ನ್ಯಾಮತಿ ಪಟ್ಟಣದ ವೇದ ಗ್ಯಾಸ್ ಏಜೆನ್ಸಿಯವರು ಗ್ರಾಹಕರಿಗೆ ಅಸರ್ಮಪಕ ಅಡುಗೆ ಅನಿಲ ಸಿಲಿಂಡರ್ ವಿತರಣೆ ಮಾಡುತ್ತಿದ್ದಾರೆಂದು, ಸಮರ್ಪಕವಾಗಿ ಅಡುಗೆ ಅನಿಲ ವಿತರಣೆ ಮಾಡದೇ ಪದೇಪದೇ ಅಲೆದಾಡಿಸುತ್ತಿದ್ದಾರೆಂದು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮಹಿಳೆಯರು, ವೃದ್ಧರು, ಅನಾರೋಗ್ಯಪೀಡಿತರು, ವಿಧವೆಯರು, ಅಂಗವಿಕಲರು, ರೈತರು, ಕೂಲಿ ಕಾರ್ಮಿಕರು ಆಹಾರ ಮತ್ತು ನಾಗರಿಕ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆ ಗ್ಯಾಸ್ ಏಜೆನ್ಸಿ ಮಾಲೀಕರು ಗ್ರಾಹಕರಿಗೆ ಸಮರ್ಪಕ ಅಡುಗೆ ಅನಿಲ ಸಿಲಿಂಡರ್ ವಿತರಿಸಬೇಕು. ಇಲ್ಲದಿದ್ದಲ್ಲಿ ಗ್ಯಾಸ್ ಏಜೆನ್ಸಿಯನ್ನೇ ರದ್ದು ಮಾಡಲಾಗುವುದು ಎಂದು ಶಾಸಕ ಡಿ.ಜಿ.ಶಾಂತನಗೌಡ ಎಚ್ಚರಿಕೆ ನೀಡಿದ್ದಾರೆ.
- ನ್ಯಾಮತಿ ತಾಲೂಕು ಕಚೇರಿಯಲ್ಲಿ ಜಿಲ್ಲಾ ಆಹಾರ ಇಲಾಖೆ, ಗ್ಯಾಸ್ ಏಜೆನ್ಸಿ ಮಾಲೀರು- ಗ್ರಾಹಕರ ಸಭೆ
- - -ಕನ್ನಡಪ್ರಭ ವಾರ್ತೆ ನ್ಯಾಮತಿ
ಪಟ್ಟಣದಲ್ಲಿರುವ ವೇದ ಗ್ಯಾಸ್ ಏಜೆನ್ಸಿಯವರು ಗ್ರಾಹಕರಿಗೆ ಅಸರ್ಮಪಕ ಅಡುಗೆ ಅನಿಲ ಸಿಲಿಂಡರ್ ವಿತರಣೆ ಮಾಡುತ್ತಿದ್ದಾರೆಂದು, ಸಮರ್ಪಕವಾಗಿ ಅಡುಗೆ ಅನಿಲ ವಿತರಣೆ ಮಾಡದೇ ಪದೇಪದೇ ಅಲೆದಾಡಿಸುತ್ತಿದ್ದಾರೆಂದು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮಹಿಳೆಯರು, ವೃದ್ಧರು, ಅನಾರೋಗ್ಯಪೀಡಿತರು, ವಿಧವೆಯರು, ಅಂಗವಿಕಲರು, ರೈತರು, ಕೂಲಿ ಕಾರ್ಮಿಕರು ಆಹಾರ ಮತ್ತು ನಾಗರಿಕ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆ ಗ್ಯಾಸ್ ಏಜೆನ್ಸಿ ಮಾಲೀಕರು ಗ್ರಾಹಕರಿಗೆ ಸಮರ್ಪಕ ಅಡುಗೆ ಅನಿಲ ಸಿಲಿಂಡರ್ ವಿತರಿಸಬೇಕು. ಇಲ್ಲದಿದ್ದಲ್ಲಿ ಗ್ಯಾಸ್ ಏಜೆನ್ಸಿಯನ್ನೇ ರದ್ದು ಮಾಡಲಾಗುವುದು ಎಂದು ಶಾಸಕ ಡಿ.ಜಿ.ಶಾಂತನಗೌಡ ಎಚ್ಚರಿಕೆ ನೀಡಿದ್ದಾರೆ.ಪಟ್ಟಣದ ತಾಲೂಕು ಕಚೇರಿಯಲ್ಲಿ ಗುರುವಾರ ಶಾಸಕ ಡಿ.ಜಿ.ಶಾಂತನಗೌಡ ಸಮ್ಮುಖ ಜಿಲ್ಲಾ ಆಹಾರ ಮತ್ತು ನಾಗರಿಕ ಇಲಾಖೆಯ ಅಧಿಕಾರಿಗಳು, ಗ್ಯಾಸ್ ಏಜೆನ್ಸಿ ಮಾಲೀಕ ಮತ್ತು ಸಾರ್ವಜನಿಕರು ಸಭೆ ಸೇರಿ ಸಾರ್ವಜನಿಕರ ಅಹವಾಲನ್ನು ಪರಿಶೀಲಿಸಿ ಅವರು ಮಾತನಾಡಿದರು.
