ್ಷಿಸುವಂತಹ ಮಟ್ಟಕ್ಕೆ ಅಭಿವೃದ್ಧಿ ಕಂಡ ಶಾಲೆಯಾಗಿ ತಾಲೂಕಿನ ಆಗರಬನ್ನಿಹಟ್ಟಿ ಸರ್ಕಾರಿ ಉರ್ದು ಶಾಲೆ ಗುರುತಿಸಿಕೊಂಡಿದ್ದು, ಅಚ್ಚುಕಟ್ಟುತನದಿಂದ ರಾಜ್ಯದ ಗಮನ ಸೆಳೆಯುತ್ತಿದೆ.
ಆಗರಬನ್ನಿಹಟ್ಟಿಯಲ್ಲಿ 1 ರಿಂದ 7ನೇ ತರಗತಿಯವರೆಗೆ ಕಲಿಸುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಇದಾಗಿದೆ. ಈ ಶಾಲೆಯಲ್ಲಿ 135 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳ ಕಲಿಕೆಗಾಗಿ 8 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಶಾಲೆಯಲ್ಲಿ ಮೌಲ್ಯಾಧಾರಿತವಾದ ಶಿಕ್ಷಣ, ಶಿಸ್ತು, ಸಮಯಪ್ರಜ್ಞೆ, ಅಚ್ಚುಕಟ್ಟುತನ, ಹಸಿರು ಮರಗಳಿಂದ ಕಂಗೊಳಿಸುವ ಉತ್ತಮ ಪರಿಸರ ನಿರ್ಮಾಣ ಹೀಗೆ ಹಲವಾರು ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.ವಿದ್ಯಾರ್ಥಿಗಳ ಮನಸ್ಸನ್ನು ಮೊದಲ ನೋಟದಲ್ಲೇ ಆಕರ್ಷಿಸುವಂತೆ ಮುಖ್ಯ ಶಿಕ್ಷಕ ಸೈಯ್ಯಾದ್ ಇಲ್ಯಾಸ್ ಅಹಮದ್ ಹಾಗೂ ಶಿಕ್ಷಕರ ಶ್ರಮದಿಂದ ಈ ಶಾಲೆ ವರ್ಷದಿಂದ ವರ್ಷಕ್ಕೆ ತನ್ನ ಸೌಂದರ್ಯ ವೃದ್ಧಿಸಿಕೊಳ್ಳುತ್ತ, ಶಿಕ್ಷಣ ಸಾಧನೆಯಲ್ಲಿ ಮುನ್ನಡೆದಿದೆ. ಆ ಮೂಲಕ ಪ್ರಶಸ್ತಿಗಳನ್ನು ಪಡೆಯುತ್ತಿರುವುದಕ್ಕೆ ಜೀವಂತ ಸಾಕ್ಷಿಯಾಗಿದೆ. ವಿದ್ಯಾಭ್ಯಾಸಕ್ಕೆ ಅಗತ್ಯವೆನಿಸಿದ ಎಲ್ಲ ರೀತಿಯ ಸೌಲಭ್ಯಗಳನ್ನು ಹೊಂದಿರುವ ಈ ಶಾಲೆಗೆ 2025-26ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಎಸ್.ಡಿ.ಎಂ.ಸಿ. ಪ್ರಶಸ್ತಿ ದೊರೆತಿದೆ. ₹75 ಸಾವಿರ ನಗದು ಹಣ ಮತ್ತು ಪ್ರಶಸ್ತಿ ಪತ್ರವನ್ನು ಶಾಲೆ ಪಡೆದುಕೊಂಡಿದೆ.ಶಾಲೆಯ ಇತರ ಸಾಧನೆಗಳು:
