ಸರ್ಕಾರಿ ಶಾಲೆಗಳ ಉಳಿವಿಗಾಗಿ ಆಂದೋಲನ

| Published : Jan 31 2025, 12:47 AM IST

ಸಾರಾಂಶ

ಸರ್ಕಾರಿ ಶಾಲೆಗಳು ಶಿಕ್ಷಕರ ಕೊರತೆ ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಮಕ್ಕಳ ದಾಖಲಾತಿಗಳಿಲ್ಲದೆ ಉಳಿವಿಗೆ ಗಂಡಾಂತರ ಎದುರಿಸುತ್ತಿರುವುದರಿಂದ ಸರ್ಕಾರಿ ಶಾಲೆಗಳ ಉಳಿವಿಗಾಗಿ ವಿವಿಧ ಸಂಘಟನೆಗಳ ಮೂಲಕ ಸರ್ಕಾರ ಹಾಗೂ ಜನಪ್ರತಿನಿಧಿಗಳನ್ನು ಎಚ್ಚರಿಸುವ ನಿಟ್ಟಿನಲ್ಲಿ ಆಂದೋಲವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಬಿಳಿಗೆರೆ ಕೃಷ್ಣಮೂರ್ತಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಸರ್ಕಾರಿ ಶಾಲೆಗಳು ಶಿಕ್ಷಕರ ಕೊರತೆ ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಮಕ್ಕಳ ದಾಖಲಾತಿಗಳಿಲ್ಲದೆ ಉಳಿವಿಗೆ ಗಂಡಾಂತರ ಎದುರಿಸುತ್ತಿರುವುದರಿಂದ ಸರ್ಕಾರಿ ಶಾಲೆಗಳ ಉಳಿವಿಗಾಗಿ ವಿವಿಧ ಸಂಘಟನೆಗಳ ಮೂಲಕ ಸರ್ಕಾರ ಹಾಗೂ ಜನಪ್ರತಿನಿಧಿಗಳನ್ನು ಎಚ್ಚರಿಸುವ ನಿಟ್ಟಿನಲ್ಲಿ ಆಂದೋಲವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಬಿಳಿಗೆರೆ ಕೃಷ್ಣಮೂರ್ತಿ ತಿಳಿಸಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕ್ಷೀಣಿಸಿದಂತೆ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ. ಈಗಾಗಲೇ ರಾಜ್ಯದಲ್ಲಿ ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಸರ್ಕಾರ ಖಾಸಗಿ ಮತ್ತು ಸರ್ಕಾರಿ ಎಂಬ ಭೇದ ಮಾಡದೆ ಶಾಲೆಗಳನ್ನು ತಾಯಿಯಂತೆ ಪೋಷಿಸಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶ್ರೀಮಂತರಿಗೆ ಸರ್ಕಾರಿ ಶಾಲೆಗಳ ಅವಶ್ಯಕತೆ ಹೆಚ್ಚು ಇಲ್ಲ. ಆದರೆ ಧ್ವನಿ ಇಲ್ಲದವರು ಮಧ್ಯಮ ಮತ್ತು ಬಡ ವರ್ಗದ ಕುಟುಂಬಗಳ ಮಕ್ಕಳಿಗೆ ಸರ್ಕಾರಿ ಶಾಲೆಗಳೇ ಆಧಾರ. ರಾಜ್ಯದಲ್ಲಿ ೫೩ಸಾವಿರ ಶಿಕ್ಷಕರ ಕೊರತೆ ಇದ್ದು ಕೆಲ ಶಾಲೆಗಳಂತೂ ಯಾವೊಂದು ಮೂಲಭೂತ ಸೌಲಭ್ಯಗಳಿಲ್ಲದೆ ಮಕ್ಕಳು ಶಿಕ್ಷಣ ಕಲಿಯುತ್ತಿದ್ದಾರೆ. ೨೦೨೩ರ ನಂತರ ೨೮೭ಶಾಲೆಗಳು ಮುಚ್ಚಿ ಹೋಗಿವೆ. ಶೈಕ್ಷಣಿಕ ವರ್ಷದಲ್ಲಿ ೩೫೦೦ಕ್ಕೂ ಹೆಚ್ಚು ಶಾಲೆಗಳಲ್ಲಿ ಶೇ.