ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಸಮಾಜದಲ್ಲಿ ಭ್ರಷ್ಟಾಚಾರ ಮುಗಿಲು ಮಟ್ಟಿದೆ. ಶಾಸಕಾಂಗ, ಕಾರ್ಯಾಂಗಗಳು ಹಳಿ ತಪ್ಪಿದ್ದು, ಹೀಗಾಗಿ ನ್ಯಾಯಾಂಗ, ಪತ್ರಿಕಾರಂಗ ಚಳಿ ಬಿಟ್ಟು ಕೆಲಸ ಮಾಡಿದಲ್ಲಿ ಈ ಎರಡು ಅಂಗಗಳನ್ನು ಸರಿಪಡಿಸಿದರೆ ಸಮಾಜ ತಿದ್ದಲು ಸಾಧ್ಯ ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾ. ಬಿ.ವೀರಪ್ಪ ಹೇಳಿದರು.ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಸಾರ್ವಜನಿಕ ಆಡಳಿತದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಪಾತ್ರ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಬೇರೂರಿರುವ ಭ್ರಷ್ಟಾಚಾರ ನಿರ್ಮೂಲನೆಗೆ ಆಂದೋಲನ ಮಾಡಬೇಕಾದ ಪರಿಸ್ಥಿತಿ ಇದೆ ಎಂದರು.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾ ರಂಗವು ಶಿಸ್ತು ಬದ್ಧವಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದಲ್ಲಿ ಜನರಿಗೆ ಉತ್ತಮ ಸೇವೆ ಕೊಡಲು ಮತ್ತು ಆಡಳಿತಕ್ಕೆ ಚುರುಕು ಮುಟ್ಟಿಸಲು ಸಾಧ್ಯ. ಭ್ರಷ್ಟಾಚಾರ ನಿರ್ಮೂಲನೆ ತಾವು ಪಣತೊಟ್ಟಿದ್ದು ತಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದರು.ಅಧಿಕಾರದಲ್ಲಿದ ಮುಖ್ಯಮಂತ್ರಿ, ಸಚಿವರು, ನ್ಯಾಯಾಧೀಶರನ್ನೆ ಜೈಲಿಗೆ ಕಳುಹಿಸಿದ ಖ್ಯಾತಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಗಿದೆ. ಹೀಗಾಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಅಧಿಕಾರಿಯಿಂದ ಹಿಡಿದು ಗ್ರೂಪ್ ‘ಡಿ’ ಸಿಬ್ಬಂದಿ ವರೆಗೆ ಪ್ರತಿಯೊಬ್ಬರು ಯಾವುದೇ ದಾಕ್ಷಿಣ್ಯಕ್ಕೆ ಒಳಗಾಗದೆ ಕಾರ್ಯನಿರ್ವಹಿಸಿದಲ್ಲಿ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಲೋಕಾಯುಕ್ತ ಪೊಲೀಸರು ಚುರುಕಿನಿಂದ ಕೆಲಸ ಮಾಡಬೇಕಿದೆ ಎಂದರು.
ನಾನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷನ್ನಾಗಿದ್ದ ಸಂದರ್ಭದಲ್ಲಿ ರಾಜ್ಯದಾದ್ಯಂತ 6 ಲೋಕ್ ಅದಾಲತ್ ಕಾರ್ಯಕ್ರಮ ಆಯೋಜಿಸಿ ಎಲ್ಲಾ ಹಂತದ ನ್ಯಾಯಾಧೀಶರ ಸಹಕಾರದಿಂದ ಸುಮಾರು 1.80 ಕೋಟಿ ಪ್ರಕರಣಗಳನ್ನು ವಿಲೇವಾರಿ ಮಾಡುವ ಮೂಲಕ ಸಂತ್ರಸ್ತರಿಗೆ ನ್ಯಾಯ ದೊರಕಿಸಿದ್ದೆ. ಹಿಂದೆ ನಾನು ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಸಂದರ್ಭದಲ್ಲಿ ಎಸಿಬಿ ರದ್ದುಪಡಿಸಿ ಲೋಕಾಯುಕ್ತ ಸಂಸ್ಥೆ ಮರುಸ್ಥಾಪನೆಗೆ ಆದೇಶ ಮಾಡಿದ್ದೆ. ಕಾಕತಾಳಿಯವೆಂಬಂತೆ ಅದೇ ಸಂಸ್ಥೆಯಲ್ಲಿ ಇಂದು ಉಪ ಲೋಕಾಯುಕ್ತನಾಗಿರುವೆ ಎಂದರು.ಸಂಘ-ಸಂಸ್ಥೆಗಳಿಗೆ ಎಚ್ಚರಿಕೆ:
ಲೋಕಾಯುಕ್ತ ಸಂಸ್ಥೆಯಲ್ಲಿ ಸುಮಾರು 20 ಸಾವಿರ ಪ್ರಕರಣಗಳಿವೆ. ಇದರಲ್ಲಿ ಬಹುತೇಕ ಪ್ರಕಣಗಳು ಮೇಲ್ನೋಟಕ್ಕೆ ಸುಳ್ಳು ಆರೋಪಗಳನ್ನು ಹೊಂದಿವೆ. ಶಾಸಕಾಂಗ, ಕಾರ್ಯಾಂಗದ ದಯನೀಯ ಸ್ಥಿತಿಯನ್ನು ಲಾಭ ಮಾಡಿಕೊಂಡ ಕೆಲ ಸಂಘ-ಸಂಸ್ಥೆಗಳು ಕೊಡೆಯಂತೆ ಬೆಳೆದುಕೊಂಡಿವೆ. ತಮ್ಮ ಕಾರಿನ ಮೇಲೆ ಸಂಘಟನೆ ನಾಮಫಲಕ ಹಾಕಿಕೊಂಡು ರಾಜಾರೋಷವಾಗಿ ತಿರುಗಾಡುತ್ತ ಅಧಿಕಾರಿಗಳನ್ನು ಹೆದರಿಸಿ ಬೆದರಸಿ ಹಣ ದೋಚುತ್ತಿದ್ದಾರೆ. ಸುಳ್ಳು ಪ್ರಕರಣ ದಾಖಲಿಸುವ ಸಂಘ-ಸಂಸ್ಥೆಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.ಹಳ್ಳಿಗೆ ಹೋಗಿ ಅರಿವು ಮೂಡಿಸಿ:
ಜಿಲ್ಲೆಯಲ್ಲಿರುವ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಳ್ಳಿ-ಹಳ್ಳಿಗೆ ಸಂಚರಿಸಿ ಅರಿವು ಮೂಡಿಸಬೇಕು. ಲೋಕಾಯುಕ್ತ ಪೊಲೀಸರ ಸಹಕಾರ ಪಡೆದು ಹಾಸ್ಟೆಲ್, ಶಾಲೆ, ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ ಅವರಿಗೆ ಉಪ ಲೋಕಾಯುಕ್ತರು ನಿರ್ದೇಶನ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮೋಹನ ಬಸಪ್ಪ ಬಾಡಗಂಡಿ ಅವರು ಮಾತನಾಡಿದರು.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಅಪರ ನಿಬಂಧಕರಾದ ಜೆ.ವಿ.ವಿಜಯಾನಂದ, ಗಿರೀಶ ಭಟ್ ಕೆ., ಅರವಿಂದ ಎನ್.ವಿ., ನ್ಯಾ.ಶ್ರೀನಿವಾಸ ನವಲೆ, ಸೇರಿದಂತೆ ಜಿಲ್ಲೆಯ ವಿವಿಧ ಶ್ರೇಣಿಯ ನ್ಯಾಯಾಧೀಶರು ಭಾಗವಹಿಸಿದ್ದರು. ಮೂರನೇ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಧೀಶ ಮೊಹಮ್ಮದ್ ಮುಜೀರ್ ಉಲ್ಲಾ ಸಿ.ಜಿ. ಅವರು ಸ್ವಾಗತಿಸಿದರು. ಕಲಬುರಗಿ ಲೋಕಾಯುಕ್ತ ಎಸ್.ಪಿ. ಬಿ.ಕೆ.ಉಮೇಶ ವಂದಿಸಿದರು.