1994ರಲ್ಲಿ ಆಗರಬನ್ನಿಹಟ್ಟಿ ಉರ್ದು ಶಾಲೆಗೆ ಮುಖ್ಯ ಶಿಕ್ಷಕರಾಗಿ ಬಂದ ಸೈಯ್ಯಾದ್ ಇಲ್ಯಾಸ್ ಅಹಮದ್ ಗ್ರಾಮದ ಜನರಿಂದ ಹಿಡಿದು ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದಿಂದ ಈ ಸರ್ಕಾರಿ ಶಾಲೆಯನ್ನು ಮಾದರಿಯಾಗಿ ರೂಪಿಸಿದ್ದಾರೆ. 32 ವರ್ಷಗಳಿಂದ ಶಿಕ್ಷಣ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪರಿಶ್ರಮದಿಂದ ಶಾಲೆಗೆ 2010ರಲ್ಲಿ ಉತ್ತಮ ಸಾಧನ ಕಲಿಕಾ ಪ್ರಶಸ್ತಿ ದೊರೆಯಿತು. ಅಂದಿನಿಂದ ಆರಂಭವಾದ ಶಾಲೆಯ ಸಾಧನೆಯು ಜಿಲ್ಲಾಮಟ್ಟದಿಂದ ಹಿಡಿದು ರಾಜ್ಯಮಟ್ಟದವರೆಗೆ ಒಂದೊಂದೇ ಪ್ರಶಸ್ತಿಗಳ ಗಳಿಸುತ್ತ ಸಾಗಿತು. 2012ರಲ್ಲಿ ರಾಜ್ಯ ನೈರ್ಮಲ್ಯ ಪ್ರಶಸ್ತಿ, 2013ರಲ್ಲಿ ಉತ್ತಮ ಅಕ್ಷರ ದಾಸೋಹ ಪ್ರಶಸ್ತಿ, 2015ರಲ್ಲಿ ಪರಿಸರ ಮಿತ್ರ ಜಿಲ್ಲಾಮಟ್ಟದ ಪ್ರಶಸ್ತಿ, ಪರಿಸರಸ್ನೇಹ ಪ್ರಶಸ್ತಿ, ಹಸಿರು ಶಾಲಾ ಪ್ರಶಸ್ತಿ, ಉತ್ತಮ ಅಭ್ಯಾಸ ಚಟುವಟಿಕೆ ಪ್ರಶಸ್ತಿ, ಉತ್ತಮ ಶಾಲಾ ಪ್ರಶಸ್ತಿ, ಸ್ವಚ್ಛ ವಿದ್ಯಾಲಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಇವುಗಳ ಸಾಲಿಗೆ 2026ರ ಪ್ರಸಕ್ತ ವರ್ಷದಲ್ಲಿ ಉತ್ತಮ ಎಸ್‌ಡಿಎಂಸಿ ಪ್ರಶಸ್ತಿ ಲಭಿಸಿರುವುದು ಈ ಶಾಲೆ ಶಿಕ್ಷಕರು ಹೊಂದಿರುವ ಶಿಕ್ಷಣ ಕಾಳಜಿಗೆ ಸಾಕ್ಷಿ ಎಂದರೆ ತಪ್ಪಾಗದು.ಮುಖ್ಯ ಶಿಕ್ಷಕ ಸೈಯಾದ್ ಇಲ್ಯಾಸ್ ಅಹಮದ್ ಅವರ ಸೇವೆ ಗುರುತಿಸಿ ಶಿಕ್ಷಣ ಇಲಾಖೆ 2001ನೇ ಇಸವಿಯಿಂದ ಇಲ್ಲಿಯವರೆಗೆ ಜನಮೆಚ್ಚಿದ ಶಿಕ್ಷಕ, ಗುರುಶ್ರೀ ಪ್ರಶಸ್ತಿ, ಜಿಲ್ಲಾ ಅತ್ಯುತ್ತಮ ಶಿಕ್ಷಕ, ಕರ್ನಾಟಕ ವಿಕಾಸರತ್ನ, ಕರ್ನಾಟಕ ಉರ್ದು ಅಕಾಡೆಮಿ ಪ್ರಶಸ್ತಿ, ಜಿಲ್ಲಾ ಹಸಿರುಪ್ರೇಮ ಶಿಕ್ಷಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.
