ಆಹಾರಕ್ರಮ ಬದಲಾವಣೆ, ಜೀವನ ಶೈಲಿಯಿಂದ ಮಾರಕ ಕಾಯಿಲೆ ಉಲ್ಬಣ

| Published : Feb 07 2024, 01:50 AM IST

ಸಾರಾಂಶ

ಜೀವನ ಶೈಲಿಯಿಂದ ರೋಗಗಳು ಇಂದಿನ ವೈದ್ಯಲೋಕಕ್ಕೆ ಸವಾಲಾಗಿವೆ. ಮನುಷ್ಯ ಆಧುನಿಕನಾದಂತೆ ಆತನ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯಕ್ಕೆ ಹೆಚ್ಚಿನ ತೊಂದರೆಗಳು ಕಾಣಿಸಿಕೊಂಡು, ಆಹಾರ ಕ್ರಮದಲ್ಲಿನ ಬದಲಾವಣೆ, ದೈಹಿಕ ಚಟುವಟಿಕೆ ಇಲ್ಲದ ಜೀವನಶೈಲಿ ಹಾಗೇ ಮಾನಸಿಕ ಒತ್ತಡದಿಂದ ಅನೇಕ ರೋಗಗಳು ಶಾರೀರಿಕ ಹಾಗೂ ಮಾನಸಿಕವಾಗಿ ದಾಳಿ ಮಾಡುತ್ತವೆ.

ಕೊಪ್ಪಳ: ಆಹಾರ ಕ್ರಮದಲ್ಲಿನ ಬದಲಾವಣೆ ಹಾಗೂ ದೈಹಿಕ ಚಟುವಟಿಕೆ ಇಲ್ಲದ ಜೀವನಶೈಲಿ ಮಾರಕ ಕಾಯಿಲೆಗಳಿಗೆ ಕಾರಣವಾಗುತ್ತಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು ಟಿ. ಹೇಳಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಘಟಕ, ಎನ್.ಸಿ.ಡಿ. ಕೋಶ ಕೊಪ್ಪಳ ಸಂಯುಕ್ತ ಆಶ್ರಯದಲ್ಲಿ ಹಳೇ ಜಿಲ್ಲಾಸ್ಪತ್ರೆ ಆವರಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ವಿಶ್ವ ಕ್ಯಾನ್ಸರ್ ದಿನಾಚರಣೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತಿ ವರ್ಷ ಫೆ.4 ರಂದು ವಿಶ್ವ ಕ್ಯಾನ್ಸರ್ ದಿನಾಚರಣೆಯ ನಿಯಂತ್ರಣ ಕಾರ್ಯಕ್ರಮದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತದೆ.ಆರೈಕೆಯ ಅಂತರ ಮುಚ್ಚಿ ಎಂಬ ಘೋಷ ವಾಕ್ಯದೊಂದಿಗೆ ಈ ವರ್ಷ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಕ್ಯಾನ್ಸರ್ ಕಾಯಿಲೆ ನಿಯಂತ್ರಣದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಸಾವುನೋವುಗಳನ್ನು ತಡೆಗಟ್ಟುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಜೀವನ ಶೈಲಿಯಿಂದ ರೋಗಗಳು ಇಂದಿನ ವೈದ್ಯಲೋಕಕ್ಕೆ ಸವಾಲಾಗಿವೆ. ಮನುಷ್ಯ ಆಧುನಿಕನಾದಂತೆ ಆತನ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯಕ್ಕೆ ಹೆಚ್ಚಿನ ತೊಂದರೆಗಳು ಕಾಣಿಸಿಕೊಂಡು, ಆಹಾರ ಕ್ರಮದಲ್ಲಿನ ಬದಲಾವಣೆ, ದೈಹಿಕ ಚಟುವಟಿಕೆ ಇಲ್ಲದ ಜೀವನಶೈಲಿ ಹಾಗೇ ಮಾನಸಿಕ ಒತ್ತಡದಿಂದ ಅನೇಕ ರೋಗಗಳು ಶಾರೀರಿಕ ಹಾಗೂ ಮಾನಸಿಕವಾಗಿ ದಾಳಿ ಮಾಡುತ್ತವೆ. ಇಂತಹ ಜೀವನಶೈಲಿಯ ರೋಗಗಳಲ್ಲಿ ಕ್ಯಾನ್ಸರ್ ಮೊದಲನೇ ಸ್ಥಾನದಲ್ಲಿದೆ ಎಂದು ಹೇಳಿದರು.

