ಗಜೇಂದ್ರಗಡ ತಹಸೀಲ್ದಾರ್‌ ಕಚೇರಿಯಲ್ಲಿ ಏಜೆಂಟರ ಕಾರುಬಾರು!

| Published : Feb 09 2024, 01:50 AM IST

ಗಜೇಂದ್ರಗಡ ತಹಸೀಲ್ದಾರ್‌ ಕಚೇರಿಯಲ್ಲಿ ಏಜೆಂಟರ ಕಾರುಬಾರು!
Share this Article
  • FB
  • TW
  • Linkdin
  • Email

ಸಾರಾಂಶ

ಗಜೇಂದ್ರಗಡ ಪಟ್ಟಣವು ತಾಲೂಕು ಕೇಂದ್ರವಾದ ಬಳಿಕ ಅಧಿಕಾರಿಗಳಿಂದ ಜನತೆಯ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಪರಿಹಾರ ಸಿಗಲಿದೆ ಎಂಬ ಭರವಸೆ ಕಾಣಲಾರಂಭಿಸಿತ್ತು. ಆದರೆ ಈಗ ತಹಸೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿಗಳಿಗಿಂತ ಹೆಚ್ಚಾಗಿ ಏಜೆಂಟರ ಉಪಟಳ ಜನತೆಯ ತಲೆನೋವಾಗಿದೆ.

ಎಸ್.ಎಂ. ಸೈಯದ್

ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ಪಟ್ಟಣವು ತಾಲೂಕು ಕೇಂದ್ರವಾದ ಬಳಿಕ ಅಧಿಕಾರಿಗಳಿಂದ ಜನತೆಯ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಪರಿಹಾರ ಸಿಗಲಿದೆ ಎಂಬ ಭರವಸೆ ಕಾಣಲಾರಂಭಿಸಿತ್ತು. ಆದರೆ ಈಗ ತಹಸೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿಗಳಿಗಿಂತ ಹೆಚ್ಚಾಗಿ ಏಜೆಂಟರ ಉಪಟಳ ಜನತೆಯ ತಲೆನೋವಾಗಿದೆ.

ಪಟ್ಟಣವು ತಾಲೂಕು ಕೇಂದ್ರವಾಗಿ ೫ ವರ್ಷಗಳು ಗತಿಸಿದರೂ ಸಹ ಅಗತ್ಯ ಕಚೇರಿಗಳು ಪಟ್ಟಣದಲ್ಲಿ ಇನ್ನೂ ಕಾರ್ಯಾರಂಭವಾಗಿಲ್ಲ. ಆದರೆ ಆರಂಭವಾಗಿರುವ ಬೆರಳೆಣಿಕೆಯ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿಗಳಿಗಿಂತ ಹೆಚ್ಚಾಗಿ ಏಜೆಂಟರದೇ ಓಡಾಟ. ಹೀಗಾಗಿ ಸಮಸ್ಯೆ ಹೊತ್ತು ಬರುವ ಜನರು ಸಿಬ್ಬಂದಿಗಳನ್ನು ಸಂಪರ್ಕಿಸುವ ಮೊದಲು ಏಜೆಂಟರ ಕೈಗೆ ಸಿಲುಕುತ್ತಿದ್ದಾರೆ.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಅವರ ಹೆಸರು ಹಾಗೂ ಕಾರ್ಯ ನಿರ್ವಹಿಸುವ ಹುದ್ದೆಯ ಗುರುತಿನ ಚೀಟಿ(ಐಡಿ ಕಾರ್ಡ್)ನ್ನು ಧರಿಸಿರಬೇಕು. ಆದರೆ ತಹಸೀಲ್ದಾರ್ ಕಚೇರಿಯಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗವು ಗುರುತಿನ ಚೀಟಿಯನ್ನು ಧರಿಸಿದ್ದು ಕಾಣ ಸಿಗುವದಿಲ್ಲ. ಪರಿಣಾಮ ಸಾರ್ವಜನಿಕರು ಸಿಬ್ಬಂದಿಗಳ ಭೇಟಿಗೂ ಮೊದಲೇ ಏಜೆಂಟರು ಸಮಸ್ಯೆ ಹೊತ್ತು ಬರುವ ಜನರನ್ನು ಸಂಪರ್ಕಿಸುತ್ತಿದ್ದಾರೆ. ಹೀಗಾಗಿ ಸಿಬ್ಬಂದಿಗೆ ಅದೆಷ್ಟು ಹಣ ತಲುಪುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಏಜೆಂಟರ ಕೈ ಮತ್ತು ಕಿಸೆಗೆ ಭರ್ಜರಿ ಹಣ ಬಂದು ಬೀಳುತ್ತಿದೆ.