18 ಗುಂಟೆ ಪ್ರದೇಶದಲ್ಲಿರುವ ಈ ಉರ್ದು ಶಾಲೆ 8 ಕೊಠಡಿಗಳನ್ನು ಒಳಗೊಂಡಿದೆ. ಇನ್ನು 2 ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿಪೂಜೆ ಸಹ ನಡೆದಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಶಾಲೆಗೆ ಸೇರಿದ ಸುತ್ತಲಿನ ಜಾಗದಲ್ಲಿ ತೆಂಗು, ಅಡಕೆ, ಅಶೋಕ ಟ್ರೀ, ಪೇರಲಾ, ಸಪೋಟ, ಮಾವು, ಬೇವು, ಹಲಸು, ನುಗ್ಗೆ, ಕರಿಬೇವು, ಬಿದಿರು ಮತ್ತು ವಿವಿಧ ಬಗೆಯ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಆ ಮೂಲಕ ವಿದ್ಯಾರ್ಥಿಗಳಿಗೆ ಹಸಿರು ಪರಿಸರದ ಮಧ್ಯೆ ಕೃಷಿ-ಪರಿಸರ ಪಾಠವೂ ಇಲ್ಲಿ ದೊರೆಯುತ್ತಿದೆ. ಖಾಸಗಿ ಶಾಲೆಗಳನ್ನೂ ಮೀರಿಸುವಂತಹ ಬೌದ್ದಿಕ ಶಿಕ್ಷಣ, ಶಿಕ್ಷಣ ಇಲಾಖೆ ನಡೆಸುವಂತಹ ಎಲ್ಲ ಸ್ಪರ್ಧೆಗಳಲ್ಲಿ ಇಲ್ಲಿಯ ಮಕ್ಕಳು ಬಹುಮಾನಗಳನ್ನು ಪಡೆದು ಪ್ರತಿಭಾವಂತರಾಗಿ ಮುನ್ನಡೆಯುತ್ತಿದ್ದಾರೆ.ಒಂದು ಶಾಲೆ ಅಭಿವೃದ್ಧಿಯ ಪಥದತ್ತ ಮುನ್ನಡೆಯಲು ಗ್ರಾಮದ ಜನರ ಮತ್ತು ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳ ಸಹಕಾರಗಳ ಜೊತೆಗೆ ಶಾಲೆ ಮುಖ್ಯ ಶಿಕ್ಷಕ ಮತ್ತು ಸಹ ಶಿಕ್ಷಕರ ಕಾಳಜಿಯನ್ನು ಈ ಶಾಲೆಯ ಪ್ರಗತಿಯಲ್ಲಿ ಕಾಣಬಹುದು. ಶಾಲೆಯಲ್ಲಿ ನೀರಿನ ಕೊರತೆ ನೀಗಿಸಲು ಎಸ್.ಡಿ.ಎಂ.ಸಿ. ಅಧ್ಯಕ್ಷ ಮಹಬೂಬ್ ಖಾನ್ ಅವರು ₹50 ಸಾವಿರ ನೀಡಿದ್ದಾರೆ. ಈ ಹಣದ ಜೊತೆಗೆ ಸಮಿತಿ ಸದಸ್ಯರು ಶಿಕ್ಷಕರು ಸೇರಿ ಕೊಳವೆಬಾವಿ ಕೊರೆಸಿ, ಶಾಲೆಗೆ ನೀರಿನ ಕೊರತೆ ನೀಗಿಸಿರುವುದು ಗಮನೀಯ.
- - -(ಬಾಕ್ಸ್)
ಗ್ರಾಮೀಣ ಪ್ರದೇಶದಲ್ಲಿರುವ ಆಗರಬನ್ನಿಹಟ್ಟಿ ಸರ್ಕಾರಿ ಉರ್ದು ಶಾಲೆಗೆ 80 ವಿದ್ಯಾರ್ಥಿಗಳು ಚನ್ನಗಿರಿ ಪಟ್ಟಣದಿಂದ ಬರುತ್ತಿರುವುದು ಈ ಶಾಲೆಯ ಗುಣಮಟ್ಟದ ಶಿಕ್ಷಣ, ಶಿಸ್ತು ಮತ್ತು ಶೈಕ್ಷಣಿಕ ಪ್ರಗತಿಗೆ ಸಾಕ್ಷಿ. ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರ ಪರಿಶ್ರಮದಿಂದ ಈ ಶಾಲೆ ಪ್ರತಿವರ್ಷ ಒಂದಿಲ್ಲೊಂದು ಸಾಧನೆ ಮೆರೆದು ಪ್ರಶಸ್ತಿ ಪಡೆಯುತ್ತಿದೆ. ಸರ್ಕಾರಿ ಶಾಲೆಯಾಗಿದ್ದರೂ ಗುಣಮಟ್ಟದ ಶಿಕ್ಷಣದಿಂದಾಗಿ ಪೋಷಕರು, ವಿದ್ಯಾರ್ಥಿಗಳ ಮನಗೆದ್ದಿದೆ.
- ಮಹಬೂಬ್ ಖಾನ್, ಅಧ್ಯಕ್ಷ, ಎಸ್.ಡಿ.ಎಂ.ಸಿ.- - -
-17ಕೆಸಿಎನ್ಜಿ1: ಆಗರಬನ್ನಿಹಟ್ಟಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ.-17ಕೆಸಿಎನ್ಜಿ2: ಶಾಲಾ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು.
-17ಕೆಸಿಎನ್ಜಿ3: ಸೈಯ್ಯಾದ್ ಇಲ್ಯಾಸ್ ಅಹಮದ್, ಮುಖ್ಯ ಶಿಕ್ಷಕ.-17ಕೆಸಿಎನ್ಜಿ4: ಹಸಿರಿನಿಂದ ಕೂಡಿದ ಸರ್ಕಾರಿ ಉರ್ದು ಶಾಲೆ ನೋಟ.