ವೇದ ಗ್ಯಾಸ್ ಏಜೆನ್ಸಿಯವರು ಹಲವಾರು ತಿಂಗಳುಗಳಿಂದ ಅಡುಗೆ ಅನಿಲ ಸಿಲಿಂಡರ್ ಸರಿಯಾಗಿ ವಿತರಿಸುತ್ತಿಲ್ಲ. ಗ್ರಾಹಕರು ನೋಂದಣಿ ಮಾಡಿದರೂ ಸಿಲಿಂಡರ್ ಸಿಗುತ್ತಿಲ್ಲ. ಗ್ಯಾಸ್ ಗೋದಾಮಿಗೂ, ಏಜೆನ್ಸಿ ಕಚೇರಿಗೂ ಅಲೆದಾಡುವುದೇ ನಿತ್ಯ ಕಾಯಕ ಎಂಬಂತಾಗಿದೆ. ಪದೇಪದೇ ಗ್ರಾಹಕರಿಗೂ, ಏಜೆನ್ಸಿ ಮಾಲೀಕರಿಗೂ ವಾಕ್ ಸಮರ ನಡೆಯುತ್ತದೆ. ಗ್ರಾಹಕರ ಮನೆ ಬಾಗಿಲಿಗೆ ಅಡುಗೆ ಅನಿಲ ವಿತರಣೆ ಮಾಡಬೇಕು ಎಂಬ ನಿಯಮವಿದ್ದರೂ ಅದು ಪಾಲನೆಯಾಗುತ್ತಿಲ್ಲ. ಗ್ಯಾಸ್ ಅವಶ್ಯಕತೆ ಇರುವ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಹಕರು ಪಟ್ಟಣದಿಂದ 2 ಕಿ.ಮೀ. ದೂರವಿರುವ ಗೋದಾಮಿಗೆ ಹೋಗಬೇಕಾಗಿದೆ. ಅಲ್ಲಿಯೂ ಸಿಗದೇ ಪರದಾಡುವಂತಾಗಿದೆ. 1 ತುಂಬಿದ ಸಿಲಿಂಡರ್ ಪಡೆಯಬೇಕಾದರೆ ನಿಗದಿತ ಬೆಲೆಗಿಂತ ಹೆಚ್ಚುವರಿ ಹಣ ಕೊಡಬೇಕಾಗುತ್ತದೆ. ಆ ಸಿಲಿಂಡರ್ ತೆಗೆದುಕೊಂಡು ಹೋಗಲು ಮತ್ತೆ ಹೆಚ್ಚುವರಿ ಹಣವನ್ನು ನೀಡಿ ವಾಹನ, ಆಟೋ ಮಾಡಿಕೊಂಡು ₹200 ವ್ಯಯಮಾಡಬೇಕಾಗುತ್ತದೆ. ಇದು ನಮಗೆ ಹೊರೆಯಾಗುತ್ತದೆ ಎಂದು ಸಾರ್ವಜನಿಕರು ದೂರಿದರು.ಜಿಲ್ಲಾ ಆಹಾರ ಮತ್ತು ನಾಗರಿಕ ಇಲಾಖೆ ಜಂಟಿ ನಿರ್ದೇಶಕ ಮಾತನಾಡಿ, ಪಟ್ಟಣದ ವೇದ ಗ್ಯಾಸ್ ಏಜೆನ್ಸಿ ಬಗ್ಗೆ ಅನೇಕ ದೂರುಗಳು ಬಂದಿವೆ. ಶಾಸಕರ ಸಮ್ಮುಖ ಚರ್ಚಿಸುತ್ತಿದ್ದಾಗ ಗ್ಯಾಸ್ ಏಜೆನ್ಸಿಯ ಮಾಲೀಕರು, ಸಮರ್ಪಕ ಗ್ಯಾಸ್ ಸಿಲಿಂಡರ್ ವಿತರಣೆ ಮಾಡಲು ಇನ್ನೂ 1 ತಿಂಗಳ ಕಾಲಾವಕಾಶ ಕೋರಿದ್ದಾರೆ ಎಂದು ಗ್ರಾಹಕರಿಗೆ ತಿಳಿಸಿದರು. ಆಗ ಗ್ರಾಹಕರು ಇದಕ್ಕೆ ಒಪ್ಪದೇ ಗ್ಯಾಸ್ ಏಜೆನ್ಸಿಯವರು ಪದೇಪದೇ ಇದೇ ಉತ್ತರ ನೀಡುತ್ತಿದ್ದಾರೆ. ಸಕಾಲಕ್ಕೆ ಗ್ಯಾಸ್ ವಿತರಣೆ ಮಾಡಲು ಬೇರೆಯವರನ್ನು ನೇಮಿಸಿ ಎಂದು ಆಗ್ರಹಿಸಿದರು.
ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಗ್ಯಾಸ್ ಏಜೆನ್ಸಿಯ ಮಾಲೀಕ ಹಾಗೂ ಜಿಲ್ಲಾ ಆಹಾರ ಮತ್ತು ನಾಗರಿಕ ಇಲಾಖೆ ನಿರ್ದೇಶಕರ ಮತ್ತು ತಾಲೂಕು ಆಡಳಿತದ ಸಮಕ್ಷಮದಲ್ಲಿ ಗ್ಯಾಸ್ ಏಜೆನ್ಸಿಯವರಿಂದ ಗ್ರಾಹಕರಿಗೆ ಆಗುತ್ತಿರುವ ತೊಂದರೆ ಮನಗಂಡು ಅಡುಗೆ ಅನಿಲ ಸಿಲಿಂಡರ್ ವಿತರಣೆ ಸಮರ್ಪಕವಾಗಿ ವಿತರಣೆ ಮಾಡುವುದಲ್ಲದೇ ಗ್ರಾಹಕರ ಮನೆ ಮನೆಗೆ ನಿಗದಿತ ಸಮಯಕ್ಕೆ ವಿತರಣೆ ಮಾಡಬೇಕು, ಗ್ರಾಹಕರಿಗೆ ಅನಾನುಕೂಲ ಆಗದಂತೆ ಅಡುಗೆ ಅನಿಲ ಪೂರೈಕೆ ಮಾಡಬೇಕು, ಹೆಚ್ಚುವರಿ ಹಣ ತೆಗೆದುಕೊಳ್ಳಬಾರದು, ಅಡುಗೆ ಅನಿಲ ವಿತರಣೆ ನಿಯಮ ಪಾಲಿಸಬೇಕು. ಇಲ್ಲದಿದ್ದರೆ ಏಜೆನ್ಸಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವುದಲ್ಲದೇ ಏಜೆನ್ಸಿಯನ್ನೇ ರದ್ದುಗೊಳಿಸಬೇಕಾಗುತ್ತದೆ ಎಂದು ಮಾಲೀಕನಿಗೆ ಎಚ್ಚರಿಕೆ ನೀಡಿದರು.ಜಿಲ್ಲಾ ಆಹಾರ ಮತ್ತು ನಾಗರಿಕ ಇಲಾಖೆಯ ಜಂಟಿ ನಿರ್ದೇಶಕ ಮಧುಸೂದನ್, ಸಹಾಯಕ ನಿರ್ದೇಶಕ ಸರ್ವಜ್ಞಮೂರ್ತಿ, ಆಹಾರ ಶಿರಸ್ತೇದಾರ್ ಸಂಜಯ್ ಬಾಗೇವಾಡಿ, ನ್ಯಾಮತಿ ತಹಸೀಲ್ದಾರ್ ಎಚ್.ಬಿ.ಗೋವಿಂದಪ್ಪ, ನ್ಯಾಮತಿ ತಾಲೂಕು ಕಚೇರಿ ಆಹಾರ ಶಿರಸ್ತೇದಾರ್ ಎಚ್.ಕೆ.ಸಂತೋಷ್, ಅಡುಗೆ ಅನಿಲ ಸಿಲಿಂಡರ್ ಗ್ರಾಹಕರು ಮತ್ತಿತರರಿದ್ದರು.
- - --ಚಿತ್ರ:
ನ್ಯಾಮತಿ ಪಟ್ಟಣದ ತಾಲೂಕು ಕಚೇರಿಯಲ್ಲಿ ಗುರುವಾರ ಜಿಲ್ಲಾ ಆಹಾರ ಮತ್ತು ನಾಗರಿಕ ಇಲಾಕೆಯ ಅಧಿಕಾರಿಗಳು, ಗ್ಯಾಸ್ ಏಜೆನ್ಸಿ ಮಾಲೀಕ ಮತ್ತು ಸಾರ್ವಜನಿಕರ ಸಭೆಯಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಅಸಮರ್ಪಕ ಅಡುಗೆ ಅನಿಲ ಸಿಲಿಂಡರ್ ವಿತರಣೆಯ ದೂರುಗಳನ್ನು ಪರಿಶೀಲಿಸಿದರು.