೧೦ಕ್ಕಿಂತ ಕಡಿಮೆ ಮಕ್ಕಳು ಇರುವ ಬಗ್ಗೆ ವರದಿಯಾಗಿದೆ. ಈ ಎಲ್ಲಾ ಅಂಕಿ ಅಂಶಗಳು, ಸರ್ಕಾರಿ ಶಾಲೆಗಳು ಊಹಿಸಲೂ ಆಗದ ವೇಗದಲ್ಲಿ ಮುಚ್ಚಿಹೋಗುತ್ತಿರುವುದನ್ನು ಸೂಚಿಸುತ್ತಿವೆ. ಸರ್ಕಾರಿ ಶಾಲೆಗಳನ್ನು ಮುಚ್ಚಿಸುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮವನ್ನು ತುರುಕುವ ಮೂಲಕ ಕೆಪಿಎಸ್ ಹೆಸರಿನ ಇಂಗ್ಲೀಷ್ ಮಾಧ್ಯಮದ ಶಾಲಾ ಕಾಂಪ್ಲೆಕ್ಸ್‌ಗಳನ್ನು ಕಟ್ಟಿನಿಲ್ಲಿಸುತ್ತಿದೆ. ಈ ನವ ಇಂಗ್ಲೀಷ್ ಮಾಧ್ಯಮ ಶಾಲೆಗಳು ಕನ್ನಡದ ಅಸ್ತಿತ್ವವ್ನೇ ನಿವಾರಿಸಿ ಬಿಡುವಷ್ಟು ಅಪಾಯಕಾರಿಯಾಗಿವೆ. ಅಷ್ಟೇ ಅಲ್ಲದೆ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್ ಮಾಧ್ಯವನ್ನಾಗಿ ಬದಲಿಸುವುದರಿಂದ ಜೀವಮಾನವೀಡಿ ಕನ್ನಡ ಮಾಧ್ಯಮದ ಮೂಲಕ ಬೋಧಿಸುವ ಸರ್ಕಾರಿ ಶಾಲೆಗಳಿಗಾಗಿ ಹೋರಾಡಿದ ಹಿರಿಯ ಕವಿಗಳಿಗೆ ತೋರಿದ ಅಗೌರವಾಗಿದೆ. ಆದ್ದರಿಂದ ಈ ಎಲ್ಲಾ ಅಂಶಗಳನ್ನು ಗಮನಿಸಿ ಸರ್ಕಾರಿ ಶಾಲೆಗಳಿಗೆ ಮರುಜೀವ ಕೊಡಬೇಕೆಂದು ನಮ್ಮ ಎಲ್ಲಾ ಸಂಘಟನೆಗಳು ಹಕ್ಕೋತ್ತಾಯಗಳ ಮೂಲಕ ಸ್ಥಳೀಯ ಶಾಸಕರು, ಎಂಎಲ್‌ಸಿ ಮತ್ತು ಎಂಪಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡಲಾಗುವುದು. ಸರ್ಕಾರಿ ಶಾಲೆಗಳನ್ನು ಭೇಟಿ ಮಾಡಿ ಅಲ್ಲಿನ ಸಮಸ್ಯೆಗಳನ್ನು ತಿಳಿದು ಸರ್ಕಾರದ ಗಮನಕ್ಕೆ ತಂದು ಶಾಲೆಗಳ ಉಳಿವಿಗಾಗಿ ಹೋರಾಟ ಮಾಡಲಾಗುವುದು ಎಂದರು. ಈ ವೇಳೆ ಮತ್ತೋರ್ವ ಸಾಹಿತಿ ಗಂಗಾಧರ್ ಮಾಕಳ್ಳಿ ಮಾತನಾಡಿ ಕಸಾಪ, ರಾಜ್ಯ ರೈತ ಸಂಘ, ಹಸಿರು ಸೇನೆ, ಪ್ರಾಂತ್ಯ ರೈತ ಸಂಘ, ದಲಿತ ಸಂಘಟನೆ, ಬೆಲೆ ಕಾವಲು ಸಮಿತಿ ಇತರೆ ಸಂಘಟನೆಗಳು ಒಗ್ಗೂಡಿ ಈ ಆಂದೋಲನ ನಡೆಸಲು ತೀರ್ಮಾನಿಸಲಾಗಿದ್ದು ಶಾಲೆಗಳ ಉಳಿವಿಗಾಗಿ ಮೂರು ಹಕ್ಕೊತ್ತಾಯಗಳನ್ನು ಒತ್ತಾಯಿಸಲಾಗುತ್ತಿದೆ. ಉನ್ನತ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೂ ನೀಡಬೇಕು. ಸರ್ಕಾರಿ ಶಾಲೆಗಳಿಗೆ ಅಗತ್ಯ ಶಿಕ್ಷಕರನ್ನು ಶೈಕ್ಷಣಿಕ ವರ್ಷದಿಂದಲೇ ನೇಮಕ ಮಾಡಬೇಕು. ಕಟ್ಟಡ ಸೇರಿದಂತೆ ಎಲ್ಲಾ ಮುಳಭೂತಸೌಲಭ್ಯಗಳನ್ನು ಒದಗಿಸಬೇಕು. ಕಾರ್ಯನಿರತ ಶಿಕ್ಷಕರನ್ನು ಶಿಕ್ಷಣೇತರ ಕೆಲಸಗಳಿಗೆ ಬಳಸಿಕೊಳ್ಳಬಾರದು ಎಂಬಿತ್ಯಾದಿ ಈ ಹಕ್ಕೋತ್ತಾಯಗಳನ್ನು ಶಾಸಕರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳಿಗೆ ಮನವಿ ಮೂಲಕ ನೀಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಾಂತ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಬಸವಣ್ಣ, ಬೆಲೆಕಾವಲು ಸಮಿತಿ ಶ್ರೀಕಾಂತ್ ಕೆಳಹಟ್ಟಿ, ಕಸಾಪ ಕಾರ್ಯದರ್ಶಿ ಶಂಕರಪ್ಪ, ಸೌಹಾರ್ಧ ತಿಪಟೂರು ಅಲ್ಲಾಭಕಾಶ್, ರೈತ ಸಂಘದ ಮಲ್ಲಿಕಾರ್ಜುನಯ್ಯ, ನಾಗತೀಹಳ್ಳಿ ಡೈರಿ ಬಸವರಾಜು ಮತ್ತಿತರರಿದ್ದರು.