೮ ಹುದ್ದೆಗಳು ಖಾಲಿ: ತಹಸೀಲ್ದಾರ್ ಕಚೇರಿಯಲ್ಲಿ ಗ್ರೇಡ್-೨ ತಹಸೀಲ್ದಾರ್ ಹುದ್ದೆ ಖಾಲಿಯಿದೆ, ಅದರ ಜೊತೆ ಐವರು ಭೂಮಿ ಆಪರೇಟರ್‌ ಬದಲು ಕೇವಲ 3 ಹುದ್ದೆ ಮಾತ್ರ ಭರ್ತಿ ಇದೆ. 20 ತಲಾಟಿಗಳ ಪೈಕಿ ಕೇವಲ 15 ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಾಮಾಜಿಕ ಭದ್ರತೆ ಸೌಲಭ್ಯಗಳಾದ ಅಂಗವಿಕಲ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಪಡಿತರ ಚೀಟಿ, ಜಾತಿ ಮತ್ತು ಆದಾಯ, ಉತಾರ, ಭೂ ಹಿಡುವಳಿ ಸೇರಿ ೪೦ಕ್ಕೂ ಅಧಿಕ ಪ್ರಮಾಣ ಪತ್ರಗಳನ್ನು ಪಡೆಯಲು ತಾಲೂಕಿನ ಗ್ರಾಮಗಳ ಜನತೆ ತಹಸೀಲ್ದಾರ್ ಕಚೇರಿಗೆ ಧಾವಿಸುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಏಜೆಂಟರು ತಹಸೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿಗಳಂತೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಟ ನಡೆಸುವುದನ್ನು ಕಾಣುವ ಜನಸಾಮನ್ಯರು ಇವರನ್ನು ಹಿಡಿದರೆ ನಮ್ಮ ಕೆಲಸವಾಗುತ್ತದೆ ಎಂದು ಸಿಬ್ಬಂದಿಗಳ ಕೈಯಲ್ಲಿ ನೀಡಬೇಕಿದ್ದ ಅರ್ಜಿಗಳ ದಾಖಲೆ ಮತ್ತು ಹಣವನ್ನು ಏಜೆಂಟರ ಕೈಯಲ್ಲಿ ಕೊಟ್ಟು, ಅವರು ದಿನಾಂಕಕ್ಕೆ ಬಂದು ಕೆಲವರು ಪ್ರಮಾಣ ಪತ್ರಗಳನ್ನು ಪಡೆದರೆ ಇನ್ನೂ ಕೆಲವರು ಕಚೇರಿಗೆ ಅಲೆದು ಸುಸ್ತಾಗುತ್ತಿದ್ದಾರೆ ಎಂಬ ದೂರುಗಳಿವೆ.

ತಹಸೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿಗಳು ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಶ್ರಮಿಸುತ್ತಿದ್ದಾರೆ. ಹೀಗಾಗಿ ಏಜೆಂಟರ ಉಪಟಳದ ಘಟನೆಗಳು ಕಂಡು ಬಂದಿಲ್ಲ, ಕಂಡು ಬಂದರೆ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್‌ ಕಿರಣಕುಮಾರ ಕುಲಕರ್ಣಿ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಗೆ ಸಿಬ್ಬಂದಿಗಳು ಯಾರು, ಏಜೆಂಟರು ಯಾರು ಎಂಬುದು ತಿಳಿಯದೆ ಸುಲಿಗೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಆಡಳಿತ ವ್ಯವಸ್ಥೆ ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸುವುದರ ಜತೆಗೆ ಏಜೆಂಟರ ಹಾವಳಿ ತಪ್ಪಿಸಬೇಕು ಎಂದು ಪುರಸಭೆ ಮಾಜಿ ಸದಸ್ಯ, ವಕೀಲ ಎಂ.ಎಸ್.ಹಡಪದ ಹೇಳಿದರು.