ಪ್ರಭಾವಿ ವ್ಯಕ್ತಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳೇ ರೈತನ ಜಮೀನಿನ ಮೇಲೆ ಅನಧಿಕೃತವಾಗಿ ರಸ್ತೆ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿ ನೊಂದ ರೈತ. ತಾಲೂಕು ಕಚೇರಿ ಎದುರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಚಿನ್ನಾಯನಕನಹಳ್ಳಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪ್ರಭಾವಿ ವ್ಯಕ್ತಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳೇ ರೈತನ ಜಮೀನಿನ ಮೇಲೆ ಅನಧಿಕೃತವಾಗಿ ರಸ್ತೆ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿ ನೊಂದ ರೈತ. ತಾಲೂಕು ಕಚೇರಿ ಎದುರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿರುವ ಘಟನೆ ತಾಲೂಕಿನ ಚಿನ್ನಾಯನಕನಹಳ್ಳಿಯಲ್ಲಿ ನಡೆದಿದೆ.

ಗಂಜಾಂ ಗ್ರಾಮದ ರೈತ ನಂಜಪ್ಪರಿಗೆ ಚಿನ್ನಾಯಕನಹಳ್ಳಿಯ ಸರ್ವೇ ನಂ 173/01 ರಲ್ಲಿ 30 ಕುಂಟೆ ಜಮೀನಿದ್ದು, ಈಗಷ್ಟೇ ಆ ಜಮೀನನ್ನು ಹದ್ದುಬಸ್ತು ಮಾಡಿಸಿಕೊಂಡಿರುವುದಾಗಿ ತಿಳಿಸಿದ್ದಾನೆ. ಈ ರೈತನ ಜಮೀನಿಂದ ಕೂಗಳತೆ ದೂರದಲ್ಲಿ ಪ್ರಭಾವಿ ವ್ಯಕ್ತಿಯೋರ್ವ ಫಾರ್ಮ್ ಹೌಸ್ ನಿರ್ಮಿಸಿಕೊಂಡಿದ್ದು, ಈ ಪಾರ್ಮ್ ಹೌಸ್‌ಗೆ ಅನಧಿಕೃತವಾಗಿ ರಸ್ತೆ ನಿರ್ಮಿಸಿಕೊಡಲಾಗುತ್ತಿದೆ ಎಂಬ ರೈತ ದೂರುತ್ತಿದ್ದಾನೆ.

ಪ್ರಭಾವಿ ವ್ಯಕ್ತಿಯ ಪ್ರಭಾವದಿಂದಾಗಿ ಸರ್ಕಾರದ ಹಣದಿಂದಲೇ ಕಂದಾಯ ಇಲಾಖೆ ಅಧಿಕಾರಿಗಳು ರಸ್ತೆ ನಿರ್ಮಿಸಿಕೊಡುತ್ತಿರುವುದಾಗಿ ಹೇಳಲಾಗುತ್ತಿದೆ. ತನ್ನ ಜಮೀನು ಒತ್ತವರಿ ಮಾಡಿ ಜಮೀನಲ್ಲಿದ್ದ ಕಬ್ಬು ಸೇರಿದಂತೆ ಬೆಲೆ ಬಾಳುವ ಮರಗಳನ್ನು ಕತ್ತರಿಸಿ ಹಾಕಿದ್ದಾರೆಂದು ರೈತ ನಂಜಪ್ಪ ಆರೋಪಿಸಿದ್ದಾರೆ.

ಈ ಅನಧಿಕೃತ ರಸ್ತೆ ನಿರ್ಮಾಣದ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದಕ್ಕೆ ಪೊಲೀಸರನ್ನು ಕರೆಸಿ ನನಗೆ ಬೆದರಿಕೆ ಹಾಕಿರುವುದಾಗಿ ರೈತ ತನ್ನ ಅಳಲು ತೋಡಿಕೊಳ್ಳುತ್ತಿದ್ದಾನೆ. ಇದೀಗ ಅನಧಿಕೃತವಾಗಿ ನಿರ್ಮಿಸಿರುವ ರಸ್ತೆ ಮಧ್ಯೆ ರೈತ ನಂಜಪ್ಪ ಕುಳಿತು ತನಗೆ ನ್ಯಾಯ ಕೊಡಿಸಿ ಎಂದು ತಾಲೂಕು ಆಡಳಿತಕ್ಕೆ ಒತ್ತಾಯಿಸಿದ್ದಾರೆ. ನ್ಯಾಯ ಸಿಗದಿದ್ದರೆ ತಾನು ಸೇರಿ ತನ್ನ ಕುಟುಂಬದವರು ತಾಲೂಕು ಕಚೇರಿ ಮುಂದೆ ವಿಷ ಕುಡಿಯುವುದಾಗಿ ಎಚ್ಚರಿಕೆ ನೀಡಿದ್ದಾನೆ.

ತನ್ನ ಹಾಗು ತನ್ನ ಕುಟುಂಬದ ಸಾವಿಗೆ ತಾಲೂಕು ಆಡಳಿತ, ಅಧಿಕಾರಿಗಳ ದೌರ್ಜನ್ಯ ಮತ್ತು ಬೆದರಿಕೆಯೇ ಕಾರಣ ಎಂದು ಎಚ್ಚರಿಕೆ ಸಹ ನೀಡಿದ್ದಾನೆ.