ಮನುಷ್ಯನ ಯಾವುದೇ ಅಂಗಕ್ಕೂ ಬರಬಹುದಾದ ಮಾರಕ ಕಾಯಿಲೆ ಕ್ಯಾನ್ಸರ್. ನಮ್ಮ ದೇಶದಲ್ಲಿ ಪ್ರತಿ ವರ್ಷ 10 ಲಕ್ಷ ಮಂದಿ ಹೊಸದಾಗಿ ಕ್ಯಾನ್ಸರ್ ರೋಗಿಗಳ ಸಾಲಿಗೆ ಸೇರುತ್ತಿದ್ದಾರೆ. ತಂಬಾಕು ಮದ್ಯಪಾನಗಳಿಂದ ದೂರವಿರುವ ಶಿಸ್ತುಬದ್ಧ ಜೀವನ ಶೈಲಿ, ಪೌಷ್ಟಿಕ ಆಹಾರ ಸೇವನೆ, ವೈಯಕ್ತಿಕ ಸ್ವಚ್ಛತೆ, ಒಳ್ಳೆಯ ಆರೋಗ್ಯಕರ ಅಭ್ಯಾಸ, ದೈಹಿಕವಾಗಿ ಸದಾ ಚಟುವಟಿಕೆಯಿಂದ ಇರುವುದು ಹೀಗೆ ಪ್ರತಿನಿತ್ಯದ ನಮ್ಮ ಜೀವನಶೈಲಿ ಉತ್ತಮವಾಗಿ ರೂಢಿಸಿಕೊಂಡರೆ ಈ ಕಾಯಿಲೆ ತಡೆಗಟ್ಟಬಹುದು. ಗ್ರಾಮ ಮತ್ತು ನಗರಗಳಲ್ಲಿ ಕೆಲಸ ನಿರ್ವಹಿಸುವ ವೈದ್ಯಾಧಿಕಾರಿಗಳು ಮತ್ತು ಕ್ಷೇತ್ರ ಸಿಬ್ಬಂದಿಗಳು ಈ ಕ್ಯಾನ್ಸರ್ ಕಾಯಿಲೆಯ ನಿಯಂತ್ರಣದ ಬಗ್ಗೆ ಸಮುದಾಯಕ್ಕೆ ಅರಿವು ಮೂಡಿಸಿ ಕ್ಯಾನ್ಸರ್‌ಮುಕ್ತ ಕೊಪ್ಪಳ ಜಿಲ್ಲೆಯಾಗಿ ಮಾಡಲು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದರು.

ಜನಜಾಗೃತಿ ಜಾಥಾವು ಹಳೇ ಜಿಲ್ಲಾಸ್ಪತ್ರೆ ಆವರಣದಿಂದ ಅಶೋಕ ಸರ್ಕಲ್, ಜವಾಹರ ರಸ್ತೆ, ದಿವಟರ್ ಸರ್ಕಲ್, ಡಾ.ಸಿಂಪಿಲಿಂಗಣ್ಣ ರಸ್ತೆ, ಕಾರ್ಮಿಕರ ಸರ್ಕಲ್, ಬಸ್‌ನಿಲ್ದಾಣ ಮಾರ್ಗವಾಗಿ ಸಾರ್ವಜನಿಕರಿಗೆ ಕ್ಯಾನ್ಸರ್ ನಿಯಂತ್ರಣ ಘೋಷಣೆ ಕೂಗುತ್ತ, ಕರಪತ್ರ ಹಂಚುವುದರ ಮೂಲಕ ಮರಳಿ ಹಳೇ ಜಿಲ್ಲಾಸ್ಪತ್ರೆಯ ಆವರಣಕ್ಕೆ ತಲುಪಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ್ ಎಚ್., ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಪ್ರಕಾಶ ವಿ., ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರವೀಂದ್ರನಾಥ ಎಂ.ಎಚ್., ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಶಶಿಧರ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ. ಪ್ರಕಾಶ ಎಚ್., ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ವೆಂಕಟೇಶ, ಕೊಪ್ಪಳ ತಾಲೂಕು ಆರೋಗ್ಯ ಅಧಿಕಾರಿ ಡಾ.ರಾಮಾಂಜನೇಯ, ಡಾ.ಜಯಶ್ರೀ ಕಮತೆ, ಜಿಲ್ಲಾ ಎನ್.ಸಿ.ಡಿ. ಕಾರ್ಯಕ್ರಮ ಸಂಯೋಜಕರು, ವೈದ್ಯಾಧಿಕಾರಿ, ಡಾ. ಮಹೇಶ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ, ಜಿಲ್ಲಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಲ್.ವಿ.ಸಜ್ಜನರ್ ಹಾಗೂ ವಿವಿಧ ವೃಂದದ ಅಧಿಕಾರಿಗಳು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.